ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಅಲ್ಲಿ ಮನೆಗಳೆಲ್ಲಾ ನೆಲಸಮ ಆಗಿದೆ. ಮೊಬೈಲ್ ಸಂಪರ್ಕ ಸಿಗುತ್ತಿಲ್ಲ. ಆತಂಕಕ್ಕೀಡಾಗಿದ್ದೇವೆ ಹೋಗಲು ರೈಲ್ವೇ ಸಂಪರ್ಕ ಇಲ್ಲ. ಇದು ನೇಪಾಳದ ನಿವಾಸಿ, ತೊಕ್ಕೊಟ್ಟುವಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಅಳಲಾಗಿದೆ.
ಶನಿವಾರ ಮತ್ತು ಭಾನುವಾರ ನೇಪಾಳ ಮತ್ತು ದೇಶದ ಕೆಲವೆಡೆ ಸಂಭವಿಸಿದ ಭೂಕಂಪದಲ್ಲಿ 2000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಸುದ್ದಿ ತಿಳಿದು ಊರು ಬಿಟ್ಟು ಕೆಲಸ ನಿರ್ವಹಿಸುತ್ತಿರುವ ನೇಪಾಳ ಮೂಲದವರು ಆತಂಕಕ್ಕೀಡಾಗಿ, ಕಂಗಾಲಾಗಿದ್ದಾರೆ. ತೊಕ್ಕೊಟ್ಟು ಜಂಕ್ಷನ್ನಿನ ಫುಡ್ ಪಾಯಿಂಟ್ ಹೊಟೇಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೂವರು ಮತ್ತು ಅದೇ ಊರಿನ ಮಂಗಳೂರಿನಲ್ಲಿ ನಿರ್ವಹಿಸುತ್ತಿರುವ ಇಬ್ಬರ ಮನೆಗಳಿಗೆ ಹಾನಿ ಸಂಭವಿಸಿ ಮನೆಮಂದಿ ಬೀದಿಪಾಲಾಗಿರುವುದಾಗಿ ಹೇಳಿದ್ದಾರೆ.
ಕಳೆದ ಆರು ವರ್ಷಗಳಿಂದ ಮಂಗಳೂರು , ಸದ್ಯ ತೊಕ್ಕೊಟ್ಟುವಿನ ಹೊಟೇಲಿನಲ್ಲಿ ಕಾರ್ಮಿಕನಾಗಿರುವ ನೇಪಾಳದ ದಾರಿಗ್ ಜಿಲ್ಲೆ ನಿವಾಸಿ 50ರ ಹರೆಯದ ನಾರಾಯಣ್ ಮಾತನಾಡಿ ಮಧ್ಯಾಹ್ನ ವೇಳೆ ಟಿ.ವಿ.ಯಲ್ಲಿ ಸುದ್ಧಿ ತಿಳಿದು ಗಾಬರಿಗೊಂಡೆವು. ಮನೆಮಂದಿಗೆ ಫೋನಾಯಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಸಂಜೆ ವೇಳೆ ಮನೆಯಿಂದಲೇ ಕರೆ ಬಂದಿತ್ತು. ಇರುವ ಮೂರು ಮನೆಗಳು, ಗದ್ದೆಗಳು ನೆಲಸಮವಾಗಿದ್ದು, ಜಾನುವಾರುಗಳೆಲ್ಲವೂ ಬಲಿಯಾಗಿದೆ . ಮನೆಯವರು ಅಪಾಯವರಿತು ಹೊರ ಓಡಿಬಂದ ಪರಿಣಾಮ ರಕ್ಷಣೆಗೊಳಗಾಗಿದ್ದಾರೆ. ಹಿರಿ ಸಹೋದರನೋರ್ವನ ಕಾಲಿಗೆ ಗಾಯವಾಗಿದೆ. ಕೂಡಲೇ ಮನೆಗೆ ಬರುವಂತೆ ತಿಳಿಸಿದ್ದಾರೆ. ಆದರೆ ಹೋಗಲು ಸರಿಯಾದ ವ್ಯವಸ್ಥೆಗಳಿಲ್ಲ. ಹೂಡಿಟ್ಟ ಹಣವೂ ಇಲ್ಲ. ತಿಂಗಳು ಮುಗಿಯದೆ ಕೈಯಲ್ಲಿ ಬಿಡಿಗಾಸೂ ಇಲ್ಲವಾಗಿದೆ. ಮಾಲೀಕರಲ್ಲಿ ಕೇಳಿದ್ದೇವೆ. ನೀಡುವ ಭರವಸೆಯಿಂದ ಸೋಮವಾರದಂದು ರೈಲಿನಲ್ಲಿ ಹೋಗುತ್ತೇವೆ. ಗೋರಖಪುರದವರೆಗೆ ತೆರಳಿ ಅಲ್ಲಿಂದ ಬಸ್ಸಿನ ಮೂಲಕ ಹೋಗಲಿದ್ದೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ನೇಪಾಳದ ದಾರಿಗ್ ಜಿಲ್ಲೆಯ ಮಹೇಶ್ ಮಾತನಾಡಿ `ತನ್ನ ಸಹೋದರಿ ಮತ್ತು ಆಕೆ ಇಬ್ಬರು ಪುತ್ರರನ್ನು ಕಳೆದುಕೊಂಡಿದ್ದಾನೆ. ಇರುವ ಮನೆಯನ್ನು ಕಳೆದುಕೊಂಡಿದ್ದು, ಊರಿಗೆ ಹೋದರೂ ಏನು ಮಾಡುವುದು ಎಂದು ತೋಚುತ್ತಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾನೆ.
ಆತನ ಸ್ನೇಹಿತ ಗೋಪಿ ಗುಝೇಲ್ ಮಾತನಾಡಿ ರಮೇಶ್, ಗೋಪಿ, ನಾರಾಯಣ್, ಮಹೇಶ್ ನಿವಾಸಿ ಎಲ್ಲರೂ ಮಂಗಳೂರಿನಲ್ಲಿದ್ದೇವೆ. ಎಲ್ಲರ ಮನೆಗಳು ಧರಾಶಾಹಿಯಾಗಿದೆ. ಇಬ್ಬರು ಸಹೋದರರು ಮಂಗಳೂರಿನಲ್ಲಿ ಕಳೆದ 6 ವರ್ಷಗಳಿಂದ ದುಡಿಯುತ್ತಿದ್ದೇವೆ. ಇಲ್ಲಿ ದುಡಿದು ಸಂಪಾದಿಸಿದ ಹಣದಲ್ಲಿ ಮೂರು ಕುಟುಂಬಗಳನ್ನು ನಿರ್ವಹಿಸುತ್ತಿದ್ದೇವೆ. ಆದರೆ ಅಲ್ಲಿ ಕಟ್ಟಿದ ಮನೆಗಳೆಲ್ಲಾ ನೆಲಸಮ ಆಗಿದೆ. ದುಡಿದ ಹಣದೊಂದಿಗೆ ಊರಿಗೆ ಹೋಗೋಣ ಎಂದರೆ, ಇದೀಗ ಮನೆಯೇ ಇಲ್ಲವಾಗಿದೆ. ಮನೆಯವರು ಮತ್ತೆ ಮನೆ ನಿರ್ಮಾಣಕ್ಕೆಂದು ಹೆಚ್ಚಿನ ಹಣ ತರಲು ಹೇಳುತ್ತಿದ್ದಾರೆ. ಎಲ್ಲಿಂದ ಕೊಂಡೊಯ್ಯುವುದು ಎಂದು ಅರ್ಥ ಆಗುತ್ತಿಲ್ಲ. ಇಲ್ಲಿನ ಜನಪ್ರತಿನಿಧಿಗಳು ನೇಪಾಳಕ್ಕೆ ಹೋಗಲು ಸಹಾಯ ಮಾಡಿದರೆ, ತುಂಬಾ ಅನುಕೂಲವಾಗುತಿತ್ತು ಎಂದು ಸಂತ್ರಸ್ತನೋರ್ವ ಹೇಳಿದ್ದಾನೆ.