UN NETWORKS
ಕೊಣಾಜೆ: ಸಮಾಜದಲ್ಲಿ ಅನ್ನವನ್ನು ಬಿಸಾಡುವ ಯುವಸಮುದಾಯ ಬಹಳಷ್ಟಿದ್ದಾರೆ. ಈ ನಡುವೆ ಅನ್ನದ ಅಗುಳಿನ ಬೆಲೆ ಗೊತ್ತಾಗುವಂತೆ ವಿದ್ಯಾರ್ಥಿಗಳನ್ನು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯ ಉತ್ತಮವಾದುದು ಎಂದು ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್ ಹೇಳಿದ್ದಾರೆ.
ಒಂದೇ ಕಾಲೇಜಿನ ಸುಮಾರು 800 ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುವ ಕಾರ್ಯ ರಾಜ್ಯದ ಇತರೆಡೆ ಎಲ್ಲಿಯೂ ಆಗಲಿಲ್ಲ. ವಿದ್ಯಾರ್ಥಿಗಳು ಗದ್ದೆಗಳಲ್ಲಿ ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಿರುವ ವಾತಾವರಣ ಕೊಣಾಜೆಯಲ್ಲಿದೆ. ಕೃಷಿ ಬದುಕಿನ ಅನುಭವವನ್ನು ಹಂಚುವ ಕಾರ್ಯ ಆಗಿದೆ. ಕಲಿಕೆಯ ಜೊತೆಗೆ ಕೃಷಿ ಕಾರ್ಯದ ಮೂಲಕ ಮನರಂಜನೆಯ ಪಾಠವೂ ಆಗಿದೆ. ಈ ಮೂಲಕ ಯುವ ವಿದ್ಯಾರ್ಥಿಗಳಲ್ಲಿ ಪ್ರತಿಯೊಂದು ಅನ್ನದ ಅಗುಳಿನ ಬೆಲೆ ಗೊತ್ತಾಗಲು ಸಾಧ್ಯವಾಗಿದೆ ಎಂದರು.
ಅಣ್ಣೆರೆಪಾಲು ಬಳಿಯ 8 ಎಕರೆಯಲ್ಲಿರುವ ಗದ್ದೆಗಳಲ್ಲಿ 350 ವಿದ್ಯಾರ್ಥಿಗಳು ಬೆಳಗ್ಗಿನಿಂದ ಸಂಜೆಯವರೆಗೆ ನಾಟಿ ಕಾರ್ಯದಲ್ಲಿ ಭಾಗವಹಿಸಿದರು. ಈ ಸಂದರ್ಭ ಡಾ| ಪಿ.ದಯಾನಂದ ಪೈ-ಸತೀಶ್ ಪೈ ಪ್ರಥಮ ದರ್ಜೆ ಕಾಲೇಜು ರಥಬೀದಿ ಕಾಲೇಜಿನ ಪ್ರಾಂಶುಪಾಲ ರಾಜಶೇಖರ್ ಹೆಬ್ಬಾರ್, ಕಾಲೇಜಿನ ಇತಿಹಾಸ ವಿಭಾಗ ಮುಖ್ಯಸ್ಥ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಧಿಕಾರಿ ಡಾ| ನವೀನ್ ಎನ್.ಕೊಣಾಜೆ, ಗ್ರಾ. ಪಂ. ಸದಸ್ಯ ರಾಮಚಂದ್ರ ಗಟ್ಟಿ, ಗ್ರಾಮಸ್ಥ ನರ್ಸು ಗೌಡ ಮೊದಲಾದವರು ಉಪಸ್ಥಿತರಿದ್ದರು.