Site icon Ullalavani

ಉಳ್ಳಾಲ ನಗರಸಭೆ : 31 ಸ್ಥಾನಗಳಿಗೆ 102 ಅಭ್ಯರ್ಥಿಗಳು,ಒಟ್ಟು 43 ಮತದಾನ ಕೇಂದ್ರ 12 ಸೂಕ್ಷ್ಮ ಮತಗಟ್ಟೆಗಳು

UN NETWORKS

ಉಳ್ಳಾಲ : ಉಳ್ಳಾಲ ನಗರಸಭೆಗೆ ನಡೆಯುವ ಮೊದಲ ಚುನಾವಣೆಗೆ 43 ಮತಗಟ್ಟೆಗಳು ಸಿದ್ಧಗೊಂಡಿದ್ದು ಬಿಗಿ ಬಂದೋಬಸ್ತ್‍ನಲ್ಲಿ ಶುಕ್ರವಾರ (ಇಂದು) ಮತದಾನ ನಡೆಯಲಿದ್ದು 31 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ 102 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.
ಕಾಂಗ್ರೆಸ್ ಎಲ್ಲಾ 31 ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದರೆ, ಬಿಜೆಪಿ 24 ಸ್ಥಾನಗಳಲ್ಲಿ, ಜೆಡಿಎಸ್ 21 ಸ್ಥಾನಗಳಲ್ಲಿ ಎಸ್‍ಡಿಪಿಐ 9 ಸ್ಥಾನಗಳಲ್ಲಿ, ಸಿಪಿಐಎಂ 5 ಸ್ಥಾನಗಳಲ್ಲಿ, 12 ಪಕ್ಷೇತರರರು ಸ್ಪರ್ಧೆಯಲ್ಲಿದ್ದಾರೆ. 14 ವಾರ್ಡ್‍ಗಳು ಮಹಿಳೆಯರಿಗೆ ಸೀಮಿತವಾಗಿದ್ದರೆ ಉಳಿದ 17 ವಾರ್ಡ್‍ಗಳಲ್ಲಿ ಪುರುಷರು ಸ್ಪರ್ಧಿಸುತ್ತಿದ್ದಾರೆ.

ಬಿಜೆಪಿ ಪ್ರಬಲ ಕ್ಷೇತ್ರವಾಗಿರುವ ಭಟ್ನಗರ, ಮೊಗವೀರಪಟ್ಣ , ಉಳ್ಳಾಲ ಬೈಲು ವಾರ್ಡಗಳು ಮಹಿಳೆರಿಗೆ ಮೀಸಲಾತಿ ಬಂದಿದೆ. ಮುಸ್ಲಿಂ ಮತದಾರರನ್ನು ಹೊಂದಿರುವ 1ನೇ ವಾರ್ಡ್ ಕೋಟೆಪುರದಲ್ಲಿ ಕಳೆದ ಪುರಭೆಯಲ್ಲಿ ಬಿಜೆಪಿ ಅಭ್ಯರ್ಥಿಯಿದ್ದರೂ ಈ ಬಾರಿ ಅಭ್ಯರ್ಥಿಗಳ ಕೊರತೆಯಿಂದ ಬಿಜೆಪಿ ಕಣಕ್ಕಿಳಿದಿಲ್ಲ. ಕಳೆದ ಎರಡು ಅವಧಿಗೆ ಪಕ್ಷೇತರ ಅಭ್ಯರ್ಥಿಗಳಿಗೆ ವರವಾಗಿದ್ದ ಉಳಿಯ ಹೊೈಗೆ ವಾರ್ಡ್ ಈ ಬಾರಿ ಮಹಿಳಾ ಮೀಸಲಾತಿ ತಂದಿದ್ದು, ಈ ಬಾರಿಯೂ ಕಾಂಗ್ರೆಸ್‍ಗೆ ಪಕ್ಷೇತರ ಆಭ್ಯರ್ಥಿಯೇ ಪ್ರತಿಸ್ಪರ್ಧಿಯಾಗಿದ್ದಾರೆ. ಕಾಂಗ್ರೆಸ್‍ಗೆ ಬಿಜೆಪಿಯೇ ನೇರ ಸ್ಪರ್ಧಿಯಾದರೆ ಕೆಲವೆಡೆ ಜೆಡಿಎಸ್ ಮತ್ತು ಎಸ್‍ಡಿಪಿಐ ನೇರ ಸ್ಪರ್ಧೆ ನೀಡುತ್ತಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಗೆ ಈ ಬಾರಿ ಎಸ್‍ಡಿಪಿಐ ಮತ್ತು ಜೆಡಿಎಸ್ ಸ್ಪರ್ಧೆ ನುಂಗಲಾರದ ತುತ್ತಾಗಿದ್ದು ಮೂರನೇ ಸೇನೆರಬೈಲು ಮತ್ತು ಒಂಭತ್ತುಕರೆ ವಾರ್ಡ್‍ನಲ್ಲಿ ಕಾಂಗ್ರೆಸ್‍ಗೆ ಬಂಡಾಯ ಅಭ್ಯರ್ಥಿಗಳು ತಲೆನೋವಾಗಿದ್ದಾರೆ.

44,273 ಮತದಾರರು : 44,273 ಮತದಾರರು ಮತ ಚಲಾಯಿಸಲಿದ್ದು ಇವರಲ್ಲಿ 22491 ಮಹಿಳಾ ಮತದಾರರು, 21,782 ಪುರುಷ ಮತದಾರರು. 17ನೇ ಪಟ್ಲ ಗಂಡಿ ವಾರ್ಡ್ 653 ಮತಗಳನ್ನು ಹೊಂದಿದ್ದು ಅತೀ ಕಡಿಮೆ ಮತದಾರರನ್ನು ಹೊಂದಿರುವ ವಾರ್ಡ್ ಆಗಿದ್ದು, 2401 ಮತಗಳನ್ನು ಹೊಂದಿರುವ 7ನೇ ಉಳ್ಳಾಲ ಪೇಟೆ ವಾರ್ಡ್ ಅತೀ ಹೆಚ್ಚು ಮತದಾರರನ್ನು ಹೊಂದಿರುವ ವಾರ್ಡ್ ಇದಾಗಿದೆ. 7ನೇ ಚೆಂಬುಗುಡ್ಡೆ ವಾರ್ಡ್ ನ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ 29ನೇ ಮತಗಟ್ಟೆ 1437 ಮತಗಳನ್ನು ಹೊಂದಿರುವ ಅತೀ ದೊಡ್ಡ ಮತಗಟ್ಟೆಯಾಗಿದ್ದು , 31ನೇ ಕಾಪಿಕಾಡು ವಾರ್ಡ್‍ನ 43ನೇ ಮತಗಟ್ಟೆಯಾಗಿರುವ ಕುದ್ಮುಲ್ ರಂಗರಾವರ್ ಸಬಾ ಭವನ ಗಾಂದಿ ನಗರ ಮತಗಟ್ಟೆ 593 ಮತಗಳನ್ನು ಹೊಂದಿರುವ ಅತೀ ಸಣ್ಣ ಮತಗಟ್ಟೆಯಾಗಿದೆ.

12 ಸೂಕ್ಷ್ಮ ಮತಗಟ್ಟೆಗಳು : ನಗರಸಭೆಯ ಕೋಟೆಪುರ, ಉಳ್ಳಾಲ ಕೋಡಿ, ಸೇನೆರೆಬೈಲು, ಸೇನೆರೆಬೈಲು 1, ಉಳ್ಳಾಲ ಹೊಯಿಗೆ, ಉಳ್ಳಾಲಪೇಟೆ, ಛೋಟಾ ಮಂಗಳೂರು, ಬಬ್ಬುಕಟ್ಟೆ ವಾರ್ಡ್‍ನ ಮತಗಟ್ಟೆಗಳು ಅತೀ ಸೂಕ್ಷ್ಮ ಮತಗಟ್ಟೆಗಳಾಗಿದ್ದು ಪ್ರತೀ ಮತಗಟ್ಟೆಗೆ ಇಬ್ಬರು ಪೊಲೀಸರನ್ನು ನಿಯುಕ್ತಿಗೊಳಿಸಲಾಗಿದೆ. 17 ಸೂಕ್ಷ್ಮ ಮತಗಟ್ಟೆಗಳಿಗೆ ಮತ್ತು 14 ಸಾಮಾನ್ಯ ಮತಗಟ್ಟೆಗಳಿಗೆ ತಲಾ ಒಬ್ಬರಂತೆ ಪೊಲೀಸರನ್ನು ನಿಯುಕ್ತಿಗೊಳಿಸಲಾಗಿದ್ದು, ಎಲೆಕ್ಟ್ರಾನಿಕ್ಸ್ ಮತಯಂತ್ರಗಳ ಮೂಲಕ ಮತ ಚಲಾಯಿಸಲು ಅವಕಾಶ ಕಲ್ಪಸಿದ್ದು ಇವಿಎಂ ಪ್ಯಾಡ್‍ಗಳು ಈ ಮತದಾನದಲ್ಲಿ ಬಳಕೆ ಮಾಡುತ್ತಿಲ್ಲ. ಇತ್ತೀಚೆಗೆ ನಡೆದ ಕರ್ನಾಟಕ ವಿದಾನ ಪರಿಷತ್‍ಸದಸ್ಯರ ಚುನಾವಣೆ, ಸಹಕಾರ ಸಂಘಗಳ ಆಡಳಿತ ಮಂಡಳಿಯ ಚುನಾವಣೆಗೆ ಮತದಾರರ ಎಡಕೈಯ ಬೆರಳಿಗೆ ಅಳಿಸಲಾಗದ ಶಾಯಿ ಹಾಕಿರುವುದರಿಂದ ಈ ಬಾರಿ ಚುನಾವಣೆಯಲ್ಲಿ ಬಲಕೈಯ ಹೆಬ್ಬೆರಳಿಗೆ ಶಾಯಿ ಗುರುತು ಹಾಕಲಾಗುವುದು ಎಂದು ಚುನಾವಣಾ ಆಯೋಗ ಆದೇಶ ನೀಡಿದೆ.

 

Exit mobile version