UN NETWORKS
ಹರೇಕಳ: ಜಗತ್ತಿನಾದ್ಯಂತ ಖ್ಯಾತಿಯನ್ನು ಗಳಿಸಿರುವ ಹರೇಕಳ ಮೆಣಸು ಸಹಿತ ಇತರೆ ಕೃಷಿಕಾಯಕ ನಡೆಸುವ ಹರೇಕಳದ ಎಕರೆಗಟ್ಟಲೆ ಭೂಮಿ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಹಾಗೂ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ಬಂಜರು ಆಗಿ ಪರಿವರ್ತನೆಗೊಂಡಿದೆ ಎಂದು ರೈತ ಸಂಘ(ಹಸಿರು ಸೇನೆಯ ) ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಹೇಳಿದ್ದಾರೆ.
ಹತ್ತು ವರ್ಷಗಳ ಹಿಂದೆ ಈ ಭಾಗದಲ್ಲೂ ಗುಡ್ಡ ಅಗೆದು ರಸ್ತೆ ನಿರ್ಮಿಸಲಾಯಿತು. ಆದರೆ ಇದು ರೈತರ ಪಾಲಿಗೆ ಶಾಪವಾಯಿತು. ರಸ್ತೆಯೇನೋ ಆಯಿತು, ಆದರೆ ನೀರು ಹರಿಯಲು ಚರಂಡಿ ವ್ಯವಸ್ಥೆಯಾಗಲಿಲ್ಲ. ಇದರ ಪರಿಣಾಮ ಒಂದೆಡೆ ಗುಡ್ಡದಿಂದ ಮಳೆನೀರು ಮಣ್ಣಿನೊಂದಿಗೆ ಹರಿದು ಗದ್ದೆ ಸೇರಿತು. ಪ್ರತೀ ಮಳೆಗಾಲದಲ್ಲೂ ಗದ್ದೆಗೆ ನೀರು ಹರಿದು ಸಂಪೂರ್ಣ ಮುಳುಗಡೆಯಾಗುತ್ತಾ ಹೋಯಿತು. ಪ್ರಸ್ತುತ ದಿನಗಳಲ್ಲಿ ಇಲ್ಲಿನ ಗದ್ದೆಗಳೆಲ್ಲವೂ ಮಣ್ಣು ತುಂಬಿ ಬರಡು ಭೂಮಿಯಂತಾಗಿದೆ. ಮಳೆಗಾಲದಲ್ಲಿ ನೆರೆಯ ಸಮಸ್ಯೆ ಕಾಡುವಂತಾಗಿದೆ. ಹರೇಕಳದಲ್ಲಿ ತಮ್ಮ ವಶದಲ್ಲಿರುವ ಗದ್ದೆಯಲ್ಲಿ ಕೃಷಿ ಮಾಡೋಣ ಎಂದು ಹಲವು ಕುಟುಂಬಗಳು ಮುಂದಾದರೂ ಹೂಳಿನಿಂದಾಗಿ ಒಂದು ಬೆಳೆಯನ್ನೂ ತೆಗೆಯಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಕಳೆದ ಹತ್ತು ವರ್ಷಗಳಿಂದಲೂ ರೈತಸಂಘ (ಹಸಿರು ಸೇನೆ) ಅಧಿಕಾರಿ, ಜನಪ್ರತಿನಿಧಿಗಳಲ್ಲಿ ಅಳಲು ತೋಡಿಕೊಳ್ಳತ್ತಲೇ ಇದೆ ಆದರೂ ಪ್ರಯೋಜನವಾಗಿಲ್ಲ ಅನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
`ರಸ್ತೆ ನಿರ್ಮಾಣ ಸಂದರ್ಭ ಚರಂಡಿ ನಿರ್ಮಿಸದ ಪರಿಣಾಮ ಗದ್ದೆಗಳೆಲ್ಲವೂ ಮಣ್ಣು, ನೀರು ತುಂಬಿ ಕೃಷಿಗೆ ಅಯೋಗ್ಯವಾಗಿದೆ. ಕೃಷಿ ಬಗ್ಗೆ ವೇದಿಕೆಗಳಲ್ಲಿ ಮಾತನಾಡುವವರೂ ಗಮನಹರಿಸಿಲ್ಲ, ಇದರಿಂದ ನಮ್ಮಲ್ಲಿ ಕೃಷಿಭೂಮಿಯಿದ್ದರೂ ನಿಷ್ಪ್ರಯೋಜಕವಾಗಿದೆ’
ಬಾಸ್ಕರ ರೈ ಹರೇಕಳ, ಸ್ಥಳೀಯ ಕೃಷಿಕ