Site icon Ullalavani

ಕೇಂದ್ರ ಸರಕಾರದ ಆಡಳಿತ ವೈಫಲ್ಯ ವಿರುದ್ಧ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆಗೆ ಸಜ್ಜು

UN NETWORKS

ತೊಕ್ಕೊಟ್ಟು: ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರು ನಿರಂತರವಾಗಿ ತೊಂದರೆ ಅನುಭವಿಸುತ್ತಿದ್ದು, ವಿಳಂಬ ನೀತಿ ಅನುಸರಿಸಿದ ಸಂಸದರ ಹಾಗೂ ಕೇಂದ್ರ ಸರಕಾರದ ಆಡಳಿತ ವೈಫಲ್ಯ ವಿರುದ್ಧ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆಗೆ ಸಿದ್ಧತೆ ನಡೆಸಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಹೇಳಿದ್ದಾರೆ.

ತೊಕ್ಕೊಟ್ಟು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕೇಂದ್ರ ಸರಕಾರದ ಆಡಳಿತ ವೈಫಲ್ಯ ಖಂಡಿಸಿ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಪ್ರಧಾನಿ ಮೋದಿ ಅವರು ಆಡಳಿತದ ಚುಕ್ಕಾಣಿ ಹಿಡಿದು ನಾಲ್ಕು ವರ್ಷ ಕಳೆದರೂ ಚುನಾವಣಾ ಪೂರ್ವ ನೀಡಿದ ಯಾವ ಭರವಸೆಯನ್ನೂ ಈಡೇರಿಸಿಲ್ಲ . ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲಬೆಲೆ ಹೆಚ್ಚಿದ್ದರೂ ಯುಪಿಎ ಸರಕಾರದ ಅವಧಿಯಲ್ಲಿ ಬೆಲೆ ನಿಯಂತ್ರಣಕ್ಕೆ ತಂದಿತ್ತು. ಈಗ ತೈಲ ಬೆಲೆ ಬ್ಯಾರಲ್ ಗೆ ಕಡಿಮೆಯಾದರೂ ಮೋದಿ ಕಡಿತಗೊಳಿಸಿಲ್ಲ. ನೋಟು ಅಮಾನ್ಯೀಕರಣ, ಜಿಎಸ್ ಟಿ ಅಂಬಾನಿ ಅದಾನಿ ಯಂತಹ ಬಂಡವಾಳಶಾಹಿಗಳಿಗೆ ಸಹಾಯ ಮಾಡಿತೇ ವಿನಹ ಜನಸಾಮಾನ್ಯರಿಗೆ ಪ್ರಯೋಜನವಾಗಿಲ್ಲ.

ರೈತರೇ ಬೆನ್ನೆಲುಬು ಎಂದು ಮಾತು ಮಾತಿಗೂ ಹೇಳಿಕೊಳ್ಳುವ ಮೋದಿ ರೈತರ ಸಾಲ ಮನ್ನಾ ಮಾಡಿಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿದ ಎಚ್.ಡಿ. ಕುಮಾರಸ್ವಾಮಿ ರೈತರ ಸಾಲ ಮನ್ನಾ  ಮಾಡುವ ಕ್ರಾಂತಿಕಾರಿ ಆದೇಶ ಹೊರಡಿಸಿದ್ದು ಅದೇ ಕೆಲಸಕ್ಕೆ ಕೇಂದ್ರ ಸರಕಾರ ಸ್ಪಂದಿಸಬೇಕಿದೆ. ಎಂಟು ವರ್ಷಗಳಿಂದ ತೊಕ್ಕೊಟ್ಟು-ಪಂಪ್ ವೆಲ್ ಫ್ಲೈಓವರ್ ಕಾಮಗಾರಿ ವಿಳಂಬವಾಗಿರುವಾಗ ಎಚ್ಚೆತ್ತುಕೊಳ್ಳದ ಸಂಸದರು ಇದೀಗ ಲೋಕಸಭೆ ಚುನಾವಣೆ ಹತ್ತಿರ ಬರುವಾಗ ಎಚ್ಚೆತ್ತುಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಂಸದರ ವಿಳಂಬ ನೀತಿಯ ವಿರುದ್ಧ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದು, ಸೋಮವಾರದಂದು ದಿನ ನಿಗದಿ ಪಡಿಸಲಾಗುವುದು ಎಂದರು.

ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಮಾನ್, ಉಪಾಧ್ಯಕ್ಷ ಮಹಮ್ಮದ್ ಮುಸ್ತಫಾ, ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಸಾಮಣಿಗೆ, ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ, ಕಿಶೋರ್ ಗಟ್ಟಿ ಮುಂಡೋಳಿ, ಪುರುಷೋತ್ತಮ್ ಅಂಚನ್, ದೇವಣ್ಣ ಶೆಟ್ಟಿ, ವಿನೋದ್ ಕುಂಪಲ ಉಪಸ್ಥಿತರಿದ್ದರು.

Exit mobile version