Site icon Ullalavani

ಶೆಟಲ್ ಬ್ಯಾಡ್ಮಿಂಟನ್ ಮನೋರಂಜನೆ, ವ್ಯಾಯಮಕ್ಕಾಗಿಯೂ ಆಡಬಹುದು : ವಿಷ್ಣು ಹೆಬ್ಬಾರ್

UN NETWORKS

ಕೊಣಾಜೆ: ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಈಗೀಗ ಅಂತರ್-ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶವು ಉತ್ತಮ ಸಾಧನೆಯನ್ನು ಮಾಡುತ್ತಿದ್ದು ಹೆಚ್ಚು ಜನಪ್ರಿಯಗೊಂಡಿದೆ. ಇದನ್ನು ಕೇವಲ ಸ್ಪರ್ಧೆಗಾಗಿ ಮಾತ್ರವಲ್ಲದೇ ಮನೋರಂಜನೆಯ ದೃಷ್ಟಿಯಲ್ಲಿ ಮತ್ತು ವ್ಯಾಯಾಮಕ್ಕಾಗಿ ಆಡಬಹುದು ಎಂದು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣು ಹೆಬ್ಬಾರ್ ಅಭಿಪ್ರಾಯಪಟ್ಟರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮಂಗಳೂರು ದಕ್ಷಿಣ ವಲಯ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ದೇರಳಕಟ್ಟೆ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳೂರು ದಕ್ಷಿಣ ವಲಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ-ಬಾಲಕಿಯರ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ತ್ಯಾಗಂ ಹರೇಕಳ ಮಾತನಾಡಿ ಇವತ್ತಿನ ಆಧುನೀಕತೆಯ ಜೀವನದಲ್ಲಿ ಹೆಚ್ಚು ಶ್ರೀಮಂತರು ನೆಗಾಡುವುದಕ್ಕೂ ಹಣ ಕೊಟ್ಟು ನೆಗಾಡಿ ಬರುತ್ತಿದ್ದಾರೆ. ನಿದ್ರೆ ಬರುವುದಕ್ಕೂ ಮಾತ್ರೆಗಳನ್ನು ಸೇವಿಸುತ್ತಾರೆ. ಹಾಗಾಗಿ ಎಲ್ಲವನ್ನೂ ಹಣ ಕೊಟ್ಟು ಪಡೆಯಬಹುದು. ಆದರೆ ಉತ್ತಮ ಆರೋಗ್ಯವನ್ನು ಹಣದಿಂದ ಸಂಪಾದನೆ ಮಾಡಲು ಸಾಧ್ಯವಿಲ್ಲ. ಸದೃಢ ಆರೋಗ್ಯಕ್ಕೆ ಉತ್ತಮ ವ್ಯಾಯಾಮ ಬಹಳ ಮುಖ್ಯ. ಪ್ರತೀ ನಿತ್ಯ ಒಂದು ಗಂಟೆಗಳ ಕಾಲ ವ್ಯಾಯಾಮ ಅಥವಾ ಯಾವುದೇ ಆಟೋಟಗಳಲ್ಲಿ ಭಾಗವಹಿಸುವುದರಿಂದ ಮಾತ್ರವೇ ಸದೃಢವಾದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವೆಂದು ಹೇಳಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲ ಮಹಾಬಲೇಶ್ವರ ನಾಯ್ಕ ಅವರು ವಹಿಸಿದ್ದರು.

ತಾಲೂಕಿನಿಂದ ಬಾಲಕರ ವಿಭಾಗದಲ್ಲಿ 13 ತಂಡಗಳು ಮತ್ತು ಬಾಲಕಿಯರ ವಿಭಾಗದಲ್ಲಿ 11 ತಂಡಗಳು ಭಾಗವಹಿಸಿದ್ದವು.
ಅತಿಥಿಗಳಾಗಿ ನೋಡಲ್ ದೈಹಿಕ ಶಿಕ್ಷಣ ಶಿಕ್ಷಕರಾದ ಉರ್ಬನ್ ಮಸ್ಕರೇನಸ್ ಮತ್ತು ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.
ಶಿಕ್ಷಕ ರಮೇಶ್ ಸ್ವಾಗತಿಸಿದರು, ಶಿಕ್ಷಕಿ ರೂಪಶ್ರೀ ಬಲ್ಲಾಳ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಬೇಬಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

Exit mobile version