UN NETWORKS
ಉಳ್ಳಾಲ: ಹೊಟ್ಟೆಯ ವಿವಿಧ ಭಾಗಗಳಿಗೆ ಹರಡಿ ಅಂತಿಮ ಹಂತದಲ್ಲಿರುವ ಹಾಗೂ ಎಲ್ಲ ಬಗೆಯ ಚಿಕಿತ್ಸೆಯಲ್ಲೂ ವಿಫಲವಾಗಿರುವ ಕ್ಯಾನ್ಸರ್ ರೋಗಿಗಳಿಗೊಂದು ಆಶಾಕಿರಣವಾಗಿ ಹೈಪರ್ ಥರ್ಮಿಕ್ ಇಂಟ್ರಿ ಪೆರಿಟೋನಿಯಲ್ ಕಿಮೋ ಥೆರಫಿ(ಹೈಪೆಕ್) ಎಂಬ ಅತ್ಯಾಧುನಿಕ ಚಿಕಿತ್ಸಾ ವಿಧಾನದಿಂದ ಕ್ಯಾನ್ಸರ್ ಮತ್ತೆ ಮರುಕಳಿಸುವುದನ್ನು ಮತ್ತು ಬೇರೆ ಅಂಗಗಳಿಗೆ ಹರಡುವುದನ್ನು ತಪ್ಪಿಸುವಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ತಜ್ಞರ ತಂಡ ಯಶಸ್ವಿಯಾಗಿದೆ. ಆ ಮೂಲಕ ನೂತನ ವಿಧಾನವು ಕ್ಯಾನ್ಸರ್ ಕಾಯಿಲೆಯನ್ನು ಸಂಪೂರ್ಣ ಗುಣಪಡಿಸಲು ಮತ್ತು ರೋಗಿಗಳ ಆಯಸ್ಸನ್ನು ಹೆಚ್ಚಿಸಲು ಪರಿಣಾಮಕಾರಿಯಾಗಿದೆ.
ರಾಣಿ(ಹೆಸರು ಬದಲಿಸಲಾಗಿದೆ, 45ವರ್ಷ) ಅಂಡಾಶಯ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಶಸ್ತ್ರಚಿಕಿತ್ಸೆಯ ಮತ್ತು ಕಿಮೋಥೆರಫಿಯ ನಂತರ ಎಂಟು ತಿಂಗಳಲ್ಲಿ ರೋಗ ಮತ್ತೆ ಮರುಕಳಿಸಿ ಹೊಟ್ಟೆಯ ಅನೇಕ ಭಾಗಗಳಿಗೆ ಹರಡಿತ್ತು. ಕ್ಯಾನ್ಸರ್ ಶಸ್ತ್ರಚಿಕಿತ್ಸಾ ಹಾಗೂ ಹೈಪೆಕ್ ತಜ್ಞ ಡಾ. ವಿನಯ ಕುಮಾರ್ ರಾಜೇಂದ್ರ ಅವರ ನೇತೃತ್ವದಲ್ಲಿ ಅರಿವಳಿಕೆ ತಜ್ಞ ಡಾ. ಶ್ರೀಪಾದ ಮೆಹಂದಲ್, ಕ್ಯಾನ್ಸರ್ ತಜ್ಞ ಡಾ. ವಿಜಿತ್ ಶೆಟ್ಟಿ ಸುಮಾರು 15ಗಂಟೆಗಳ ಕಾಲ ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ಹರಡಿದ ಕ್ಯಾನ್ಸರ್ ರೋಗವನ್ನು ಸಂಪೂರ್ಣವಾಗಿ ತೆಗದುಹಾಕಿ ಹೈಪೆಕ್ ವಿಧಾನದಿಂದ ಕಿಮೋಥೆರಫಿ ನೀಡಲಾಗಿದ್ದು ಈ ಚಿಕಿತ್ಸೆಯ ನಂತರ ರೋಗಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
ಈ ನೂತನ ವಿಧಾನವನ್ನು ಅತ್ಯಾಧುನಿಕ ತಂತ್ರಜ್ಞಾನಗಳಿರುವ ಆಸ್ಪತ್ರೆಯಲ್ಲಿ ನುರಿತ ತಜ್ಞ ವೈದ್ಯರೇ ನಿರ್ವಹಿಸಬೇಕಾಗಿದ್ದು ಕಿಮೋಥೆರಫಿಯ ಸಾಂದ್ರತೆ ಮತ್ತು ಉಷ್ಣತೆಯ ಏರುಪೇರಿನಿಂದ ಚಿಕಿತ್ಸೆ ವಿಫಲವಾಗಲು ಮತ್ತು ರೋಗಿಯ ಸಾವಿಗೂ ಕಾರಣವಾಗಬಹುದು. ಕ್ಷೇಮದಲ್ಲಿ ಈ ಚಿಕಿತ್ಸೆಯನ್ನು ಇಟಲಿಯ ಹೈಪೆಕ್ ತಂತ್ರಜ್ಞಾನವನ್ನು ಬಳಸಿಕೊಂಡು ಅಂತರ್ ರಾಷ್ಟ್ರೀಯ ಮಾರ್ಗದರ್ಶನಗಳನ್ನು ಅನುಸರಿಸಿ ಮಾಡಲಾಗಿದೆ.್ಹೈಪೆಕ್ ವಿಧಾನವನ್ನು ಹೊಟ್ಟೆ ಸಂಬಂಧಿ ಹಲವು ಅಂಗಗಳ ಕ್ಯಾನ್ಸರ್‍ಗಳಿಗೆ(ಅಂಡಾಶಯ, ಉದಯ, ಅಪೆಂಡಿಕ್ಸ್ , ಕರುಳು) ಬಳಸಬಹುದಾಗಿದೆ. ಖಾಸಗಿ ವಲಯದಲ್ಲಿ ಈ ಚಿಕಿತ್ಸೆ ವೆಚ್ಚ ಸುಮಾರು 10ರಿಂದ 15ಲಕ್ಷ ರೂ. ಗಳಿಗೂ ದುಬಾರಿಯಾಗಿದ್ದು ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಅತ್ಯಂತ ಮಿತದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಗಾಗಿಯೇ ಮೀಸಲಾದ ನುರಿತ ತಜ್ಞ ವೈದ್ಯರು ಇಟಲಿ ಮಿಲಾನ್‍ನ ನ್ಯಾಶನಲ್ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್ ಮತ್ತು ನವದೆಹಲಿಯ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನಲ್ಲಿ ವಿಶೇಷ ತರಬೇತಿ ಪಡೆದುಕೊಂಡಿದ್ದಾರೆ.ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಹಾಗೂ ಪ್ರೊಫೆಸರ್ ಡಾ. ಪಿ.ಎಸ್. ಪ್ರಕಾಶ್ ನೂತನ ತಂಡದ ಸಾಧನೆಯನ್ನು ಅಭಿನಂದಿಸಿದ್ದಾರೆ. ವೈಸ್ ಡೀನ್ ಡಾ. ಜಯಪ್ರಕಾಶ್ ಶೆಟ್ಟಿ, ಕ್ಷೇಮ ರೇಡಿಯೇಶನ್ ಆಂಕೋಲಾಜಿ ಮುಖ್ಯಸ್ಥ ಪ್ರೊ.ಡಾ. ಜಯರಾಮ ಶೆಟ್ಟಿ, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧಿವೀಕ್ಷಕ ಡಾ. ಶಿವಕುಮಾರ್ ಹೀರೇಮಠ ಉಪಸ್ಥಿತರಿದ್ದರು.