UN NETWORKS
ಸೋಮೇಶ್ವರ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕಡಲ ತಟದಲ್ಲಿ ಆತಂಕದಲ್ಲಿದ್ದ ಜನತೆ ಬುಧವಾರ ಮಧ್ಯಾಹ್ನ ಸ್ವಲ್ಪ ಮಟ್ಟಿಗೆ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದತೆಂಯೇ ಸ್ವಲ್ಪ ನಿರಾಳರಾದರೂ ಸಂಜೆಯಿಂದ ಸುರಿಯುತ್ತಿರುವ ಮಳೆಗಿಂತಲೂ ಬಿರುಸಿನ ಗಾಳಿಗೆ ರಾತ್ರಿ ಮತ್ತೆ ಕಡಲು ಅಬ್ಬರಿಸಿದೆ.
ಉಚ್ಚಿಲದ ಚಂದ್ರಶೇಖರ್ ಅವರ ಮನೆ ಎರಡು ವರ್ಷ ಹಿಂದೆ ಹಾಗೂ ಯಮುನಾ ಅವರ ಮನೆ ಕಳೆದ ವರ್ಷ ಸಮುದ್ರ ಪಾಲಾಗಿತ್ತು. ಜೊತೆಗೆ ಹಲವು ಗೆಸ್ಟ್ ಹೌಸ್ ಧರೆಗುರುಳಿತ್ತು. ಈ ಭಾಗದಲ್ಲಿರುವ ತಟದಿಂದ ಸ್ವಲ್ಪ ದೂರದಲ್ಲಿರುವ ಮಣ್ಣಿನ ಗೋಡೆಯಿಂದ ನಿರ್ಮಿಸಲಾದ ಮುರಳೀ ಉಚ್ಚಿಲ ಅವರ ಹಳೆಯ ಮನೆ ಹಾಗೂ ರಾಮಚಂದ್ರ ಉಚ್ಚಿಲ ಅವರ ಮನೆಗೆ ಕೆಲವು ತಿಂಗಳ ಹಿಂದೆ ಸಮುದ್ರತಟವಾಸಿಗಳ ನಿದ್ದೆ ಗೆಡಿಸಿದ್ದ ಓಖೀ ಚಂಡಮಾರುತಕ್ಕೂ ಭಾಗಶಃ ಹಾನಿಯಾಗಿತ್ತು. ಸದ್ಯ ಉಚ್ಚಿಲ ವಸಂತ್ ಅವರ ಮಣ್ಣಿನ ಗೋಡೆಯ ಮನೆ ಉಳಿದಿದೆ. ಯೋಗೀಶ್ ಸೋಮೇಶ್ವರ ಮನೆಯೂ ಅಪಾಯದಂಚಿನಲ್ಲಿದೆ.
ಕಡಲ ಅಬ್ಬರ ತಡೆಯಲು ಉಳ್ಳಾಲ ಉಚ್ಚಿಲ ಭಾಗದಲ್ಲಿ ಶಾಶ್ವತ ಪರಿಹಾರ ಸಿಗಬೇಕಾದರೆ ಆಧುನಿಕ ತಂತ್ರಜ್ಞಾನ ಮಾತ್ರ ಸೂಕ್ತವಾಗುತ್ತದೆಯೇ ಹೊರತು ಸಾಧಾರಣ ತಂತ್ರಜ್ಞಾನ ಎಲ್ಲೂ ಸಾಲದು. ಹಾಗೆಯೇ ಕರಾವಳಿಯ ಮಂಜೇಶ್ವರದಲ್ಲಿ ಬಂದರು ನಿರ್ಮಾಣವಾಗುತ್ತಿದ್ದು ಅಲ್ಲಿಯೂ ಕಲ್ಲು ಹಾಕಲಾಗಿದ್ದು ಕೊರೆತ ಇಲ್ಲವೇ ಇಲ್ಲ. ಅಲ್ಲಿನ ಕಾಮಗಾರಿ ಯಶಸ್ವಿಯಾಗಿದೆ, ಇಲ್ಲಿ ಯಾಕೆ ಆಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.