Site icon Ullalavani

ಕೇಸರೀಕರಣದ ಹೆಸರಿನಲ್ಲಿ ಶಾಲೆಯ ಸಂಸ್ಕೃತಿಯನ್ನು ನಿಲ್ಲಿಸಲಾಗಿದೆ : ಸಂಸದ ನಳಿನ್ ಕುಮಾರ್ ಕಟೀಲ್

UN NETWORKS

ಉಳ್ಳಾಲ: ಕೇಸರೀಕರಣದ ಹೆಸರಿನಲ್ಲಿ ಹಿಂದೆ ಶಾಲೆಗಳಲ್ಲಿ ನಡೆಯುತ್ತಿದ್ದಂತಹ ಸರಸ್ವತಿ ಪೂಜೆ, ರಾಮಕೃಷ್ಣರ ಪಾಠ, ಭಜನೆಯನ್ನು ನಿಲ್ಲಿಸಿದ ಪರಿಣಾಮವಾಗಿ ಇಂದು ಮಕ್ಕಳ ಮನಸ್ಸುಗಳನ್ನು ಕೆರಳಿಸುವಂತಹ ಬ್ರೇಕ್ ಡ್ಯಾನ್ಸ್ ಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳಗಿಸುವ ಕಾರ್ಯ ಮಂದಿರದಿಂದ ಆಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಅವರು ಶ್ರೀ ಬಾಲಕೃಷ್ಣ ಮಂದಿರ ಕುಂಪಲ ಇದರ 21 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕೃಷ್ಣ ನ ವೇಷಧಾರಿಗಳಾಗಿ, ಮಕ್ಕಳ ಮನಸ್ಸಿನಲ್ಲಿ ಕೃಷ್ಣನ ಆದರ್ಶಗಳು ನೆಲೆಯೂರಲು ಮುದ್ದುಕೃಷ್ಣ ವೇಷ ಸ್ಪರ್ಧೆ ಉತ್ತಮ ವೇದಿಕೆ. ಮೂಢನಂಬಿಕೆಯವರು ಹಿಂದೂಗಳಲ್ಲ. ಚರಾಚರ ಜೀವಿಗಳಾಗಿ ಭಗವಂತನ ಕಂಡವರು. ಪ್ರತಿಯೊಬ್ಬರಲ್ಲೂ ಭಗವಂತನಿದ್ದಾನೆ. ಆಧ್ಯಾತ್ಮ ಚಿಂತನೆ ಬೆಳಕನ್ನು ಮಕ್ಕಳ ಮನಸ್ಸಿನಲ್ಲಿ ಹಚ್ಚುವ ಮೂಲಕ ಅವರೊಳಗಿನ ಭಗವಂತನ ಕಾಣಲು ಸಾಧ್ಯ. ಇಂದಿನ ಜೀವನ ಶೈಲಿ ಫ್ಲಾಟಲ್ಲಿ ಇರುವ ಕಾರಣ ತುಳಸೀಕಟ್ಟೆಯೂ ಇಲ್ಲ, ಮನೆಗಳಲ್ಲಿ ಭಜನೆಯೂ ಇಲ್ಲವಾಗಿದೆ. ಶಾಲೆಗಳಲ್ಲಿ ಕೇಸರೀಕರಣದ ಹೆಸರಿನಲ್ಲಿ ಹಿಂದಿನ ಶಾಲಾ ಸಂಸ್ಕೃತಿಗಳೆಲ್ಲವನ್ನು ನಿಲ್ಲಿಸಲಾಗಿದೆ. ಇದರಿಂದ ಮಕ್ಕಳು ಬ್ರೇಕ್ ಡ್ಯಾನ್ಸ್, ಡಿಸ್ಕೋಗಳಲ್ಲಿ ಭಾಗವಹಿಸಿ ಮನಸ್ಸು ಕೆರಳಿಸಲು ಮುಂದಾಗುತ್ತಿದ್ದಾರೆ. ಈ ನಡುವೆ ಸಂಸ್ಕೃತಿಯ ಭಾವನೆಗಳನ್ನು ಉಳಿಸುವ ಪ್ರಯತ್ನ ಮಂದಿರ, ದೇವಸ್ಥಾನಗಳಂತಹ ಪವಿತ್ರ ಸ್ಥಳಗಳಿಂದ ಆಗಬೇಕಿದೆ ಎಂದರು.ಉದ್ಯಮಿ ಹರೀಶ್ ಕುತ್ತಾರ್ ಕಾರ್ಯಕ್ರಮ ಉದ್ಘಾಟಿಸಿದರು.

ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೆ.ಟಿ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಎಂಸಿ ಎಫ್ ಮಂಗಳೂರು ಇದರ ಮಾರುಕಟ್ಟೆ ಅಭಿವೃದ್ಧಿ ಡಿಜಿಎಂ ಕೆ.ಬಿ. ಕೀರ್ತನ್ ಕುಮಾರ್ ಲಾಡ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ದಿವಾಕರ ಪಾಂಡೇಶ್ವರ, ಸಿಟಿ ಸೆಂಟರ್ ಮಂಗಳೂರಿನ ಹರೀಶ್ ಶೆಟ್ಟಿ, ಉದ್ಯಮಿಗಳಾದ ಪ್ರವೀಣ್. ಜೆ, ಗುರುಪ್ರಸಾದ್ ಭಟ್, ದಿನೇಶ್ .ಕೆ ಮುಖ್ಯ ಅತಿಥಿಗಳಾಗಿದ್ದರು.
ಶ್ರೀ ಬಾಲಕೃಷ್ಣ ಮಹಿಳಾ ವಿಭಾಗದ ಅಧ್ಯಕ್ಷೆ ರೇಖಾ ವೆಂಕಟೇಶ್, ಪ್ರ.ಕಾ ಕೃತಿ ಪ್ರೀತೇಶ್ ಶೆಟ್ಟಿ , ಮಂದಿರದ ಗೌರವಾಧ್ಯಕ್ಷ ಕೇಶವದಾಸ್ ಬಗಂಬಿಲ, ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿಬ ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಕುಂಪಲ, ಪ್ರ.ಕಾ ರಾಜೇಶ್ ಬಲ್ಯ, ಗೌರವ ಅಧ್ಯಕ್ಷ ಸೋಮಶೇಖರ್ ಕೆ ಜಗತಾಪ್ ಉಪಸ್ಥಿತರಿದ್ದರು.ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ಪ್ರವೀಣ್. ಎಸ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು: ಮುದ್ದು ಕೃಷ್ಣ ವೇಷ, ಪುಟಾಣಿ ಕೃಷ್ಣ, ಶಿಶು ಕೃಷ್ಣ ವೇಷ ಸ್ಪರ್ಧೆ, ಶಾಲಾ ಮಕ್ಕಳಿಗೆ ಶ್ರೀ ಕೃಷ್ಣ ನ ಚಿತ್ರಬಿಡಿಸುವ ಸ್ಪರ್ಧೆ, ಮಹಿಳೆಯರಿಗೆ ರಂಗವಳ್ಳಿ ಸ್ಪರ್ಧೆ, ಭಕ್ತಿ ಗೀತೆ ಸಂಗೀತ ಸ್ಪರ್ಧೆನಡೆಯಿತು. ಉತ್ಸವದ ಶೋಭಯಾತ್ರೆಯಲ್ಲಿ ಮೂರುಕಟ್ಟ ಮಿತ್ರ ಮಂಡಳಿ ಮಿತ್ರನಗರ, ಹಿಂದೂ ಜಾಗರಣ ವೇದಿಕೆ ಕುಂಪಲ ಘಟಕ, ನವೋದಯ ಪ್ರೆಂಡ್ಸ್ ಸರ್ಕಲ್, ವಿದ್ಯಾನಗರ, ದುರ್ಗಾಪರಮೇಶ್ವರ ಕ್ಷೇತ್ರ, ಯುವ ಮರಾಠ ಕುಂಪಲ ಘಟಕ, ವಾಸುಕೀ ಪ್ರೆಂಢ್ಸ್ ಚಿತ್ರಾಂಜಲಿನಗರದ ಸ್ಥಬ್ದ ಚಿತ್ರಗಳು, ತಾಲೀಮು ಪ್ರದರ್ಶನ, ಮುಳ್ಳಕಾಡಿನ ಚೆಂಡೆವಾದನ, ನಾಸಿಕ್ ಬ್ಯಾಂಡ್ ವಾದನಗಳು ಮೊಸರು ಕುಡಿಕೆ ಉತ್ಸವಕ್ಕೆ ಮೆರುಗು ನೀಡಿತು.

Exit mobile version