Site icon Ullalavani

ಕೃಷಿ ಕಾಯಕದಿಂದ ರೋಗ ರುಜಿನ ದೂರವಾಗುತ್ತದೆ: ಪ್ರಸಾದ್ ರೈ

UN NETWORKS

ಕೊಣಾಜೆ : ಇಂದು ಯುವಕರಲ್ಲೇ ಮಧುಮೇಹ, ಅಧಿಕರಕ್ತದೊತ್ತಡ ಮುಂತಾದ ಕಾಯಿಲೆಯನನು ಕಾಣುತ್ತಿದ್ದೇವೆ. ಆದರೆ ಹಿಂದಿನ ಕಾಲದಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ನಮ್ಮ ಹಿರಿಯರಿಗೆ ಇಂತಹ ಯಾವುದೇ ಸಮಸ್ಯೆಗಳು ಇರಲಿಲ್ಲ. ಅಂದರೆ ಗದ್ದೆ ಮಣ್ಣಿಗೆ ಅಂತಹ ಶಕ್ತಿ ಇದೆ. ಕೃಷಿ ಕಾಯಕದಲ್ಲಿ ನಾವು ತೊಡಗಿಸಿಕೊಂಡರೆ ರೋಗ ರುಜಿನಗಳನ್ನು ದೂರವಿಡಲು ಸಾಧ್ಯವಾಗುತ್ತದೆ ಎಂದು ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ನಿರ್ದೇಶಕ ಪ್ರಸಾದ್ ರೈ ಕಲ್ಲಿಮಾರ್ ಅಭಿಪ್ರಾಯಪಟ್ಟರು.

ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ವಿಜಯಾ ಬ್ಯಾಂಕ್ ಕೊಣಾಜೆ, ಗ್ರಾಮಾಭಿವೃದ್ಧಿ ಸಮಿತಿ, ಮಂಗಳಾ ಗ್ರಾಮೀಣ ಯುವಕ ಸಂಘ, ಶಿಕ್ಷಣ ಸಂಪನ್ಮೂಲ ಕೇಂದ್ರ ಇವುಗಳ ಸಹಭಾಗಿತ್ವದಲ್ಲಿ ಮಂಗಳೂರು ವಿವಿ ಮಟ್ಟ ಎನ್‍ಎಸ್‍ಎಸ್ ವಿದ್ಯಾರ್ಥಿಗಳಿಗೆ ಗುರುವಾರ ಕೊಣಾಜೆ ಕಲ್ಲಿಮಾರ್ ಮರಕಳ ಬೆಟ್ಟುವಿನಲ್ಲಿ ನಡೆದ ಭತ್ತ ನಾಟಿ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಗರ ಪ್ರದೇಶಗಳಲ್ಲಿ ವಾಸವಿರುವವರು ಗದ್ದೆಗಳಿಗೆ ಬಂದಾಗ ಬಿಸಿಲು, ಕೆಸರು ಎನ್ನುವ ಕೊರಗು ಕಾಡುತ್ತದೆ. ಆದರೆ ಹಳ್ಳಿಯಲ್ಲಿದ್ದ ಗದ್ದೆ, ತೋಟ ಬಿಟ್ಟು ನಗರಕ್ಕೆ ವಲಸೆ ಹೋದವರು ನಂತರದ ದಿನಗಳಲ್ಲಿ ಪಶ್ಚಾತಾಪ ಪಡುವುದು ಕಾಣಬಹುದು. ಇಂದು ನಗರ ಪ್ರದೇಶದಲ್ಲಿ ವಾಸವಿರುವವರು ಹಳ್ಳಿಗಳಲ್ಲಿ ಫಾರ್ಮ್ ಹೌಸ್ ಖರೀದಿಸಿ ವಾಸವಿರುವುದನ್ನು ಕಾಣಬಹುದು ಎಂದು ಹೇಳಿದರು.

ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸದಾಶಿವ ಆಚಾರ್, ಮಂಗಳೂರು ವಿವಿ ಎನ್‍ಎಸ್‍ಎಸ್ ಅಧಿಕಾರಿ ಪ್ರೊ.ವಿನಿತಾ ರೈ, ನಿವೃತ್ತ ಮುಖ್ಯ ಶಿಕ್ಷಕ ಜಯಪ್ರಸಾದ್ ರೈ, ಮಂಗಳೂರು ವಿವಿ ಕಾಲೇಜಿನ ಡಾ.ಸಂಜಯ್ ಅಣ್ಣಾರಾವ್, ಸುಚೇತಾ, ಸಂತ ಆಗ್ನೆಸ್ ಕಾಲೇಜಿನ ಹೆಲೆನ್ ಸೆರಾವೋ, ಮೊಡಂಕಾಪು ಕಾರ್ಮೆಲ್ ಕಾಲೇಜಿನ ಮಧುರ, ಬಂಟ್ಸ್ ಹಾಸ್ಟೆಲ್ ಶ್ರೀ ರಾಮಕೃಷ್ಣ ಕಾಲೇಜಿನ ಕೀರ್ತಿ, ಶ್ರೀ ಗೋಕರ್ಣಾಥೇಶ್ವರ ಕಾಲೇಜಿನ ಡಾ.ದಿನಕರ್ ಪಚ್ಚನಾಡಿ , ಅಬ್ದುಲ್ ರಹಿಮಾನ್ ಕೋಡಿಜಾಲ್, ಮೊದಲಾದವರು ಉಪಸ್ಥಿತರಿದ್ದರು. ಕೊಣಾಜೆ ಮಂಗಳಾ ಸೇವಾ ಟ್ರಸ್ಟ್ ನಿರ್ದೇಶಕ ಕೆ.ಕೆ.ಅಬ್ದುಲ್ ನಾಸೀರ್ ವಂದಿಸಿದರು. ಕೊಣಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಅಚ್ಚುತ ಗಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

`ಅನ್ನ ಹಾಳು ಮಾಡಬಾರದು ಎಂದು ಕಾಲೇಜಿನಲ್ಲಿ ಪಾಠ ಮಾಡಲಾಗುತ್ತದೆ, ಆದರೆ ಏಕೆ ಹಾಳುಮಾಡಬಾರದು ಎನ್ನುವುದನ್ನು ತಿಳಿಯಬೇಕಾದರೆ ಗದ್ದೆಗಳಲ್ಲಿ ಮಳೆ, ಬಿಸಿಲಿನಲ್ಲಿ ಕೆಲಸ ಮಾಡಿದಾಗ ಅಕ್ಕಿ ಹೇಗೆ ತಯಾರಾಗುತ್ತದೆ ಎನ್ನುವ ಅರಿವು ಮೂಡಲು ಸಾಧ್ಯ’
ಡಾ.ಭಾರತಿ ಪಿಲಾರ್,ಮಂಗಳೂರು ವಿವಿ ಕಾಲೇಜಿನ ಎನ್‍ಎಸ್‍ಎಸ್ ಸಂಯೋಜಕಿ

Exit mobile version