Site icon Ullalavani

ಮಂಜನಾಡಿಯಲ್ಲಿ ಕರಾವಳಿಯ ಖಾದ್ಯ ಸವಿದ ಸಿ.ಎಂ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮಂಜನಾಡಿ : ಮಂಗಳೂರು ವಿಧಾನಸಭಾ ಕ್ಷೇತ್ರಾದ್ಯಂತ ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶುಕ್ರವಾರ ಹಮ್ಮಿಕೊಂಡಿದ್ದ ಸೌಹಾರ್ದ ಭೇಟಿ ಸಂದರ್ಭ ಮಂಜನಾಡಿ ನಿವಾಸಿ ಮೈಸೂರಿನಲ್ಲಿ ಉದ್ಯಮಿಮಿಯಾಗಿರುವ ಅವರ ಆಪ್ತ ಮೈಸೂರು ಬಾವಾ ಅವರ ಮನೆಯಲ್ಲಿ ನಡೆಯುತ್ತಿದ್ದ ಮಗಳ ಮೆಹಂದಿ ಸಮಾರಂಭಕ್ಕೆ ಭೇಟಿ ನೀಡಿ ಕರಾವಳಿಯ ಖಾದ್ಯದೊಂದಿಗೆ ಘಟ್ಟದ ಮೇಲಿನ ಆಹಾರ ರಾಗಿಮುದ್ದೆಯನ್ನು ಸವಿದರು.

ಮಂಗಳೂರಿನ ಬಜಪೆ ನಿಲ್ದಾಣದಲ್ಲಿ ಬಂದಿಳಿದ ಮುಖ್ಯಮಂತ್ರಿ ಬಳಿಕ ನೇರವಾಗಿ ನಾಟೆಕಲ್ ಮಂಜನಾಡಿ ಮೈಸೂರು ಬಾವಾ ಮನೆಗೆ ಭೇಟಿ ನೀಡಿದರು. ಅಲ್ಲಿ ಅವರ ಪುತ್ರಿಯ ಮೆಹಂದಿ ಸಮಾರಂಭ ಮತ್ತು ಅತಿಥಿಯಾಗಿ ಬರಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಕರಾವಳಿಯ ವಿಶಿಷ್ಟ ಖಾದ್ಯಗಳನ್ನು ತಯಾರಿಸಲಾಗಿತ್ತು. ನಾಟಿ ಕೋಳಿ ಸಾರು, ಚಿಕನ್ ಕಬಾಬ್, ಮೀನಿನ ಖಾದ್ಯದಲ್ಲಿ ಶಿಗಡಿ, ಅಂಜಲು, ಮಟನ್ ಸಾರು, ಮಾವಿನ ಕಾಯಿ ಸಾರು, ಅಕ್ಕಿ ರೊಟ್ಟಿ, ಚಪಾತಿ, ಪೂರಿ, ಅನ್ನ.. ಹೀಗೆ ವಿವಿಧ ಖಾದ್ಯಗಳನ್ನು ಮುಖ್ಯಮಂತ್ರಿಗಳು ಸವಿದರು. ಕರಾವಳಿಯ ಘಟ್ಟದ ಮೇಲಿನ ಆಹಾರ ರಾಗಿ ಮುದ್ದೆಯನ್ನು ಕಂಡು ಆಶ್ಚರ್ಯಪಟ್ಟ ಮುಖ್ಯಮಂತ್ರಿಗಳು ಬಿರಿಯಾನಿ ಜತೆಗೆ ಮುದ್ದೆಯನ್ನು ಹೆಚ್ಚಾಗಿ ಸವಿದರು.

ಸಚಿವರುಗಳಾದ ರಮಾನಾಥ ರೈ, ಯು.ಟಿ.ಖಾದರ್, ವಿನಯ ಕುಮಾರ್ ಸೊರಕೆ, ಶಾಸಕರಾದ ಮೊಯ್ದೀನ್ ಬಾವಾ, ಜೆ.ಆರ್.ಲೋಬೊ, ರಾಜ್ಯ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಕಾಂಗ್ರೆಸ್ ಮುಖಂಡರುಗಳಾದ ಕಣಚೂರು ಮೋನು, ನಿವೃತ್ತ ಪೊಲೀಸ್ ಅಧಿಕಾರಿ ಬಾವಾ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಪೊಲೀಸ್ ಕಮೀಷನರ್ ಮುರುಗನ್ ಮೊದಲಾದವರು ಔತಣ ಕೂಟದಲ್ಲಿ ಭಾಗವಹಿಸಿದರು.

ಮೈಸೂರಿನ ಶೈಲಿಯಲ್ಲಿ ಆಹಾರವನ್ನು ತಯಾರಿಸಲಾಗಿದ್ದು, ಆಹ್ವಾನಕ್ಕೆ ಸ್ಪಂಧಿಸಿ ಮುಖ್ಯಮಂತ್ರಿಗಳು ಮನೆಗೆ ಭೇಟಿ ನೀಡಿರುವುದು ತುಂಬಾ ಸಂತೋಷವಾಗಿದೆ ಎಂದು ಉದ್ಯಮಿ ಮೈಸೂರು ಬಾವಾ ತಿಳಿಸಿದರು.

Exit mobile version