ತೊಕ್ಕೊಟ್ಟು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಡಾ| ಜಯಮಾಲಾ ಇವರು ಬಾಳೆಪುಣಿಯ ಹೂಹಾಕುವಕಲ್ಲು ಸರಕಾರಿ ಶಾಲೆಯಲ್ಲಿ ಜೂ.26 ರಂದು ನಡೆಯಲಿರುವ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಯಸ್ ಗಟ್ಟಿ ಹೇಳಿದ್ದಾರೆ.
ತೊಕ್ಕೊಟ್ಟು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ತ್ರೀಶಕ್ತಿ , ಮಹಿಳಾ ಸಂಘಟನೆಗಳೂ ,ಅಭಿಮಾನಿಗಳು ಹಾಗೂ ವಿವಿಧ ಗ್ರಾಮ ಪಂಚಾಯಿತಿಗಳ ಸಹಕಾರದೊಂದಿಗೆ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿರುವ ಹಿರಿಯ ನಟಿ ಹಾಗೂ ಸಚಿವೆ ಜಯಮಾಲಾ ಉದ್ಘಾಟಿಸಲಿದ್ದಾರೆ. ಜಿಲ್ಲೆಯಲ್ಲಿ ನಾಲ್ಕು ದಿನಗಳ ಭೇಟಿಯನ್ನು ಹಮ್ಮಿಕೊಂಡಿರುವ ಸಚಿವರು ಜಿಲ್ಲೆಯ ವೈಶಿಷ್ಟ್ಯ ಮಾಸ ಆಷಾಢದ ತಿಂಡಿ ತಿನಿಸುಗಳ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಪ್ರತಿವರ್ಷದಂತೆ ಅಂಗನವಾಡಿಗಳಲ್ಲಿ ನಡೆಯಲಿರುವ ಪೌಷ್ಠಿಕ ಆಹಾರ ಸಪ್ತಾಹದಲ್ಲಿಯೂ ಭಾಗವಹಿಸಲಿದ್ದಾರೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಬಂಟ್ವಾಳ ತಾ.ಪಂ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಮುಡಿಪು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ, ಕಚೇರಿ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಕೈರಂಗಳ, ಬಾಳೆಪುಣಿ ಗ್ರಾ. ಪಂ ಸದಸ್ಯ ನಾಸೀರ್ ನಡುಪದವು ಉಪಸ್ಥಿತರಿದ್ದರು.