Site icon Ullalavani

ಯೇನೆಪೋಯ : ಯೇನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಶ್ವಾಸಕೋಶ ಆರೋಗ್ಯ ತಪಾಸಣೆ

UN NETWORKS

ಯೇನೆಪೋಯ: ಹುಟ್ಟಿನಿಂದ ಸಾವಿನವರೆಗೆ ಆರೋಗ್ಯ ಕಾಪಾಡುವುದರಲ್ಲಿ ಶ್ವಾಸಕೋಶ ಪ್ರಮುಖ ಪಾತ್ರವಹಿಸುತ್ತದೆ. ಶ್ವಾಸಕೋಶದ ಆರೋಗ್ಯ ಸಮಸ್ಯೆಗೆ ಆಧುನಿಕ ವೈದ್ಯಕೀಯ ಚಿಕಿತ್ಸೆಯೊಂದಿಗೆ ಪ್ರಾಚೀನ ಅಭ್ಯಾಸವಾದ ಯೋಗ ಪ್ರಾಣಾಯಾಮ ಕಾಯಿಲೆಗೆ ಪರಿಹಾರ ನೀಡಬಲ್ಲುದು ಎಂದು ದೇರಳಕಟ್ಟೆಯ ಯೇನೆಪೋಯ ಮೆಡಿಕಲ್ ಕಾಲೇಜು ಸಾಮಾನ್ಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಪ್ರಭಾ ಅಧಿಕಾರಿ ಅಭಿಪ್ರಾಯಪಟ್ಟರು.

ದೇರಳಕಟ್ಟೆಯ ಯೇನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶ್ವಾಸಕೋಶ ಚಿಕಿತ್ಸಾ ವಿಭಾಗ ಮತ್ತು ಮಾರುಕಟ್ಟೆ ವಿಭಾಗ ಜಂಟಿಯಾಗಿ ಆಯೋಜಿಸಿದ ಶ್ವಾಸಕೋಶ ಆರೋಗ್ಯ ತಪಾಸಣೆ ಹಾಗೂ ಯೋಗ ಚಿಕಿತ್ಸೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶ್ವಾಸಕೋಶ ವಿಭಾಗದ ಮುಖ್ಯಸ್ಥ ಡಾ. ಇರ್ಫಾನ್ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿ ಧೂಮಪಾನ ಶ್ವಾಸಕೋಶದ ದಕ್ಷತೆಯನ್ನು ಕಡಿಮೆಗೊಳಿಸುತ್ತದೆ ಎಂದು ತಿಳಿಸಿದರು.

ಡಾ. ಪ್ರೀತಿರಾಜ್ ಬಳ್ಳಾಲ್ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತು ಅದನ್ನು ತಡೆಗಟ್ಟುವ ಬಗ್ಗೆ ಸಾಕ್ಷಚಿತ್ರ ಮುಖೇನ ವಿವರಿಸಿದರು. ಯೋಗ ಶಿಕ್ಷಕ ಕುಶಾಲಪ್ಪ ಗೌಡ ಯೋಗ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ಮಾರುಕಟ್ಟೆ ವಿಭಾಗದ ವಿಜಯಾನಂದ ಶೆಟ್ಟಿ ವಂದಿಸಿದರು. ಡಾ. ಶರತ್ ಕೆ. ಎಸ್ ಕಾರ್ಯಕ್ರಮ ನಿರೂಪಿಸಿದರು.

ಯೋಗ ಚಿಕಿತ್ಸಾ ಶಿಬಿರ ಸೆ. 10ರಿಂದ ಅ. 10ತನಕ ನಡೆಯಲಿದೆ. ಸಾರ್ವಜನಿಕರಿಗೆ ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ಯೋಗಚಿಕಿತ್ಸೆ ತರಬೇತಿ ಶಿಬಿರ ಸಂಜೆ 4.00ರಿಂದ 5.00ಮತ್ತು 5.00ರಿಂದ 6.00ರವರೆಗೆ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಲಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬಹುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

Exit mobile version