UN NETWORKS
ಉಳ್ಳಾಲ: ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಳಜಿ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದ್ದು, ಮುನ್ನೂರು ಯುವಕ ಮಂಡಲದಂತಹ ಸಂಘಟನೆಗಳು ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯ ನಡೆಸಿದಾಗ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ| ರೋಹನ್ ಮೊನಿಸ್ ಅಭಿಪ್ರಾಯಪಟ್ಟರು.
ಕಳೆದ ನಾಲ್ಕು ವರ್ಷದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಕಣಚೂರು ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ. ನೂರಾರು ಆರೋಗ್ಯ ಶಿಬಿರಗಳ ಮೂಲಕ ಲಕ್ಷಾಂತರ ರೋಗಿಗಳಿಗೆ ಆರೋಗ್ಯ ಸೇವೆಯನ್ನು ನಡೆಸಿದ್ದು, ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದರಿಂದ ಇಂತಹ ಶಿಬಿರಗಳನ್ನು ಆಯೋಜಿಸಲು ಸಹಕಾರಿಯಾಗುತ್ತದೆ ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕಾದರೆ ಜನರಿಗೆ ಮಾಹಿತಿ ಸಿಗುವ ಕಾರ್ಯ ಆಗಬೇಕು ಎಂದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ನ್ಯಾಯವಾದಿ ಸದಾಶಿವ ಉಳ್ಳಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಜಿಲ್ಲಾ ಸರಕಾರಿ ವೆನ್‍ಲಾಕ್ ಆಸ್ಪತ್ರೆಯ ಮೂತ್ರ ರೋಗತಜ್ಞ ಡಾ| ಸದಾನಂದ ಪೂಜಾರಿ, ಕಣಚೂರು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ| ಆಶಾ ಆಚಾರ್, ಮುನ್ನೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮುಸ್ತಫಾ ಮುನ್ನೂರು, ತೊಕ್ಕೊಟ್ಟು ಶ್ರೀ ಜೈ ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ದೇವದಾಸ್, ಪೆರ್ಮನ್ನೂರು ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಉಷಾ ಎನ್., ಬಟ್ಟೆದಡಿ ಜೈ ಹನುಮಾನ್ ಕ್ರೀಡಾ ಮಂಡಳಿ ಅಧ್ಯಕ್ಷ ಕರುಣಾಕರ ಕಂಪ, ಸಲಹೆಗಾರ ಕೆ. ಕೃಷ್ಣಪ್ಪ ಸಾಲ್ಯಾನ್, ಅಧ್ಯಕ್ಷ ಎಸ್. ಶಶೀಂದ್ರ ಕುಕ್ಯಾನ್ ಉಪಸ್ಥಿತರಿದ್ದರು.
ಹರೀಶ್ ಮುಂಡೋಳಿ ಸ್ವಾಗತಿಸಿದರು. ಜಯ ದೆಸೋಡಿ ವಂದಿಸಿದರು. ಮನೋಹರ ಕಾರ್ಯಕ್ರಮ ನಿರ್ವಹಿಸಿದರು.