UN NETWORKS
ಉಳ್ಳಾಲ: ಅರಣ್ಯ ಇಲಾಖೆಯಿಂದ ಪ್ರಸಕ್ತ ವರ್ಷದಲ್ಲಿ 80 ಹಾವುಗಳನ್ನು ಹಿಡಿದ ದಾಖಲೆಯಿದ್ದು, ಇದರಲ್ಲಿ ಹಲವು ಕೇರೆ ಹಾವುಗಳನ್ನೇ ಸಿಬ್ಬಂದಿ ಹಿಡಿದಿದ್ದಾರೆ ಎಂದು ಮಂಗಳೂರು ವಲಯ ಅರಣ್ಯ ಅಧಿಕಾರಿ ಪಿ.ಶ್ರೀಧರ್ ಹೇಳಿದರು.
ಜನ ಬೌಗೋಳಿಕ ಪರಿಸರವನ್ನು ಬದಲಾಯಿಸಿದ್ದಾರೆ. ಅದಕ್ಕಾಗಿ ಪ್ರಾಣಿ ಪಕ್ಷಿಗಳನ್ನು ಹತ್ಯೆಗೈಯ್ಯಲಾಗಿದೆ. ಸಾಮಾಜಿಕ ಪರಿಸರ ಕಾಳಜಿಯಿಲ್ಲದಿದ್ದರೆ, ಪರಿಸರ ಬೆಳೆಸುವ ಮನೋಭಾವ ಬೆಳೆಯಲು ಅಸಾಧ್ಯ . ಮಂಗಳೂರಿನಲ್ಲಿ ಕೇರೆ ಹಾವು , ಮುಂಗುಸಿ, ಕಾಡು ಬೆಕ್ಕು ಬಂದರೂ ಜನ ಅರಣ್ಯ ಇಲಾಖೆಗೆ ಕರೆ ಮಾಡುತ್ತಾರೆ. ಅದರಂತೆ ಈ ವರ್ಷ ಸುಮಾರು 80 ಹಾವುಗಳನ್ನೇ ಹಿಡಿದ ದಾಖಲೆ ಇಲಾಖೆಯಲ್ಲಿದೆ. ಜನರಲ್ಲಿ ನಾವು ಮಾತ್ರ ಬದುಕಬೇಕು ಅನ್ನುವ ಮನೋಭಾವ ಬೆಳೆದಿದೆ. ಅದು ಬದಲಾಗಬೇಕಿದೆ. ಸಾಮಾಜಿಕ ಕಳಕಳಿಯ ಜೊತೆಗೆ ಪರಿಸರವನ್ನು ಬೆಳೆಸುವ ಮನೋಭಾವವನ್ನು ಯುವಸಮುದಾಯ ಬೆಳೆಸಿಕೊಳ್ಳಲಿ ಎಂದರು.
ಪರಿಸರಪ್ರೇಮಿ ಆರ್ ಜೆ ರಶ್ಮಿ ಮಾತನಾಡಿ ಮಕ್ಕಳಿಗೆ ಪರಿಸರವನ್ನು ಆರಾಧಿಸುವ ಕಲೆಯನ್ನು ಹೆತ್ತವರು ಬೆಳೆಸಿಕೊಳ್ಳುವ ಮೂಲಕ ಸ್ವತೃಪ್ತಿಯ ಅನುಭವ ಲಭಿಸಲು ಸಾಧ್ಯ. ಸಭೆ, ಸಮಾರಂಭಗಳಲ್ಲಿ ಹೆಚ್ಚು ಗಿಡಗಳನ್ನು ವಿತರಿಸುವ ಕಾರ್ಯ ಆಗಬೇಕಿದೆ. ತಾನು ಪರಿಸರದ ಕುರಿತು 3 ವರ್ಷಗಳಿಂದ ಹಮ್ಮಿಕೊಂಡಂತಹ ಜಾಗೃತಿ ಕಾರ್ಯಕ್ರಮಗಳಿಗೆ ಬೆಂಬಲ ದೊರೆತಿರಲಿಲ್ಲ. ಬಳಿಕ ದಿವ್ಯಾಸ್ ಸಂಸ್ಥೆ ಬೆಂಬಲವಾಗಿ ನಿಂತಿದ್ದರಿಂದಾಗಿ ಮಣ್ಣು, ಗೋಮಯ, ಗೋಮೂತ್ರಗಳಿಂದ ರಚಿಸಿದ ಸೀಡ್ ಬಾಲ್ ಅನ್ನು ಆಶ್ರಮಕ್ಕೆ ವಿತರಿಸಿ ಅದರಲ್ಲಿ ಗಿಡ ಬೆಳೆದು ಯಶಸ್ವಿಯಾಗಿ, ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಬೆಳೆಸಿದ ಸೀಡ್ ಬಾಲ್‍ನಲ್ಲಿ ಗಿಡಗಳು ಬೆಳೆದು ಯೋಜನೆ ಯಶಸ್ವಿಯಾಗಿದೆ ಎಂದರು.
ಉಳ್ಳಾಲ ಶ್ರೀ ಚೀರುಂಭ ಭಗವತಿ ತೀಯ ಸಮಾಜ ಸೇವಾ ಸಂಘ ಉಳ್ಳಾಲದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಗಂಗಾಧರ್ ಉಳ್ಳಾಲ್, ಶ್ರೀ ಚೀರುಂಭ ಭಗವತಿ ತೀಯ ಸಮಾಜ ಸೇವಾ ಸಂಘ ಕೋಶಾಧಿಕಾರಿ ಯಶವಂತ ಪಿ.ಉಚ್ಚಿಲ್, ಕಾರ್ಯದರ್ಶಿ ಬಾಬು ಬೆಳ್ಚಾಡ, ಪ್ರಧಾನ ಸಂಚಾಲಕರು ನಾಗೇಶ್ ತೊಕ್ಕೊಟ್ಟು, ಅರ್ಚಕರು ಮಂಜಪ್ಪ ಕಾರ್ನವರ್ , ಅಪ್ಪು ಆತಾರ್, ಪರಿಸರ ಹೋರಾಟ ಗಾರ, ಅಂತರಾಷ್ಟ್ರೀಯ ಕಲಾವಿದ ದಿನೇಶ್ ಹೊಳ್ಳ, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಆರ್ .ಜೆ ರಶ್ಮಿ ಉಳ್ಳಾಲ್, ಮಂತ್ರ ನಾಟ್ಯಕಲಾ ಗುರುಕುಲದ ಅಧ್ಯಕ್ಷೆ ಶಕೀಲಾ ಜನಾರ್ದನ್ ಮುಖ್ಯ ಅತಿಥಿಗಳಾಗಿದ್ದರು.
ಮಂತ್ರ ನಾಟ್ಯಕಲಾ ಗುರುಕುಲ ನಿರ್ದೇಶಕ ವಿದ್ವಾನ್ ಶ್ರಾವಣ್ ಉಳ್ಳಾಲ್ ಸ್ವಾಗತಿಸಿದರು. ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.ಇದೇ ಸಂದರ್ಭ ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ವಠಾರದಲ್ಲಿ ಗಿಡಗಳನ್ನು ನೆಡಲಾಯಿತು.