UN NETWORKS
ತಲಪಾಡಿ: ಭಾರತ ಜಗತ್ತಿಗೆ ತನ್ನದೇ ಆದ ಸಾಂಸ್ಕೃತಿಕ ಕೊಡುಗೆಯನ್ನು ನೀಡಿದೆ. ಶ್ರೀರಾಮ, ಶ್ರೀಕೃಷ್ಣ ಅವತರಿಸಿದ ಪುಣ್ಯಭೂಮಿ ನಮ್ಮದು. ಭಾರತದ ಮಣ್ಣಿನಲ್ಲಿ ಅವರ ತತ್ವ ಆದರ್ಶಗಳು ಮಿಳಿತಗೊಂಡಿದೆ. ಶ್ರೀಕೃಷ್ಣನ ಆದರ್ಶಗಳು, ಗೀತೆಗಳ ಮೂಲಕ, ಶ್ಲೋಕ ಪಠಣಗಳ ಮೂಲಕ ಸಂಸ್ಕೃತಿಯ ಆಚಾರ ವಿಚಾರಗಳನ್ನು ಬಲಪಡಿಸುತ್ತದೆ. ವಿದ್ಯಾರ್ಥಿಗಳು ಶ್ರೀರಾಮ, ಶ್ರೀಕೃಷ್ಣನ ಆದರ್ಶಗಳನ್ನು ಮೈಗೂಡಿಸಿಕೊಂಡು ಭಾರತೀಯ ಸಂಸ್ಕೃತಿಯ ರಾಯಭಾರಿಗಳಾಗಬೇಕು ಎಂದು ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಅಭಿಪ್ರಾಯಪಟ್ಟರು.
ಶ್ರೀಕೃಷ್ಣನ ಪ್ರಧಾನ ಪೂಜೆಯ ನಂತರ ವಿದ್ಯಾರ್ಥಿಗಳು ಶ್ರೀಕೃಷ್ಣನ ಬಾಲಲೀಲೆಗಳನ್ನು ಪ್ರತಿಬಿಂಬಿಸುವ ನೃತ್ಯ, ಹರಿಕಥೆ, ಭಾಷಣ ಹಾಗೂ ಭಜನಾ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಶಾರದಾ ಪದವಿ ಕಾಲೇಜಿನ ವಿದ್ಯಾರ್ಥಿಗಳ ಹುಲಿವೇಷ ನೃತ್ಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಆನಂತರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮಗೆ ನಿಯೋಜಿಸಿದ್ದ ಅಟ್ಟಣಿಗೆಯಲ್ಲಿ ಮಾನವ ಪಿರಾಮಿಡ್‍ಗಳನ್ನು ರಚಿಸಿ ಜೋಡಿಸಲ್ಪಟ್ಟ ಮಡಕೆಗಳನ್ನು ಒಡೆದು ಸಂಭ್ರಮೋಲ್ಲಾಸದಿಂದ ಕೃಷ್ಣಜನ್ಮಾಷ್ಟಮಿಯ ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಎಂ.ಪಿ. ಸುನಂದಾ ಪುರಾಣಿಕ್, ತುಳುನಾಡು ಎಜುಕೇಶನ್‍ನ ಟ್ರಸ್ಟಿಗಳಾದ ಸೀತಾರಾಮ ಆಚಾರ್ಯ, ಶಾಲಾ ಪ್ರಾಂಶುಪಾಲೆ ಸುಷ್ಮಾ ದಿನ್‍ಕರ್, ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಬಾಲಕೃಷ್ಣ ಭಾರದ್ವಾಜ್, ಡೇ ಬೋರ್ಡಿಂಗ್ ಶಾಲೆಯ ಪ್ರಾಂಶುಪಾಲೆ ಲತಾಂಜಲಿ ರೈ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿನಾಯಕ್ ಬಿ.ಜಿ., ಆಡಳಿತ ಅಧಿಕಾರಿ ವಿವೇಕ್ ತಂತ್ರಿ ಹಾಗೂ ಉಪ ಪ್ರಾಂಶುಪಾಲ ಮೋಹನ್ ದಾಸ್ ಉಪಸ್ಥಿತರಿದ್ದರು.
ಶಿಕ್ಷಕಿ ರಜನಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ರೂಪಶ್ರೀ ಮತ್ತು ಜ್ಞಾನ್‍ದೇವ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಲತಾ ವಂದಿಸಿದರು.