UN NETWORKS
ಕೊಣಾಜೆ: ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಮತ್ತೊಮ್ಮೆ ಜಾತಿ, ಧರ್ಮ ಮೇಳೈಸುತ್ತಿದೆ. ಅಂತಹ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ, ಸಿದ್ಧಾಂತ ಪಾಲನೆಯಿಂದ ತಾರತಮ್ಯ ಹೋಗಲಾಡಿಸಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಡಾ. ಜಯರಾಜ್ ಅಮೀನ್ ಅಭಿಪ್ರಾಯಪಟ್ಟರು.
ಕೇರಳದಲ್ಲಿ ಕೆಳ ಜಾತಿಯವರು ದೇವಾಲಯ ಪ್ರವೇಶಿಸಬಾರದು. ಮಹಿಳೆಯರು ಎದೆಗೆ ವಸ್ತ್ರ ಹಾಕಬಾರದು ಎಂಬ ನಿಯಮ ಮೇಲ್ಜಾತಿಯ ಜನ ಅಳವಡಿಸಿದ್ದರು. ಅವರೊಡನೆ ಜಗಳ ಕಾಯದೆ ನಮ್ಮದೇ ಆದ ದೇವಾಲಯ ನಿರ್ಮಿಸಲು ನಾರಾಯಣ ಗುರುಗಳು ಪ್ರೇರಣೆ ನೀಡಿದ್ದರು. ಅದರ ಫಲವಾಗಿ ಕಳೆದ 150ವರ್ಷಗಳಿಂದ ಕೇರಳದಲ್ಲಿ ಬದಲಾವಣೆ ಕಂಡಿದ್ದು ಇಂದು ಸಮಾನತೆ ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಗಂಗಾಧರ ಪೂಜಾರಿ ಸಂಘ ಆರಂಭದಿಂದಲೂ ಧಾರ್ಮಿಕತೆಯೊಂದಿಗೆ ಸಾಮಾಜಿಕ ಚಟುವಟಿಕೆಗಳನ್ನೂ ನಡೆಸುತ್ತಾ ಬಂದಿದೆ. ಈ ವರ್ಷವೂ ಆರ್ಥಿಕವಾಗಿ ಹಿಂದುಳಿದ 250ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಲಾಗಿದ್ದು, ಭವಿಷ್ಯ ನಿರ್ಮಾಣ ಕಾರ್ಯಾಗಾರ, ಉಚಿತ ವೈದ್ಯಕೀಯ ಶಿಬಿರ ನಡೆಸಲಾಗಿದೆ ಎಂದರು.
ಮಂಗಳೂರು ಶ್ರೀ ಗೋಕರ್ಣಾಥ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಗೋಪಾಲಕೃಷ್ಣ ಕೆ. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಕೆನರಾ ಸ್ಪ್ರಿಂಗ್‍ನ ಸಹಾಯಕ ವ್ಯವಸ್ಥಾಪಕಿ ಉಷಾ ವಿಶ್ವನಾಥ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಬಬಿತಾ ಬಾಣಬೆಟ್ಟು ಉಪಸ್ಥಿತರಿದ್ದರು.
ರವೀಂದ್ರ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಇನೋಳಿ ವಂದಿಸಿದರು.