Site icon Ullalavani

ರಸ್ತೆ ಅವ್ಯವಸ್ಥೆ ಖಂಡಿಸಿ ತಲಪಾಡಿ ಮಕ್ಯಾರು ಗ್ರಾಮಸ್ಥರಿಂದ ಪ್ರತಿಭಟನೆ

UN NETWORKS

ತಲಪಾಡಿ : ತಲಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲಂಕಾರುಗುಡ್ಡೆ,ಮಕ್ಯಾರು ರಸ್ತೆ ಅವ್ಯವಸ್ಥೆ ಹಾಗೂ ಇದರಿಂದ ಗ್ರಾಮಸ್ಥರಿಗೆ,ಶಾಲಾ ಮಕ್ಕಳಿಗೆ ಆಗುತ್ತಿರುವ ತೊಂದರೆಯನ್ನು ಮುಂದಿಟ್ಟು ಸ್ಥಳೀಯರು ಪ್ರತಿಭಟನೆಯನ್ನು ನಡೆಸಿ ತಲಪಾಡಿ ಗ್ರಾಮ ಪಂಚಾಯಿತಿ ಕಛೇರಿಗೆ ಬುಧವಾರ ಮುತ್ತಿಗೆ ಹಾಕಿದರು.

ರಾಷ್ಟ್ರೀಯ ಹೆದ್ದಾರಿ 66 ರಿಂದ ಸುಮಾರು 50 ಕ್ಕೂ ಅಧಿಕ ಮನೆಗಳಿರುವ ಮಕ್ಯಾರು ಪ್ರದೇಶಕ್ಕೆ 100 ವರ್ಷಗಳ ಇತಿಹಾಸವಿರುವ ಕಾಲುದಾರಿಯಿತ್ತು.ಕ್ರಮೇಣ ಅಭಿವೃದ್ಧಿ ಆಗುತ್ತಿದ್ದಂತೆ 25 ವರ್ಷಗಳ ಹಿಂದೆ ರಸ್ತೆಯನ್ನು ಅಗಲೀಕರಣಗೊಳಿಸಿ ವಾಹನಗಳು ತೆರಳುವ ರಸ್ತೆಯಾಗಿ ಮಾರ್ಪಾಡಾಗಿತ್ತು. ಇದೀಗ 1 ಕಿ.ಮೀ ಉದ್ದದ ರಸ್ತೆ ಇಡೀ ಹೊಂಡಗಳಿಂದ ಕೂಡಿದೆ. ಮಳೆ ಬಂತೆದರೆ ಕೆಸರು ತುಂಬಿದ ರಸ್ತೆಯಲ್ಲಿ ಸಣ್ಣ ಮಕ್ಕಳು,ವೃದ್ಧರು,ಮಹಿಳೆಯರು,ಅಂಗವಿಕಲರು ಕಷ್ಟ ಪಟ್ಟು ಹೋಗುವಂತಹ ದುರಾವಸ್ಥೆ ಇಲ್ಲಿದೆ.ಗ್ರಾಮ ಸಭೆಗಳಲ್ಲಿ,ವಾರ್ಡ್ ಸಭೆಗಳಲ್ಲಿ ಗ್ರಾಮಸ್ಥರು ಹಲವು ಬಾರಿ ಜ್ವಲಂತ ಸಮಸ್ಯೆಯ ಕುರಿತು ಗಮನಹರಿಸುವಂತೆ ಒತ್ತಾಯಿಸಿದರು ಪಂಚಾಯಿತಿ ಅಧಿಕಾರಿಗಳಾಗಲಿ,ಆಡಳಿತ ಸಮಿತಿಯಾಗಲಿ,ವಾರ್ಡ್ ಸದಸ್ಯರಾಗಲಿ ಯಾವುದೇ ಮುತುವರ್ಜಿವಹಿಸಿಲ್ಲ ಎಂದು ಪ್ರತಿಭಟನೆಕಾರರು ಆರೋಪಿಸಿದರು.

1970 ರಲ್ಲಿ ತಲಪಾಡಿಯಿಂದ ಅಲಂಕಾರಗುಡ್ಡೆಯಾಗಿ ದೇವಿಪುರಕ್ಕೆ 7 ಮಂದಿ ಜೊತೆಗೆ ಹೋಗುವಷ್ಟು ಅಗಲದ ದಾರಿಯಿತ್ತು.ಆದರೆ ಇದೀಗ ಒಂದು ಮಗುವಿಗೂ ನಡೆದುಕೊಂಡು ಹೋಗಲು ಕಷ್ಟಕರವಾಗಿದೆ.ಇಡೀ ರಸ್ತೆಯು ಕೆಸರು ಗದ್ದೆಯಾಗಿ ಮಾರ್ಪಾಡಾಗಿದೆ.ಮಳೆ ಸಂದರ್ಭ ನೀರು ನಿಂತಲ್ಲಿ ಮಕ್ಕಳು ಶಾಲೆಗೆ ಹೋಗದಂತಹ ಸ್ಥಿತಿಯಿದೆ.ಪಂಚಾಯಿತಿಗೆ ಸಾಕಷ್ಟು ಮನವಿ ಮಾಡಿದರು ಸ್ಪಂದನೆ ಸಿಕ್ಕಿಲ್ಲ.ಒಂದು ಕಾಲದಲ್ಲಿ ತಲಪಾಡಿಯ ಪ್ರಮುಖ ರಸ್ತೆ ಇದಾಗಿದ್ದರು ಈವರೆಗೆ ಅಭಿವೃದ್ಧಿಗೆ ಅನುದಾನವನ್ನು ಮೀಸಲು ಇರಿಸಲು ಸಾಧ್ಯವಾಗಿಲ್ಲ.ವೀಕ್ಷಣೆಗೆಂದು ಹಲವು ಬಾರಿ ಸಚಿವರು ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ತುರ್ತಾಗಿ ಜಲ್ಲಿ ಹುಡಿಯನ್ನು ಹಾಕಿಯಾದರು ಪಂಚಾಯಿತಿ ಆಡಳಿತ ಸಹಕರಿಸಬೇಕೆಂದು ಗ್ರಾಮಸ್ಥ ಭಾಸ್ಕರ್ ದೇವಾಡಿಗ ಹೇಳಿದರು.

ಜಾರಿಬಿದ್ದು ಕೆಲಸ ಇಲ್ಲದಂತಾಗಿದ್ದಾರೆ: ದಿನನಿತ್ಯ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸಲು ಇದೇ ಕಾಲುದಾರಿಯಲ್ಲಿ ಸಾಗುತ್ತಿದೆ.ವಾರದ ಹಿಂದೆ ಕೆಸರು ತುಂಬಿದ ರಸ್ತೆಯಲ್ಲಿ ಜಾರಿ ಬಿದ್ದು ಕೈ ಮತ್ತು ಕಾಲುಗಳಿಗೆ ಗಾಯವಾಗಿದೆ ಒಂದು ವಾರದಿಂದ ಕೆಲಸಕ್ಕೆ ಹೋಗಲು ಸಾದ್ಯವಾಗದೇ ಮನೆಯಲ್ಲಿಯೆ ಉಳಿದುಕೊಂಡಿದ್ದೇನೆ.ಮಧ್ಯವಯಸ್ಕ ಗಂಗಾಧರ್ ಎಂಬವರು ಅಳಲು ತೋರಿಕೊಂಡರು.

ಗ್ರಾಮಸ್ಥ ಸತ್ಯೇಂದ್ರ ಮಾತನಾಡಿ ನಂ.1 ಸಂಸದರು ಹಾಗೂ ಸಚಿವರ ವ್ಯಾಪ್ತಿಗೆ ಬರುವ ಮಕ್ಯಾರು ಪ್ರದೇಶ ಮೂಲಭೂತ ಸೌಕರ್ಯಗಳಿಂದ ಕಡೆಗಣಿಸಲ್ಪಟ್ಟಿದೆ.ಸೂಕ್ತ ಚರಂಡಿಯಿಲ್ಲ,ದಾರಿಯಿಲ್ಲ,ಕುಡಿಯುವ ನೀರಿನ ವ್ಯವಸ್ಥೆಯಿಲ್ಲ.ಪ್ರದೇಶವನ್ನು ಸಂಪೂರ್ಣವಾಗಿ ಕಡೆಗಣಿಸಲ್ಪಡಲಾಗಿದೆ.ಈ ಬಗ್ಗೆ ಪ್ರತಿಭಟನೆಯನ್ನು ಹಮ್ಮಿಕೊಂಡು ಸಂಬಂಧ ಪಟ್ಟ ಇಲಾಖೆ ಸೇರಿದಂತೆ ಜಿಲ್ಲಾಧಿಕಾರಿಗಳಿಗೂ ದೂರನ್ನು ನೀಡಲು ಮುಂದಾಗಿದ್ದೇವೆ.

ಶೂನಲ್ಲಿ ಕೊಳಕಾದನ್ನು ಕಾಲೇಜಲ್ಲಿ ಪ್ರಶ್ನಿಸುತ್ತಾರೆ : ಮಂಗಳೂರು ಕಾಲೇಜಿನಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿನಿ ಸ್ವಾತಿ ಮಾತನಾಡಿ ಶಿಕ್ಷಣ ಪಡೆಯುವವರಿಗೆ ಸೂಕ್ತ ಮೂಲಭೂತ ವ್ಯವಸ್ಥೆ ಕಲ್ಪಿಸಬೇಕೆಂಬ ಕಾನೂನೇ ಇದೆ.ಆದರೇ ಮಕ್ಯಾರು ಪ್ರದೇಶದಲ್ಲಿ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.ಕೆಸರು ಮಯ ರಸ್ತೆಯಲ್ಲಿ ನಡೆದು ಕಾಲೇಜು ತಲುಪುವಾಗ ಮುಜುಗರವಾಗುತ್ತದೆ ಸಹಪಾಠಿಗಳು ಚಪ್ಪಲಿಯಲ್ಲಿರುವ ಕೊಳಕನ್ನು ಪ್ರಶ್ನಿಸಿ ಗೇಲಿಮಾಡುತ್ತಾರೆ.

ಚುನಾವಣೆಯಲ್ಲಿ ಜಯಗಳಿಸಿದರೆ ಮೊದಲಿಗೆ ಮಕ್ಯಾರು ರಸ್ತೆಯ ಕಾಂಕ್ರೀಟುಗೊಳಿಸುವ ಭರವಸೆಯನ್ನು ಸಚಿವ ಖಾದರ್ ನೀಡಿದ್ದರು.ಚುನಾವಣೆ ಮುನ್ನಾ ಹಲವು ಬಾರಿ ಈ ಪ್ರದೇಶಕ್ಕೆ ಬೇಟಿ ನೀಡಿದ್ದರು ಗೆದ್ದ ಬಳಿಕ ಈವರೆಗೂ ಬೇಟಿ ನೀಡಿಲ್ಲ.ಜನರ ಸಮಸ್ಯೆಯನ್ನು ಕೇಳುವವರಿಲ್ಲ.ಗ್ರಾಮಸಭೆಯಲ್ಲಿ ಧ್ವನಿ ಎತ್ತಿದರೆ ಬಾಯಿಮುಚ್ಚುವ ಕೆಲಸ ನಡೆಯುತ್ತಿದೆ.ಈ ಭಾಗದ ಇತರೆಡೆ ಬಹುತೇಕ ರಸ್ತೆಗಳು ಕಾಂಕ್ರೀಟಿಕರಣಗೊಂಡಿದೆ.ಮಕ್ಯಾರು ಪ್ರದೇಶದಲ್ಲಿ ಈವರೆಗೂ ರಸ್ತೆ ಆಗದಿರುವುದು ವಿಪರ್ಯಾಸ.ಎಂದು ಗ್ರಾಮಸ್ಥ ಇಸ್ಮಾಯಿಲ್ ಆರೋಪಿಸಿದರು.

ಪಂಚಾಯಿತಿಗೆ ಮುತ್ತಿಗೆ : ಮಕ್ಯಾರು ಗ್ರಾಮಸ್ಥರು ಪ್ರತಿಭಟನೆಯ ಬಳಿಕ ತಲಪಾಡಿ ಪಂಚಾಯಿತಿ ಕಛೇರಿಗೆ ಮುತ್ತಿಗೆ ಹಾಕಿದರು.ತಕ್ಷಣವೇ ರಸ್ತೆ ದುರಸ್ತಿ ನಡೆಸಿಕೊಡುವಂತೆ ಆಗ್ರಹಿಸಿದರು ಅಬಿವೃದ್ಧಿ ಅಧಿಕಾರಿಗಳು ಪ್ರತಿಭಟನೆಕಾರರನ್ನು ಸಮಾಧಾನಿಸಲು ಯತ್ನಿಸಿದರು ಸಾಧ್ಯವಾಗಲಿಲ್ಲ.ವಾರ್ಡ್‍ನ ಸದಸ್ಯರು ಹಾಗೂ ಪಂಚಾಯಿತಿ ಅಧ್ಯಕ್ಷರು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.

ಸ್ಪಂದಿಸಿದ ಅಧ್ಯಕ್ಷರು : ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ತಲಪಾಡಿ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ಮಾತನಾಡಿ ಹಿಂದೆ ಇದಂತಹ ಕಾಲುದಾರಿಯನ್ನು ಅಗಲೀಕರಣಗೊಳಿಸಿದ ಹಿನ್ನಲೆಯಲ್ಲಿ ಅಲ್ಲಿ ಜಾಗ ಖರೀದಿಸಿದ ಖಾಸಗಿ ವ್ಯಕ್ತಿಯೊರ್ವರು ಪಂಚಾಯಿತಿ ವಿರುದ್ದವೇ ದಾವೆಯನ್ನು ಹೂಡಿದರು.ಅವರೊಂದಿಗೆ ಮಾತುಕತೆ ನಡೆಸಿ ರಾಜ್ಯಸಂದಾನಕ್ಕೆ ಹಲವು ಸಮಯ ತಗುಲಿದೆ ಇದರಿಂದ ಅಬಿವೃದ್ಧಿ ಸಾಧ್ಯವಾಗಿಲ್ಲ.ಭವಿಷ್ಯದಲ್ಲಿ ರಸ್ತೆಗೆ ತೊಂದರೆ ಆಗುವ ಉದ್ದೇಶದಿಂದ ಸಮೀಪದ ಅಗ್ರಿಗೋಲ್ಡ್ ಸಂಸ್ಥೆಯವರಿಗೂ ಅನುಮತಿಯನ್ನು ನೀಡಲಾಗಿಲ್ಲ ಶೀಘ್ರದಲ್ಲೇ ರಸ್ತೆ ಅಬಿವೃದ್ಧಿಗೆ ಕ್ರಮಗೊಳ್ಳಲಾಗುವುದು ಎಂಬ ವಿಶ್ವಾಸವನ್ನು ನೀಡುವ ಮೂಲಕ ಸ್ಪಂಧಿಸಿದ್ದಾರೆ.

Exit mobile version