UN NETWORKS
ಉಳ್ಳಾಲ: ಸತತ ಎರಡು ದಿನಗಳಿಂದ ಬೀಸುತ್ತಿರುವ ಗಾಳಿಯಿಂದಾಗಿ ಕಡಲ್ಕೊರೆತ ಆರಂಭವಾಗಿದ್ದು, ಸೋಮೇಶ್ವರ ಉಚ್ಚಿಲದಲ್ಲಿ 50 ರಷ್ಟು ತೆಂಗು ಹಾಗೂ ಇತರೆ ಮರಗಳು ಸಮುದ್ರಪಾಲಾಗಿದೆ. ಉಚ್ಚಿಲ ಉಳ್ಳಾಲ ಸಂಪರ್ಕಿಸುವ ರಸ್ತೆಗೂ ಸಮುದ್ರದ ಅಲೆಗಳು ಹೊಡೆಯಲು ಆರಂಭಿಸಿ ಸಾರ್ವಜನಿಕ ರಸ್ತೆಯ ಜೊತೆಗೆ ಸಮುದ್ರ ತೀರದ ಹಲವು ಮನೆಗಳು ಅಪಾಯದಂಚಿಗೆ ಸಿಲುಕಿದೆ.
ಪ್ರತಿ ವರ್ಷವೂ ಸಮುದ್ರ ಮುಂದೆ ಬರುತ್ತಿದೆ. ಡಿ.ಸಿ.ಎಸಿ ಬಂದರೂ ಪರಿಹಾರದ ಮಾತುಗಳನ್ನಾಡಿ ಹೋಗುತ್ತಾರೆ. ವೇಗ ನಿಯಂತ್ರಣ ಮಾಡಿದಲ್ಲಿ ಮಾತ್ರ ತಡೆಯಬಹುದು. ಸಿಆರ್ ಝೆಡ್ ವ್ಯಾಪ್ತಿಯ ಶೇ.75 ಸಮುದ್ರ ಪಾಲಾಗಿ ಹೋಗಿದೆ. ಸದ್ಯ ಉಳ್ಳಾಲ ಉಚ್ಚಿಲ ಸಂಪರ್ಕಿಸು ಮಾರ್ಗದ ರಕ್ಷಣೆಯಾದರೂ ಆಗಬೇಕಿದೆ. ರಸ್ತೆ ಸಮುದ್ರಪಾಲಾದರೆ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಲಿದ್ದು, ಎಲ್ಲರೂ ರಾಷ್ಟ್ರೀಯ ಹೆದ್ದಾರಿವರೆಗೆ ಹೋಗಿ ಅಲ್ಲಿಂದ ತೆರಳಬೇಕಿದೆ. ಸದ್ಯ ಕಲ್ಲು ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಶಾಶ್ವತ ಪರಿಹಾರವನ್ನು ಮಾಡದೆ ಕೋಟ್ಯಂತರ ಹಣವನ್ನು ಸಮುದ್ರಕ್ಕೆ ಹಾಕುವ ಕೆಲಸವಾಗುತ್ತಿದೆ. ಗೊತ್ತಿದ್ದರೂ ಕಲ್ಲು ಹಾಕುವುದು ಯಾಕೆ?. ಸಂತ್ರಸ್ತರಿಗೆ ಆ ಹಣವನ್ನು ನೀಡಿ ಬಳಿಕ ಅವರನ್ನು ಬೇರೆಡೆಗೆ ಸ್ಥಳಾಂತರಿಸಗೊಳಿಸುವ ಪ್ರಯತ್ನ ಮಾಡಬೇಕಿದೆ.
ಮೊಯ್ದೀನ್ ಕುಂಞ ತಲಪಾಡಿ
ಸ್ಥಳೀಯರು
ಓಖಿ ಚಂಡಮಾರುತದ ವೇಳೆ ಸಮುದ್ರ ಎದುರುಬಂದಿದ್ದು, ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರೇ ಖುದ್ದು ಬೆನ್ನುತಟ್ಟಿ ವಿಶ್ವಾಸ ನೀಡಿದ್ದರು. ಆದರೂ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಪೆರಿಬೈಲಿನಲ್ಲಿ 30 ಮನೆಗಳು ಇವೆ. ಎಲ್ಲವೂ ಅಪಾಯದಲ್ಲಿವೆ. ಮೂರು ದಿನಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಯಾವ ಜನಪ್ರತಿನಿಧಿಯಾಗಲಿ, ಅಧಿಕಾರಿಗಳಾಗಲಿ ಭೇಟಿ ನೀಡಿಲ್ಲ. ಕನಿಷ್ಟ ರಸ್ತೆಯನ್ನು ಉಳಿಸಿದಲ್ಲಿ ಮನೆಗಳನ್ನು ರಕ್ಷಿಸಿದಂತಾಗುತ್ತದೆ. ಕೂಡಲೇ ಅಧಿಕಾರಿಗಳು ಭೇಟಿ ನೀಡಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಿದೆ.
ಅಬ್ಬಾಸ್ ಹಾಜಿ ಪೆರಿಬೈಲು
ಸ್ಥಳೀಯ ಹಿರಿಯ ನಾಗರಿಕ
ಕಡಲ್ಕೊರೆತ ಸಂದರ್ಭ ಪೆರಿಬೈಲು ಪ್ರತಿವರ್ಷವೂ ಅನಾಹುತಗಳು ನಡೆಯುತ್ತಲೇ ಇದೆ. ಬೆಟ್ಟಂಪಾಡಿ ಸಮೀಪ ರೆಸಾರ್ಟುಗಳ ರಕ್ಷಣೆಗೆ ಕಲ್ಲು ಹಾಕಲಾಗಿದೆ. ಆದರೆ ಪೆರಿಬೈಲು ಪ್ರದೇಶದಲ್ಲಿ ಈವರೆಗೂ ಕಲ್ಲುಹಾಕುವ ಪ್ರಕ್ರಿಯೆ ನಡೆದಿಲ್ಲ. ವೈಜ್ಞಾನಿಕವಾದ ಶಾಶ್ವತ ಪರಿಹಾರವನ್ನು ಮಾಡಿ ಪೆರಿಬೈಲು ಪ್ರದೇಶವನ್ನು ಉಳಿಸಲು ಜಿಲ್ಲಾಡಳಿತ ಮುಂದಾಗಬೇಕಿದೆ.
ಸಲಾಂ ಉಚ್ಚಿಲ್
ಸ್ಥಳೀಯ ಸಮಾಜ ಸೇವಕ