Site icon Ullalavani

ಕಲ್ಕಟ್ಟ-ಮಂಜನಾಡಿ ಸೇತುವೆಯಲ್ಲಿ ಬಿರುಕು ಆತಂಕದಲ್ಲಿ ಸ್ಥಳೀಯರು

UN NETWORKS

ಮಂಜನಾಡಿ: ನಾಟೆಕಲ್ ಮುಡಿಪು ಸಂಪರ್ಕಿಸುವ ರಸ್ತೆಯ ಕಲ್ಕಟ್ಟ-ಮಂಜನಾಡಿ ದೇವಸ್ಥಾನ ಸಮೀಪ ಇರುವ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.

ಸುಮಾರು70-75 ವರ್ಷದ ಹಳೆಯದಾದ ಸೇತುವೆಯ ಮೇಲ್ಭಾಗದ ಮೂರು ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಸೇತುವೆಯ ಕೆಳಭಾಗದಲ್ಲಿ ಸಿಮೆಂಟು ಉದುರಿದ್ದು, ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ತಿಂಗಳ ಹಿಂದೆ ಸೇತುವೆಯ ಮೇಲಿನ ಭಾಗದಲ್ಲಿ ಒಂದು ಕಡೆಯಲ್ಲಿ ಮಾತ್ರ ಬಿರುಕು ಇತ್ತು ಇದೀಗ ಮೂರು ಕಡೆಗಳಲ್ಲಿ ಡಾಮಾರಿನಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದನ್ನು ಬೈಕಿನಲ್ಲಿ ತೆರಳುತ್ತಿದ್ದ ಸ್ಥಳೀಯ ಯುವಕರಾದ ಹ್ಯಾರೀಸ್ ಮತ್ತು ಇಕ್ಬಾಲ್ ಮಂಜನಾಡಿ ಪಂಚಾಯಿತಿ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಸ್ಥಳೀಯರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸುವ ಭರವಸೆಯನ್ನು ನೀಡಿದ್ದಾರೆ. ಸ್ಥಳದಲ್ಲಿ ಘನವಾಹನಗಳು ಸೇತುವೆಯಲ್ಲಿ ಒಂದೊಂದಾಗಿ ಚಲಿಸುವಂತೆ ಸ್ಥಳೀಯರು ಕೋರಿಕೊಂಡ ಹಿನ್ನೆಲೆಯಲ್ಲಿ ಏಕಕಾಲಕ್ಕೆ ಒಂದೊಂದೇ ವಾಹನಗಳು ಸೇತುವೆಯಲ್ಲಿ ತೆರಳುತ್ತಿದೆ.

1 ಕೋಟಿ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ
ನಾಟೆಕಲ್ ಮಾರ್ಗವಾಗಿ ಮುಡಿಪು, ವಿಟ್ಲ, ಸಾಲೆತ್ತೂರು, ಬಿ.ಸಿ.ರೋಡು, ಕೇರಳದ ಮಂಜೇಶ್ವರವನ್ನು ಸಂಪರ್ಕಿಸುವ ರಸ್ತೆ ಇದಾಗಿದೆ. 70-75 ವರ್ಷಗಳ ಇತಿಹಾಸವಿರುವ ಸೇತುವೆ ತಿಂಗಳಿಂದ ಬಿರುಕು ಬಿಡಲು ಆರಂಭವಾಗಿದೆ. ನಾಟೆಕಲ್ ನಿಂದ ಮುಡಿಪು ರಸ್ತೆಗೆ ಡಾಮರೀಕರಣ ನಡೆಸುವ ಸಂದರ್ಭ ಸಚಿವ ಯು.ಟಿ.ಖಾದರ್ ಅವರಿಗೆ ಸೇತುವೆ ಅಭಿವೃದ್ಧಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ 1 ಕೋಟಿ ರೂ. ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಆದರೆ ಮತ್ತೆ ಜೋರಾಗಿ ಮಳೆ ಬಂದು ಸೇತುವೆಯಡಿ ನೀರು ಉಕ್ಕಿ ಹರಿದಲ್ಲಿ ಸೇತುವೆ ಸಂಪೂರ್ಣ ಕುಸಿಯುವ ಭೀತಿಯಿದೆ. ಅದಕ್ಕೂ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಪರಿಹಾರ ಕ್ರಮ ಕೈಗೊಳ್ಳಬೇಕಿದೆ. ಶಿಕ್ಷಣ ಸಂಸ್ಥೆಗಳು, ಪ್ರಾರ್ಥನಾಲಯಗಳು ಇರುವ ಪ್ರದೇಶದಲ್ಲಿ ದಿನನಿತ್ಯ 500 ಕ್ಕೂ ಅಧಿಕ ವಾಹನಗಳು ಸಂಚರಿಸುತ್ತಿದೆ.
ಇಸ್ಮಾಯಿಲ್ ದೊಡ್ಡಮನೆ
ಮಾಜಿ ಅಧ್ಯಕ್ಷರು
ಮಂಜನಾಡಿ ಗ್ರಾಮ ಪಂಚಾಯಿತಿ

ಒಂದು ತಿಂಗಳ ಹಿಂದೆ ಬೈಕಿನಲ್ಲಿ ತೆರಳುವ ಸಂದರ್ಭ ಸೇತುವೆ ಒಂದು ಕಡೆಯಲ್ಲಿ ಮಾತ್ರ ಬಿರುಕು ಬಿಟ್ಟಿತ್ತು. ಮತ್ತೆ ಇಂದು ಬೈಕಿನಲ್ಲಿ ಚಲಿಸುವಾಗ ಮೂರು ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೆಳಗಿನ ಭಾಗದಲ್ಲಿಯೂ ಅಲ್ಲಲ್ಲಿ ಸಿಮೆಂಟು ಕುಸಿದಿರುವುದು ಕಾಣುತ್ತಿದ್ದು, ಒಂದು ಪಾಶ್ರ್ವ ಸಂಪೂರ್ಣ ವಾಲಿನಿಂತ ಸ್ಥಿತಿಯಲ್ಲಿ ಕಂಡುಬಂದಿತ್ತು. ಅದಕ್ಕಾಗಿ ಪಂಚಾಯಿತಿ ಆಡಳಿತಕ್ಕೆ ಮಾಹಿತಿ ನೀಡಿದ್ದೇವೆ ಎಂದು ಸ್ಥಳೀಯ ಹ್ಯಾರೀಸ್ ತಿಳಿಸಿದ್ದಾರೆ.

Exit mobile version