Site icon Ullalavani

ಭಾರತ್ ಬಂದ್ ಗೆ ಉಳ್ಳಾಲದಲ್ಲಿ ಮಿಶ್ರ ಪ್ರತಿಕ್ರಿಯೆ

UN NETWORKS

ಉಳ್ಳಾಲ: ಉಳ್ಳಾಲ ವ್ಯಾಪ್ತಿಯಲ್ಲಿ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರಮುಖ ಪೇಟೆಗಳಾದ ತೊಕ್ಕೊಟ್ಟು , ಉಳ್ಳಾಲ, ದೇರಳಕಟ್ಟೆ, ಮುಡಿಪು ಜಂಕ್ಷನ್ನಿನಲ್ಲಿ ಅಂಗಡಿ ಮುಂಗಟ್ಟುಗಳನ್ನು ಕೆಲವರು ಸ್ವಯಂ ಪ್ರೇರಿತರಾಗಿ ಬಂದ್ ನಡೆಸಿದ್ದರೆ, ಇನ್ನು ತೆರೆದಿದ್ದ ಅಂಗಡಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಬಲವಂತವಾಗಿ ಮುಚ್ಚಿಸಿದ್ದಾರೆ. ಖಾಸಗಿ ಮತ್ತು ಸರಕಾರಿ ಬಸ್ಸುಗಳು ಸಂಚರಿಸದೆ ಪ್ರಯಾಣಿಕರು ಬಹಳ ತೊಂದರೆ ಅನುಭವಿಸಿದರು.

ತಲಪಾಡಿ, ಕೋಟೆಕಾರು, ಕುತ್ತಾರು, ಪಂಡಿತ್ ಹೌಸ್, ಮಾಡೂರು, ಭಾಗಗಳಲ್ಲಿಯೂ ಕೆಲ ಅಂಗಡಿಗಳನ್ನು ಸ್ವಯಂಪ್ರೇರಿತರಾಗಿ ಹಲವರು ಬಂದ್ ನಡೆಸಿದ್ದರೆ, ಇನ್ನು ಕೆಲವರು ಎಂದಿನಂತೆ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸಿದ್ದಾರೆ. ಬೆಳಿಗ್ಗೆನಿಂದ ಹಾಲು, ಮೀನು, ಪತ್ರಿಕೆ ಹಾಗೂ ಔಷಧಿ ಅಂಗಡಿಗಳು ಎಲ್ಲೆಡೆ ಕಾರ್ಯಾಚರಿಸುತಿತ್ತು. ಬೆಳಗ್ಗಿನಿಂದ ಖಾಸಗಿ ಬಸ್ಸುಗಳು ಮತ್ತು ಸರಕಾರಿ ಬಸ್ಸುಗಳು ಸಂಚರಿಸದೆ ಕೆಲಸಕ್ಕೆ ತೆರಳುವ ಮಂದಿಗೆ ತೊಂದರೆಯಾಯಿತು. ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಬಹಳಷ್ಟು ಪ್ರಯಾಣಿಕರು ಬಸ್ಸಿಗಾಗಿ ಕಾದು, ಬಳಿಕ ರಿಕ್ಷಾ ಖಾಸಗಿ ವಾಹನಗಳಲ್ಲಿ ತೆರಳಿದರು. ರೈಲಿನಿಂದ ದೇರಳಕಟ್ಟೆ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ರೋಗಿಗಳನ್ನು ನೋಡಲು ಬರುವವರು ಇಕ್ಕಟ್ಟಿಗೆ ಸಿಲುಕಿದಂತಾಗಿದ್ದರು.

ರಸ್ತೆ ಬದಿಯಲ್ಲೇ ಅಡುಗೆ : ದೇರಳಕಟ್ಟೆ ಜಂಕ್ಷನ್ನಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದರು. ಗ್ಯಾಸ್ ಸ್ಟವ್ ಬಳಸದೆ ರಸ್ತೆಬದಿಯಲ್ಲಿ ಓಲೆಯಲ್ಲಿ ಅಡುಗೆ ಮಾಡುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು. ಅಲ್ಲಿ ಬೇಯಿಸಿದ ಊಟವನ್ನು ಪ್ರತಿಭಟನೆಯಲ್ಲಿ ಭಾಗವಹಿಸುವ ಮಂದಿಗೆ ವಿತರಿಸಲಾಗುವುದು ಎಂದು ಕಾರ್ಯಕರ್ತರು ತಿಳಿಸಿದರು. ಇದೇ ವೇಳೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ದಹಿಸಿದರು.

ಪೊಲೀಸ್- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
ಬೆಳಿಗ್ಗೆ ವಾಹನಗಳು ತೆರಳದಂತೆ ಯುವಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಕಾರ್ಯಕರ್ತರು ನಾಟೆಕಲ್ ಸಮೀಪ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದರು. ಕಾರಿಗೆ ಬ್ಯಾನರ್ ಕಟ್ಟಿ, ಪಕ್ಷದ ಧ್ವಜವನ್ನು ಹಾಕಿ ರಸ್ತೆ ಮಧ್ಯದಲ್ಲೇ ನಿಲ್ಲಿಸಿರುವುದನ್ನು ಕೊಣಾಜೆ ಪೊಲೀಸರು ವಿರೋಧಿಸಿದ್ದರು. ಅಲ್ಲದೆ ಪೊಲೀಸರು ತೆರವುಗೊಳಿಸುವ ಸಂದರ್ಭ ಪಕ್ಷದ ಧ್ವಜ ನೆಲಕ್ಕೆ ಬಿದ್ದಿತು ಎಂದು ವಿರೋಧಿಸಿ ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಪೊಲೀಸರು ಏಕವಚನದಲ್ಲಿ ಸಂಬೋಧಿಸಿದ್ದಾರೆ ಎಂದು ಆರೋಪಿಸಿದರು. ಬ್ಲಾಕ್ ಅಧ್ಯಕ್ಷ ಸಂತೋಷ್ ಶೆಟ್ಟಿ, ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು, ಬ್ಲಾಕ್ ಕಾರ್ಯದರ್ಶಿ ಮುಸ್ತಾಫ ಹರೇಕಳ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್ ಕರೀಂ, ಹಾಗೂ ಪೊಲೀಸ್ ಇಲಾಖೆಯಿಂದ ಸಹಾಯಕ ಪೊಲೀಸ್ ಆಯುಕ್ತ ರಾಮಮೋಹನ್, ಕೊಣಾಜೆ ಠಾಣಾಧಿಕಾರಿ ಅಶೋಕ್ ಉಪಸ್ಥಿತರಿದ್ದರು.

ಬಲವಂತದ ಬಂದ್
ದೇರಳಕಟ್ಟೆ, ನಿತ್ಯಾನಂದನಗರ, ಕುತ್ತಾರು ಭಾಗಗಳಲ್ಲಿ ಬೆಳಗ್ಗಿನಿಂದ ತೆರೆದಿದ್ದ ಹೊಟೇಲ್ ಮತ್ತು ಅಂಗಡಿಗಳನ್ನು ಕಾಂಗ್ರೆಸ್ ಕಾಋಯಕರ್ತರು ಬಲವಂತವಾಗಿ ಬಂದ್ ನಡೆಸಿದರು. ಈ ವೇಳೆ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಪೊಲೀಸರ ಆಗಮನದಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ. ಸೂಕ್ಷ್ಮ ಪ್ರದೇಶಗಳಾದ ಉಳ್ಳಾಲ, ತಲಪಾಡಿ, ತೊಕ್ಕೊಟ್ಟು ಭಾಗಗಳಲ್ಲಿ ಕೆಎಸ್ ಆರ್ ಪಿ ಬಸ್ಸುಗಳನ್ನು ನಿಯೋಜಿಸಲಾಗಿದ್ದು, ಬಿಗಿ ಬಂದೋಬಸ್ತು ಮುಂದುವರಿದಿದೆ.

Exit mobile version