Site icon Ullalavani

ಮದ್ಯಪಾನದಿಂದ ಮನುಷ್ಯನ ಜೀವನ ವ್ಯರ್ಥ: ಸತ್ಯಶಂಕರ ಬೊಳ್ಳಾವ

UN NETWORKS

ಉಳ್ಳಾಲ: ಮದ್ಯಪಾನದಂತಹ ಮಹಾ ಪಿಡುಗುವಿನಿಂದ ಮನುಷ್ಯ ತನ್ನ ಜೀವನವನ್ನು ವ್ಯರ್ಥ ಮಾಡುತ್ತಿದ್ದು ಇದರಿಂದ ಮುಕ್ತರಾಗಿ ನವಜೀವನವನ್ನು ಸ್ವೀಕರಿಸುವಲ್ಲಿ ಪ್ರತಿಯೊಬ್ಬ ಶಿಬಿರಾರ್ಥಿಗಳ ಅದ್ಯ ಕರ್ತವ್ಯ ಎಂದು ಕೋಟೆಕಾರ್ ಶ್ರೀ ಶೃಂಗೇರಿ ಶಾರದಾ ಶಾಖಾ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿವಿಧ ಸಂಘಟನೆಗಳ ಸರಕಾರದಲ್ಲಿ ಕೊಲ್ಯ ಶ್ರೀದೇವಿ ಮೂಕಾಂಬಿಕಾ ದೇವಸ್ಥಾನದಲ್ಲಿ ಎಂಟು ದಿನ ನಡೆಯಲಿರುವ 1263ನೇ ಮದ್ಯವರ್ಜನ ಶಿಬಿರ ಬುಧವಾರ ಉದ್ಘಾಟಿಸಿ ಮಾತನಾಡಿದರು.
ಕೆಲವು ಕೋಟಿ ಪುಣ್ಯದ ಫಲವಾಗಿ ಮನುಷ್ಯ ಜನ್ಮ ಪಡೆದಿದ್ದೇವೆ. ಇಂತಹ ಮಹಾ ಪಿಡುಗಗಳಿಂದ ನಮ್ಮ ಜಿಈವನವನ್ನು ಹಳು ಮಾಡುತ್ತಿದ್ದು, ಉತ್ತಮ ರೀತಿಯಲ್ಲಿ ಬದುಕುವ ಮೂಲಕ ನಾವು ಸಮಾಜದಲ್ಲಿ ಗುರುತಿಸಿಕೊಳ್ಳುವಂತಗಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ ಕೆ.ನೆಲ್ಯಾಡಿ ಮಾತನಾಡಿ, ಅಮಲು ವ್ಯಸನಕ್ಕೆ ರಾಜಕೀಯ, ಜಾತಿ, ಧರ್ಮದ ಭೇದವಿಲ್ಲ. ಆದರೆ ಈ ಚಟ ಸಮಾಜ, ಕುಟುಂಬಕ್ಕೆ ಮಾರಕವಾಗಿದೆ. ಇಂದು ಯುವಜನತೆ ಮದ್ಯವ್ಯಸನಕ್ಜೆ ಬಲಿಯಾಗಿ ದಾರಿ ತಪ್ಪುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಯೋಜನೆ ವತಿಯಿಂದ ಶಾಲೆಗಳಲ್ಲಿ ಮಾಹಿತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಶ್ರೀದೇವಿ ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿ ಮಧುಸೂದನ್ ಅಯ್ಯರ್ ಮಾತನಾಡಿ, ಮದ್ಯಪಾನ ಮಾಡುವವರು ಸತ್ಯ ಹೇಳಿದರೂ ಜನ ನಂಬುವುದಿಲ್ಲ, ಅವರಿಗೆ ಮದ್ಯವೇ ಶಾಪವಾಗಿದೆ. ಮದ್ಯಪಾನ ಸೇವನೆಗೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಿರುವುದರಿಂದ ಕೇವಲ ಜನಜಾಗೃತಿ ಸಾಕಾಗದು. ದೊಡ್ಡ ಮಟ್ಟದ ಆಂದೋಲನ ನಡೆದು ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕಾಗುತ್ತದೆ. ಮದ್ಯಪಾನ ಮುಕ್ತರಾಗಿ ಹೊರಬಂದವರಿಗೆ ನಮ್ಮ ಸಂಸ್ಥೆಯಲ್ಲಿ ಕೆಲಸ ಕೊಡಲು ಸದಾ ಸಿದ್ಧನಾಗಿದ್ದೇನೆ. ಶಿಬಿರ ಉತ್ತಮ ಮೂವರು ನಾಯಕರಿಗೆ ವೈಯುಕ್ತಿಕ ನೆಲೆಯಲ್ಲಿ ಪ್ರಶಸ್ತಿ ನೀಡಲಾಗಿದೆ ಎಂದರು.

ಸೋಮೇಶ್ವರ ವಲಯ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಕೃಷ್ಣ ಗಟ್ಟಿ, ಸೋಮೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಶಂಕರ್ ಕುಮಾರ್, ಉಳ್ಳಾಲ ಠಾಣೆಯ ಎಸ್.ಐ. ಗುರುವಪ್ಪ ದಾಂತಿ, ತಾಲೂಕು ಪಂಚಾಯಿತಿ ಸದಸ್ಯ ರವಿಶಂಕರ್, ಜನಜಾಗೃತಿ ವೇದಿಕೆ ಅಧ್ಯಕ್ಷ ಕಿಶೋರ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಯೋಜನಾಧಿಕಾರಿ ಉಮರಬ್ಬ, ದೇರಳಕಟ್ಟೆ ವಿದ್ಯಾರತ್ನ ಶಾಲೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಳ್ಳಾಲ ಜನಜಾಗೃತಿ ವೇದಿಕೆ ಅಧ್ಯಕ್ಷ ಸೀತಾರಾಮ ಬಂಗೇರ, ಸೋಮೇಶ್ವರ ಒಕ್ಕೂಟದ ಅಧ್ಯಕ್ಷ ಸತೀಶ್ ದೀಪಂ, ಡಾ.ಫಿಲೋಮಿನ, ಚಂದ್ರಶೇಖರ್ ಉಚ್ಚಿಲ್ ಮೊದಲಾದವರು ಉಪಸ್ಥಿತರಿದ್ದರು.
ಮೇಲ್ವಿಚಾರಕಿ ಸುಮಲತಾ ಸ್ವಾಗತಿಸಿದರು. ಶಿಭಿರಾಧಿಕಾರಿ ದೇವಿ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜತಾ ವಂದಿಸಿದರು. ಆನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Exit mobile version