Site icon Ullalavani

ದ.ಕ.ಜಿಲ್ಲೆಯ ಎರಡನೇ ನಗರವಾಗಿ ಉಳ್ಳಾಲ ಅಭಿವೃದ್ಧಿಗೆ ಯೋಜನೆ : ಯು.ಟಿ. ಖಾದರ್

UN NETWORKS

ಉಳ್ಳಾಲ: ದ.ಕ. ಜಿಲ್ಲೆಯಲ್ಲಿ ಮಂಗಳೂರಿನ ನಂತರದ ದೊಡ್ಡ ನಗರವಾಗಿ ಉಳ್ಳಾಲವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿರುವ ಯೋಜನೆಗಳನ್ನು ಉಳ್ಳಾಲದಲ್ಲಿಯೂ ಕಾರ್ಯಗತ ಮಾಡುತ್ತಿದ್ದು ಮುಂದಿನ ಐದು ವರ್ಷಗಳಲ್ಲಿ ಉಳ್ಳಾಲ ಮಹತ್ತರವಾದ ಬದಲಾವಣೆಯಾಗಲಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಉಳ್ಳಾಲ ಪೌರಸಮಿತಿಯಿಂದ ನಗರಸಭಾ ಮೈದಾನದಲ್ಲಿ ನಡೆದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ‘ಕರುನಾಡ ಮಾಣಿಕ್ಯ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ನಾನು ಇಂದು ಸಚಿವನಾಗಿ ಕಾರ್ಯ ನಿರ್ವಹಿಸುವಲ್ಲಿ ಉಳ್ಳಾಲ ಕ್ಷೇತ್ರದ ಸರ್ವಧರ್ಮದ ಜನಸಾಮಾನ್ಯರ ಕೊಡುಗೆ ಅಪಾರವಾಗಿದೆ. ಈ ಕ್ಷೇತ್ರದಲ್ಲಿ ಅವರ ಶಾಸಕನಾಗದೆ ಜನಸೇವಕನಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಎಲ್ಲಾ ಜಾತಿಧರ್ಮದವರ ಸಹಕಾರ ಪಡೆದುಕೊಂಡು ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದ ಅವರು ಉಳ್ಳಾಲದ ಕೋಟೆಪುರ ಹಿಂದೆ ಮಿನಿ ಬಂದರಾಗಿತ್ತು. ಕೇರಳದ ಚೆರ್ವತ್ತೂರಿನಿಂದ ಮಂಗಳೂರನ್ನು ಸಂಪರ್ಕಿಸುವ ಮುಖ್ಯ ರಸ್ತೆ ಕೋಟೆಪುರವರೆಗೆ ಇತ್ತು. ಮುಂದಿನ ದಿನಗಳಲ್ಲಿ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದ ಅವರು ಒಂಭತ್ತುಕೆರೆ ಆಶ್ರಯ ಯೋಜನೆ, ಯುಜಿಡಿ ಸಮಸ್ಯೆ, ಕೈಕೋದಿಂದ ಸೋಮೇಶ್ವರ ತಲಪಾಡಿವರೆಗೆಗಿನ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ, ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸಂಬಂಧಿಸಿದ ಯೋಜನೆಯನ್ನು ಈ ಬಾರಿ ಕಾರ್ಯಗತಗೊಳಿಸಲಾಗುವುದು ಎಂದರು.

ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಎಲ್ಲ ಧರ್ಮೀಯರು ಜೊತೆ ಸೇರಿ ಸನ್ಮಾನ ಮಾಡಬೇಕಾದರೆ ಯು.ಟಿ.ಖಾದರ್ ಪ್ರತಿಯೊಬ್ಬರಲ್ಲಿ ಇಟ್ಟಿರುವ ಪ್ರೀತಿಯೇ ಕಾರಣ. ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗಲು ಹರ ಸಾಹಸಪಡಬೇಕಾಗುತ್ತದೆ. ಅಂತದ್ದರಲ್ಲೂ ಖಾದರ್ ಗೆ ನಿರಾಯಾಸವಾಗಿ ಸಚಿವ ಸ್ಥಾನ ಸಿಗಲು ಜನರೊಂದಿಗಿನ ಒಡನಾಟ ಕಾರಣ. ಇದುವರೆಗಿನ ಯಶಸ್ಸು ಉಳಿಯಬೇಕಾದರೆ ವಸತಿ ಸಚಿವ ಸ್ಥಾನವನ್ನೂ ಉತ್ತಮವಾಗಿ ನಿಭಾಯಿಸಿ ಜನರ ವಿಶ್ವಾಸ ಉಳಿಸಿ ಎಂದು ಕಿವಿಮಾತು ಹೇಳಿದರು.

ಉಳ್ಳಾಲ ನಗರಸಭಾಧ್ಯಕ್ಷ ಹುಸೈನ್ ಕುಂಞ ಮೋನು, ಉಪಾಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಶ್ರೀ ಚೀರುಂಭ ಭಗವತೀ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್, ನಿತ್ಯಾಧರ್ ಚರ್ಚ್‍ನ ಧರ್ಮಗುರು ಫಾ| ಎಲಿಯಾಸ್ ಡಿ.ಸೋಜ, ಜಮಾಅತೆ ಇಸ್ಲಾಂ ಹಿಂದ್ ಮಂಗಳುರು ಇದರ ಅಧ್ಯಕ್ಷ ಮಹಮ್ಮದ್ ಕುಂಞ, ಎಸ್‍ಕೆಎಸ್‍ಎಂ ದ.ಕ.ಜಿಲ್ಲೆ ಇದರ ಪ್ರ. ಕಾರ್ಯದರ್ಶಿ ಬಶೀರ್ ಆಹಮ್ಮದ್ ಶಾಲಿಮಾರ್, ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್‍ನ ಸಹಾಯಕ ದರ್ಮಗುರು ಫಾ| ಲೈಝಿಲ್ ಪಿಂಟೋ, ಶ್ರೀ ಸೋಮನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಕಾಪಿಕಾಡು ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ.ಶೇಖರ್, ಮೊಗವೀರ ಸಂಘದ ಅಧ್ಯಕ್ಷ ಭರತ್ ಉಳ್ಳಾಲ್, ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಅಧ್ಯಕ್ಷ ಶ್ರೀಕರ್ ಕಿಣಿ, ಬಂಡಿಕೊಟ್ಯ ಶ್ರೀ ಮಲರಾಯ ದೇವಸ್ಥಾನದ ಅಧ್ಯಕ್ಷ ಉಳ್ಳಾಲ ಸುಂದರ್, ಮತ್ಸ್ಯೋದ್ಯಮಿ ಎಚ್.ಕೆ.ಅಬ್ದುಲ್ ಖಾದರ್, ಮಾಡೂರು ಪಾಡಾಂಗರ ಭಗವತೀ ಕ್ಷೇತ್ರದ ಮಾಜಿ ಅಧ್ಯಕ್ಷ ರಾಮಚಂದ್ರ ಬಂಗೇರ,
ಉಳ್ಳಾಲ ಶ್ರೀ ವೀರಭದ್ರ ದೇವಸ್ಥಾನದ ಅಧ್ಯಕ್ಷ ಐತಪ್ಪ ಶೆಟ್ಟಿಗಾರ್,ಶ್ರೀಉಳಿಯತ್ತಾಯ ದೈವಸ್ಥಾನ ಉಳ್ಳಾಲ ಉಳಿಯ ಇದರ ಅಧ್ಯಕ್ಷ ಸಂಜೀವ ಉಳ್ಳಾಲ್‍ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಪೌರಸನ್ಮಾನ ಸಮಿತಿ ಸಂಚಾಲಕರಾದ ಮೊಹಮ್ಮದ್ ಮೂಸಾ, ಯು.ಕೆ.ಯೂಸುಫ್, ಯು.ಕೆ. ನಝೀರ್ ಕೋಡಿ, ಮೈಕಲ್ ಡಿ.ಸೋಜ ಮಂಚಿಲ, ಅಬ್ದುಲ್ ಲತೀಫ್, ನಾಝಿಂ ರಹ್ಮಾನ್, ಇಸ್ಮಾಯಿಲ್ ಪೊಡಿಮೋನು ಉಪಸ್ಥಿತರಿದ್ದರು.ಪೌರ ಸಮಿತಿ ಸಂಚಾಲಕ ಅಯೂಬ್ ಮಂಚಿಲ ಸ್ವಾಗತಿಸಿದರು. ಅಬ್ಸುಲ್ ಅಝೀಝ್ ಹಕ್ ಸನ್ಮಾನ ಪತ್ರ ವಾಚಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ರವೀಂದ್ರರಾಜ್ ಉಳ್ಳಾಲ್ ವಂದಿಸಿದರು.

ಜಪ್ಪು ಮಹಾಕಾಳಿ ಪಡ್ಪು ರೈಲ್ವೇಗೇಟ್ ಸಮಸ್ಯೆಯಿಂದ ಜನರು ಅನೇಕ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಮುಖ್ಯವಾಗಿ ಉಳ್ಳಾಲ(ಮಂಗಳೂರು) ಕ್ಷೇತ್ರದ ಜನರೇ ಈ ರಸ್ತೆ ಮೂಲಕ ಸಂಚರಿಸಿ ಈ ತೊಂದರೆ ಅನುಭವಿಸುತ್ತಿದ್ದು, ಈ ಸಮಸ್ಯೆ ನಿವಾರಣೆಯ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿದ್ದು ಶೀಘ್ರದಲ್ಲೇ ಶಾಶ್ವತ ಪರಿಹಾರ ಸಿಗಲಿದೆ.
ಯು.ಟಿ.ಖಾದರ್
ವಸತಿ ಮತ್ತು ನಗರಾಭಿವೃದ್ಧಿ ಸಚಿವರು.

Exit mobile version