UN NETWORKS
ತೊಕ್ಕೊಟ್ಟು: ಅನೈತಿಕತೆಯನ್ನು ಬೆಂಬಲಿಸುವ ಸಮಾಜ ನಿರ್ಮಾಣವಾಗಿದೆ. ಎಲ್ಲಾ ರೀತಿಯ ಕೆಡುಕುಗಳನ್ನು ಟೂರಿಸಂ, ಸಾಹಿತ್ಯ, ಕಲೆಯ ಹೆಸರಿನಲ್ಲಿ ಅನೈತಿಕತೆ , ಅಶ್ಲೀಲತೆ , ಮದ್ಯಪಾನಗಳನ್ನು ನಿರಂತರವಾಗಿ ಪ್ರೋತ್ಸಾಹಿಸುವ ಮತ್ತು ಬೆಂಬಲಿಸುವ ಕೆಲಸಗಳು ನಿರಂತರವಾಗಿ ಆಗುತ್ತಿದೆ. ಇಂತಹ ಅನಾಚಾರಗಳ ದ್ವಾರಗಳನ್ನು ತೆರೆದಿಟ್ಟು ಅತ್ಯಾಚಾರದ ವಿರುದ್ಧ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಶಾಂತಿಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞ ಹೇಳಿದರು.
ಮುಗ್ದ ಮಕ್ಕಳ ಮೇಲಿನ ಅತ್ಯಾಚಾರ , ಅನಾಚಾರಗಳು ದೇಶದ ಗೌರವ ಮತ್ತು ಮಾನವನ್ನು ಹರಾಜು ಮಾಡುತ್ತಿದೆ. ಇದರೊಂದಿಗೆ ಅತ್ಯಾಚಾರಗಳಿಗೆ ರಾಜಕೀಯ ಬಣ್ಣ, ಅತ್ಯಾಚಾರಿಗಳ ಧರ್ಮ ನೋಡುವಂತಹ ಶಾಪಗಳು ದೇಶದಲ್ಲಿ ನಡೆಯುತ್ತಿರುವುದು ದುರಾದೃಷ್ಟ. ಕಥುವಾದಲ್ಲಿ ನಡೆದ ಅತ್ಯಾಚಾರವನ್ನು ಸಮರ್ಥಿಸುವ ಕಾರ್ಯ ನಡೆದಿತ್ತು. ಅಲ್ಲಿ ಸಂವಿಧಾನ ಪಾಲಿಸುತ್ತಿರುವವರೇ ಅತ್ಯಾಚಾರಿಗಳ ಪರ ಹೋರಾಟ ನಡೆಸುವಂತಹ ದುರಂತ ನಡೆಯಿತು. ಉತ್ತರಪ್ರದೇಶದಲ್ಲಿ ನಡೆದ ಬಾಲಕಿಯ ಅತ್ಯಾಚಾರದ ಆರೋಪಿ ಶಾಸಕನಾಗಿದ್ದ. ಇದೀಗ ದಿವ್ಯಾ ಮೇಲೆ ಇರ್ಫಾನ್ ಅನ್ನುವಾತ ಅತ್ಯಾಚಾರ ನಡೆಸಿರುವ ಪ್ರಕರಣವನ್ನು ಕೂಡಾ ಧರ್ಮದ ಆಧಾರದಲ್ಲಿ ನೋಡುತ್ತಿರುವ ವಿಚಾರ ಖಂಡನೀಯ.
ದೇಶದಲ್ಲಿನ ಅನಾಗರಿಕ, ಪೈಶಾಚಿಕತೆಯ ವಿರುದ್ಧ ದೊಡ್ಡ ಹೋರಾಟಗಳು ನಡೆಯುವ ಅನಿವಾರ್ಯತೆ ಇದೆ. ಆರೋಪಿಗಳಿಗೆ ಶಿಕ್ಷೆಯಾಗದಿರುವುದು ಮತ್ತು ರಾಜಕಾರಣಿಗಳು ಅವರಿಗೆ ಬೆಂಬಲವಾಗಿ ನಿಲ್ಲುವುದರಿಂದ ನಿರಂತರವಾಗಿ ಅತ್ಯಾಚಾರ ಪ್ರಕರಣಗಳು ಮುಂದುವರಿಯುತ್ತಿದೆ. ಆರೋಪಿಗಳಿಗೆ ಗಲ್ಲುಶಿಕ್ಷೆಯನ್ನು ಜಾರಿಗೊಳಿಸಬೇಕೆಂದು ಸರಕಾರವನ್ನು ಪ್ರಬಲವಾಗಿ ಒಪ್ಪಿಸುವ ಕಾರ್ಯ ಆಗಬೇಕಿದೆ. ಎಲ್ಲರೂ ಪೈಶಾಚಿಕತೆ ಮನಸ್ಸನ್ನು ಪ್ರವೇಶಿಸದಂತೆ ಮನಸ್ಸನ್ನು ಸ್ವಚ್ಛಗೊಳಿಸುವ ಕಾರ್ಯ ಆಗಬೇಕಿದೆ. ಹೆಣ್ಮಕ್ಕಳನ್ನು ಗೌರವಿಸಿ, ಸಹೋದರಿಯರಂತೆ ಕಾಣುವ ಪ್ರಯತ್ನ ಆಗಬೇಕಿದೆ. ಈ ಮೂಲಕ ಮುಗ್ದ ಹೆಣ್ಮಕ್ಕಳನ್ನು ರಕ್ಷಿಸಲು ಸಾಧ್ಯ . ಸಮಾಜದ ಬದಲಾವಣೆಗಾಗಿ ಎಲ್ಲರೂ ಜತೆಗೂಡಿ ಹೋರಾಡಬೇಕಿದೆ. ವಿವಿಧ ಹೆಸರುಗಳಲ್ಲಿ ನಡೆಯುವ ಅನಾಚಾರಗಳಿಗೆ ತಡೆಯೊಡ್ಡುವ ಕಾರ್ಯ ಆಗಬೇಕಿದೆ. ಜೊತೆಗೆ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಸಿಗುವಂತಹ ವ್ಯವಸ್ಥೆಗಾಗಿ ಇನ್ನಷ್ಟು ಹೋರಾಟಗಳು ನಡೆಯಬೇಕಿದೆ ಎಂದರು.
ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಇದರ ಅಧ್ಯಕ್ಷ ನಿಝಾಮುದ್ದೀನ್, ಸಂಚಾಲಕ ಅಶ್ರಿದ್ದೀನ್ ಅಳಿಯ, ಜಮಾಅತೆ ಇಸ್ಲಾಮಿಕ್ ಹಿಂದ್ ಇದರ ಉಳ್ಳಾಲ ಘಟಕದ ಅಧ್ಯಕ್ಷ ಅಬ್ದುಲ್ ಕರೀಂ, , ಸಾಲಿಡಾರಿಟಿ ಯೂತ್ ಮೂವ್ ಮೆಂಟ್‍ನ ಅಹಮ್ಮದ್ ಶರೀಫ್, ಮುಸ್ತಾಖ್ ಪಟ್ಲ, ಝಾಕೀರ್ ಇಕ್ಲಾಸ್, ಮಾಹಿತಿ ಹಕ್ಕುಗಳ ಹೋರಾಟಗಾರ ಫಾರುಕ್ ತಲಪಾಡಿ ಉಪಸ್ಥಿತರಿದ್ದರು.