UN NETWORKS
ಉಳ್ಳಾಲ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು(ಗ್ರಾ), ನಗರಸಭೆ ಉಳ್ಳಾಲ ಮತ್ತು ಯೆನೆಪೋಯ ಮೆಡಿಕಲ್ ವೈದ್ಯಕೀಯ ಕಾಲೇಜು ದೇರಳಕಟ್ಟೆ ಇದರ ಜಂಟಿ ಆಶ್ರಯದಲ್ಲಿ `ವಿಶ್ವ ಸ್ತನ್ಯಪಾನ ಸಪ್ತಾಹ’ ಹಾಗೂ `ಬೇಟಿ ಪಡಾವೊ’ ಕಾರ್ಯಕ್ರಮ ಮಂಗಳವಾರ ಉಳ್ಳಾಲ ನಗರಸಭೆ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಹಾರ ಮತ್ತು ಪೋಷಣಾ ಮಂಡಳಿಯ ಅಧಿಕಾರಿ ದಶರಥ ಪಾಂಡೆ ವಹಿಸಿ ಮಾತನಾಡಿ ತಾಯಿ ಹಾಲಿನಲ್ಲಿನ ಕೊಲೆಸ್ಟ್ರಾಲ್ ಅಂಶ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬಗ್ಗೆ ತಿಳಿಸಿದರು. ಯೆನೆಪೆಪೋಯ ಮೆಡಿಕಲ್ ಕಾಲೇಜು, ಗ್ರಾಮೀಣ ಆರೋಗ್ಯ ಮತ್ತು ಅಭಿವೃದ್ಧಿ ಕೇಂದ್ರ ವೈದ್ಯ ಡಾ| ಸುದರ್ಶನ್ ಸ್ತನ್ಯಪಾನವನ್ನು ನೀಡುವುದರಿಂದ ತಾಯಿ ಮತ್ತು ಮಗುವಿಗೆ ಆಗುವ ಪ್ರಯೋಜನದ ಬಗ್ಗೆ , ತಾಯಿ ಹಾಲಿನಲ್ಲಿರುವ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿದರು.
ಮೊಗವೀರಪಟ್ನ ಶಾಲೆಯ ಮುಖ್ಯೋಪಾಧ್ಯಾಯಿನಿ ವೇದಾವತಿ ಸೂಕ್ತ ಮಾಹಿತಿ ನೀಡಿದರು. ನಗರ ಸಂಯೋಜಕ ಮಕ್ಕಳ ಸಹಾಯವಾಣಿಯ ಯೋಗೀಶ್ ಮಲ್ಲಿಗೆ ಮಾಡರವರು ಬೇಟಿ ಬಚಾವೊ, ಬೇಟಿ ಪಡಾವೊ, ಹೆಣ್ಣು ಮಕ್ಕಳನ್ನು ರಕ್ಷಿಸುವ, ಶಿಕ್ಷಣ ಕೊಡಿಸುವ ವಿಷಯದ ಕುರಿತು ಮಾಹಿತಿ ನೀಡಿದರು. ಹೆಣ್ಣು ಮಕ್ಕಳ ಹಕ್ಕು, ಪಾಲಕರ ಸಮಾಜದ ಕರ್ತವ್ಯ, ಉಚಿತ ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆ,ಮಕ್ಕಳ ಹಕ್ಕು ಕಾಯ್ದೆ , ಮಕ್ಕಳ ಸಹಾಯವಾಣಿಯ ಬಗ್ಗೆ ತಿಳಿಸಿದರು. ಉಳ್ಳಾಲ ವಲಯ ಮೇಲ್ವಿಚಾರಕಿ ಕಲ್ಪನಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ ವಂದಿಸಿದರು.