Site icon Ullalavani

ನಾರಾಯಣ ಗುರುವರ್ಯರು ಪರಿವರ್ತನೆ ಹರಿಕಾರ: ಶ್ರೀ ಸತ್ಯಾನಂದ ಸ್ವಾಮೀಜಿ

UN NETWORKS

ಕೊಣಾಜೆ: ಹಿಂದುಳಿದ ವರ್ಗದ ಜನರು ಒಂದು ಕಾಲದಲ್ಲಿ ದಾರಿಯಲ್ಲಿ ನಡೆದಾಡುವುದಕ್ಕೂ ಕಷ್ಟದ ಪರಿಸ್ಥಿತಿ ಇತ್ತು. ಪ್ರಾಣಿಗಳಿಗಾದರೂ ಸ್ವಾತಂತ್ರ್ಯ ಇತ್ತು ಆದರೆ ಮನುಷ್ಯರಿಗಿರಲಿಲ್ಲ. ಇಂತಹ ಅಸ್ಪಶ್ಯತೆ ತುಂಬಿದ ಸಮಾಜದಲ್ಲಿ ನಾರಾಯಣ ಗುರುವರ್ಯರ ಹುಟ್ಟಿಬಂದು ಸಮಾಜದಲ್ಲಿದ್ದ ಅಸ್ಪ್ರಶ್ಯತೆ, ಜಾತಿ ಭೇದವನ್ನು ತೊಡೆದು ಹಾಕುವುದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ನಾರಾಯಣ ಗುರುವರ್ಯರು ಪರಿವರ್ತನೆಯ ಹರಿಕಾರ ಎಂದು ವರ್ಕಲ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಗುರುವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕೇರಳದಲ್ಲಿ ನಾರಾಯಣ ಗುರು ಜಯಂತಿ ಆಚರಣೆಗೆ ಸರ್ಕಾರ ರಜೆ ನೀಡುತ್ತಿದ್ದರೂ, ಕರ್ನಾಟಕದಲ್ಲಿ ನಾರಾಯಣ ಗುರುವರ್ಯರ ಇಷ್ಟು ಭಕ್ತಾಭಿಮಾನಿಗಳಿದ್ದರೂ ಸರ್ಕಾರ ರಜೆ ಘೋಷಿಸಿಲ್ಲ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕಿದೆ ಎಂದರು. ಇಂದಿನ ಯುವಕರು ದಾರಿ ತಪ್ಪುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಯುವಕರು ನಾರಾಯಣ ಗುರುವರ್ಯರ ನಡೆದು ಬಂದ ಹಾದಿ ಹಾಗೂ ಅವರ ಆದರ್ಶವನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ವಿಧಾನಪರಿಷತ್‍ನ ವಿರೋಧಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ ಅವರು, ಅಂದಿನ ಕಾಲದಲ್ಲಿ ಸಮಾಜದಲ್ಲಿದ್ದ ಸವಾಲುಗಳನ್ನು ಮೆಟ್ಟಿನಿಂತು ಹೋರಾಡಿದ ಬ್ರಹ್ಮಶ್ರೀ ನಾರಾಯಣ ಗುರುವರ್ಯರು ಸಮಾಜದ ಚಿಕಿತ್ಸಕನಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಅಲ್ಲಲ್ಲಿ ದೇವಾಲಯ ನಿರ್ಮಾಣ ಮಾಡುವಾಗಲೂ ಮೇಲ್ವರ್ಗದಿಂದ ಸಮಸ್ಯೆಯನ್ನು ಎದುರಿಸಿದ್ದರು. ಕುದ್ರೋಳಿಯಲ್ಲಿ ದೇವಾಲಯ ನಿರ್ಮಾಣದ ಸಂದರ್ಭದಲ್ಲೂ ಮೇಲ್ವರ್ಗದವರು ವಿರೋಧಿಸಿದ್ದರು. ಇವೆಲ್ಲವನ್ನು ನಾರಾಯಣ ಗುರುವರ್ಯರು ಜಾಣ್ಮೆಯಿಂದ ಎದುರಿಸಿದ್ದರು ಎಂದರು.

ಶಿವಗಿರಿ ಮಠದ ಸ್ವಾಮೀಜಿಯ ಆಶಯದಂತೆ ನಾರಾಯಣ ಗುರುವರ್ಯರ ಆದರ್ಶಗಳು, ಸಾಧನೆಯು ಬಗ್ಗೆ ಪಠ್ಯದ ರೂಪದಲ್ಲಿ ಜಾರಿಯಾಗಬೇಕಿದೆ. ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುತ್ತೇನೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಡಾ.ಕಿಶೋರ್ ಕುಮಾರ್ ಅವರು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಚಲನಚಿತ್ರ ನಟ ಡಾ.ರಾಜಶೇಖರ ಕೋಟ್ಯಾನ್ ಅವರು ಭಾಗವಹಿಸಿದ್ದರು. ಬ್ರಹ್ಮಶ್ರೀ ನಾರಾಯಣ ಗುರು ಪೀಠದ ನಿರ್ದೇಶಕರಾದ ಮುದ್ದುಮೂಡುಬೆಳ್ಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ನಿರೂಪಿಸಿದರು.

ಗುರುವರ್ಯದ ಜನ್ಮದಿನದ ಗೊಂದಲ ಬೇಡ:
ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಜನ್ಮ ದಿನವನ್ನು ಕೆಲವೊಂದೆಡೆ 1854 ಎಂದು ನಮೂದಿಸಿದರೆ ಕೆಲವು ಕಡೆಗಳಲ್ಲಿ 1855 ಎಂದು ದಾಖಲಾಗಿದೆ. ಇದು ಹಲವು ಗೊಂದಲವಾಗಿ ಕಾರಣವಾಗಿದೆ ಎಂದು ಚಿತ್ರನಟ ರಾಜಶೇಖರಾನಂದ ಕೋಟ್ಯಾನ್ ವೇದಿಕೆಯಲ್ಲಿ ಪ್ರಸ್ತಾಪಿಸಿದಾಗ ಶಿವಗಿರಿ ಮಠದ ಸ್ವಾಮೀಜಿಯವರು 1855 ಇಸವಿಯೇ ಅಧಿಕೃತವಾಗಿದ್ದು ಇದರ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಹೇಳಿದರು.

Exit mobile version