Site icon Ullalavani

ತಲಪಾಡಿ ಟೋಲ್ ಗೇಟ್ ವಿರುದ್ಧ ಗ್ರಾಮಸ್ಥರ ಆಕ್ರೋಶ

UN NETWORKS

ಉಳ್ಳಾಲ: ಟೋಲ್ ಸಂಗ್ರಹ ವೇಳೆ ಮಹಿಳಾ ಸಿಬ್ಬಂದಿಯೊಂದಿಗೆ ಕಾರು ಚಾಲಕರು ಅನುಚಿತವಾಗಿ ವರ್ತಿಸುತ್ತಿದ್ದಾರೆ. ಇದನ್ನು ಇತರೆ ಸಿಬ್ಬಂದಿ ಪ್ರಶ್ನಿಸಿದಾಗ ನಡೆಯುವ ಗಲಾಟೆಗೆ ಬಣ್ಣ ಹಚ್ಚುವ ಮೂಲಕ ಮಾಸಿಕ ವೇತನಕ್ಕೆ ದುಡಿಯುವ ಸಿಬ್ಬಂದಿಯನ್ನೇ ಗೂಂಡಾಗಳೆಂದು ಕರೆಯಲಾಗುತ್ತಿದೆ ಎಂದು ಟೋಲ್ ಸಿಬ್ಬಂದಿಯೇ ಆಗಿರುವ ತಲಪಾಡಿ ಗ್ರಾಮ ಪಂಚಾಯಿತಿ ಸದಸ್ಯೆ ಅಕ್ಷತಾ ಆರೋಪಿಸಿದರು.

ತಲಪಾಡಿ ಗ್ರಾಮ ಪಂಚಾಯಿತಿನ 2018-19ರ ಸಾಲಿನ ಪ್ರಥಮ ಹಂತದ ಶುಕ್ರವಾರ ನಡೆದ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಸ್ತೆ ಸರಿಯಿಲ್ಲದೇ ಟೋಲ್ ಪಡೆಯುವುದು ತಪ್ಪು ಎಂದು ಗೊತ್ತಿದೆ. ಸಂಬಂಧಪಟ್ಟ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯವರೊಡನೆ ಹೋರಾಟ ನಡೆಸುವವರು ಮಾತನಾಡಬೇಕಿದೆ. ಆದರೆ ತಿಂಗಳ ವೇತನಕ್ಕೆ ದುಡಿಯುವ ಸಿಬ್ಬಂದಿ ಮೇಲೆ ಹೋರಾಟ ನಡೆಸುವವರು ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ. ಕರ್ತವ್ಯ ನಿರ್ವಹಣೆ ಸಂದರ್ಭ ಕೇರಳ ಭಾಗದಿಂದ ಬರುವ ಮತ್ತು ಹೋಗುವ ಕಾರುಗಳಲ್ಲಿರುವ ಯುವಕರು ಹಣ ಪಡೆದುಕೊಳ್ಳುವಾಗ ಮಹಿಳಾ ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿದರೆ ಗಲಾಟೆಯನ್ನೇ ನಡೆಸುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು.

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಸುಳಿವೇ ಇಲ್ಲ : ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯಿಂದಾಗಿ ಇತ್ತೀಚೆಗೆ ಗ್ರಾಮದ ವ್ಯಕ್ತಿಯೋರ್ವರು ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಇದನ್ನು ಪಂಚಾಯಿತಿ ಗಂಭೀರವಾಗಿ ಪರಿಗಣಿಸಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಗ್ರಾಮಸಭೆಯಲ್ಲಿ ಭಾಗವಹಿಸುವಂತೆ ಮಾಡಬೇಕಿತ್ತು. ರಸ್ತೆಯಿಡೀ ಅವ್ಯವಸ್ಥೆಯಿಂದ ಕೂಡಿದ್ದರೂ ಸುಂಕ ವಸೂಲಾತಿ ಕೇಂದ್ರದಲ್ಲಿ ಸುಂಕ ವಸೂಲಿ ಮಾಡುತ್ತಿರುವುದು ಜನರಿಗೆ ಮಾಡುತ್ತಿರುವ ಅನ್ಯಾಯ. ಈ ಬಗ್ಗೆ ಹಲವು ಗ್ರಾಮಸಭೆಗಳಲ್ಲಿ ಗ್ರಾಮದಲ್ಲೇ ಇರುವ ಸುಂಕ ವಸೂಲಾತಿ ಕೇಂದ್ರದ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸಲಾಗಿದೆ ಆದರೆ ಈವರೆಗೂ ಯಾವುದೇ ರೀತಿಯ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ಉತ್ತರಿಸಿದ ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ` ಕೇಂದ್ರ ಸರಕಾರ ಮಾಡಿಕೊಂಡಿರುವ ಒಪ್ಪಂದದಂತೆ ಯಾವುದೇ ರೀತಿಯ ಆದೇಶವನ್ನು ಸುಂಕ ವಸೂಲಾತಿ ನಡೆಸುತ್ತಿರುವ ಸಂಸ್ಥೆಗೆ ಮಾಡಲು ಸಾಧ್ಯವಾಗುತ್ತಿಲ್ಲ. ಹಲವು ಬಾರಿ ಸಮಸ್ಯೆಗಳ ಕುರಿತು ಸೂಚಿಸಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಕೇಂದ್ರದ ಕಟ್ಟಡವೂ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದರೂ ಅದನ್ನು ನಿರ್ಮಿಸಲು ಯಾವುದೇ ಅನುಮತಿಯನ್ನು ಸಂಸ್ಥೆ ಪಡೆದುಕೊಂಡಿಲ್ಲ. ಈ ನಿಟ್ಟಿನಲ್ಲಿ ಸುಂಕ ವಸೂಲಾತಿ ಕೇಂದ್ರದ ನಿಯಂತ್ರಣ ಪಂಚಾಯಿತಿನಿಂದ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

ಜಿಲ್ಲೆಯ ಮೀನಿನಲ್ಲಿ ರಾಸಾಯನಿಕ ಇಲ್ಲ : ಮೀನುಗಾರಿಕಾ ಇಲಾಖೆಯ ಸುಷ್ಮಿತಾ ಅಧಿಕಾರಿ ಮಾತನಾಡಿ ಜಿಲ್ಲೆಯಲ್ಲಿ ಸರಬರಾಜಾಗುವ ಹಸಿ ಮೀನಿನಲ್ಲಿ ಯಾವುದೇ ರೀತಿಯ ರಾಸಾಯನಿಕಗಳು ಮಿಶ್ರಣಗೊಂಡಿರುವುದು ಕಂಡುಬಂದಿಲ್ಲ. ಹೊರಗಡೆಯಿಂದ ಬಂದಿರುವ ಮೀನುಗಳಲ್ಲಿ ಇರುವ ಸಾಧ್ಯತೆಗಳು ಇರಬಹುದು. ಮೀನು ಮಾರಾಟಗಾರರಿಗೆ ಇಲಾಖೆ ಹಲವು ಯೋಜನೆಗಳನ್ನು ನೀಡುತ್ತಿದೆ. ತ್ರಿಚಕ್ರ ವಾಹನಗಳಿಗೆ ರೂ.30,000 ಹಾಗೂ ನಾಲ್ಕು ಚಕ್ರ ವಾಹನಗಳಿಗೆ ರೂ. 40,000 ಪ್ರೋತ್ಸಾಹ ಧನವನ್ನು ಮೀನು ಮಾರಾಟ ನಡೆಸುವ ಎಲ್ಲಾ ಜಾತಿಯವರಿಗೆ ನೀಡಲು ಇಲಾಖೆಯಲ್ಲಿ ಅವಕಾಶವಿದೆ. ಮೀನಿನ ಕಸುಬು ನಡೆಸುವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ರೂ. 50,000 ಸಾಲ ರಾಷ್ಟ್ರೀಕೃತ ಬ್ಯಾಂಕಿನಿಂದ ಪಡೆಯಬಹುದು. ಗುಂಪು ಚಟುವಟಿಕೆಯಲ್ಲಿ ನಡೆಸಲು ಆರಂಭಿಸಿದರೂ ಕೊಡುವ ಅವಕಾಶವಿದೆ ಎಂದರು.

ಕರೆ ಸ್ವೀಕರಿಸುತ್ತಿಲ್ಲ : ಮೆಸ್ಕಾಂನ ಸ್ಥಿರ ದೂರವಾಣಿಗೆ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಹಲವು ಕರೆಗಳಿಗೆ ಸ್ಪಂಧನೆಯೂ ಸಿಗುತ್ತಿಲ್ಲ. ತಂತಿಗಳು ತುಂಡಾಗಿ ರಸ್ತೆಯಲ್ಲಿ ಬಿದ್ದಾಗ ತುರ್ತಾಗಿ ಕ್ರಮಕೈಗೊಳ್ಳದೇ ಇದ್ದಲ್ಲಿ ಸಾವು ಸಂಭವಿಸುವ ಸಾಧ್ಯತೆಗಳಿವೆ ಎಂದು ಮೆಸ್ಕಾಂ ಅಧಿಕಾರಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಸ್ಥಿರ ದೂರವಾಣಿಯಿಂದ ಮೆಸ್ಕಾಂ ಸಿಬ್ಬಂದಿ ಸಂಪರ್ಕಿಸಲು ಅಸಾಧ್ಯವಾದರೆ 1912 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಲು ಅವಕಾಶವಿದೆ. ಸ್ಥಳೀಯ ಪರಿಚಿತರಿಗೆ ತನ್ನ ಮೊಬೈಲ್ ನಂಬರನ್ನೇ ನೀಡಿದ್ದೇನೆ. ಈ ಮೂಲಕ ಕ್ಷಣ ಮಾತ್ರದಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮೆಸ್ಕಾಂನಿಂದ ಆಗಿದೆ. ಈ ಬಾರಿ ಗಾಳಿಮಳೆ ಬಹಳಷ್ಟು ಜೋರಾಗಿರುವುದರಿಂದ ಕೆಲ ಸಮಯದಲ್ಲಿ ಅಸಾಧ್ಯವಾಗಿರಬಹುದು ಎಂದರು.

ಬೀದಿ ನಾಯಿ ಕಾಟ: ಕಳೆದ ನಾಲ್ಕು ಗ್ರಾಮಸಭೆಗಳಲ್ಲಿ ಬೀದಿ ನಾಯಿ ಹಿಡಿಯುವ ಕುರಿತು ಚರ್ಚೆ ನಡೆಯುತ್ತಲೇ ಇದೆ. ನಿರ್ಣಯ ಪುಸ್ತಕದಲ್ಲಿ ಬೀದಿ ನಾಯಿಗಳ ನಿಯಂತ್ರಣ ಕುರಿತು ದಾಖಲೆ ಮಾಡುತ್ತಲೇ ಬಂದಿದ್ದೇವೆ. ಆದರೂ ನಿಯಂತ್ರಣಕ್ಕೆ ತರಲು ಅಧಿಕಾರಿಗಳಿಗೆ ಅಸಾಧ್ಯವಾಗಿದೆ. ಮಕ್ಕಳು ರಸ್ತೆಬದಿಯಲ್ಲಿ ಹೋಗುವಾಗ ಬಹಳಷ್ಟು ತೊಂದರೆಯಾಗುತ್ತಿದೆ . ಕೂಡಲೇ ನಾಯಿಗಳ ವಿರುದ್ಧ ಕ್ರಮಕೈಗೊಲ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಉತ್ತರಿಸಿದ ಅಭಿವೃದ್ಧಿ ಅಧಿಕಾರಿ ಚೆನ್ನೈನ ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ, ಅನಿಮಲ್ ಕೇರ್ ಮಂಗಳೂರು ಅವರ ಆದೇಶವನ್ನು ಪಂಚಾಯಿತಿ ಪಾಲನೆ ಮಾಡಬೇಕಾಗಿದೆ. ಸದ್ಯ ಹಿಡಿದು ಸಾಯಿಸುವುದು ಕಾನೂನು ಉಲ್ಲಂಘನೆ ಎಂದರು. ಇತರೆ ಸಂಸ್ಥೆಗಳು ಕ್ರಮಕ್ಕೆ ಮನಸ್ಸು ಮಾಡಿದಲ್ಲಿ ಅದರ ಖರ್ಚು-ವೆಚ್ಛವನ್ನು ಭರಿಸಲು ಪಂಚಾಯಿತಿ ಸಿದ್ಧ ಎಂದರು. ಆದರೂ ಕರಡು ಪುಸ್ತಕದಲ್ಲಿ ಹುಚ್ಚು ನಾಯಿ ಮತ್ತು ಮಾಲೀಕನಿಲ್ಲದ ನಾಯಿಗಳನ್ನು ಕೊಲ್ಲಬಹುದು ಅನ್ನುವ ಉಲ್ಲೇಖವಿದೆ. ಅದನ್ನು ಪಾಲಿಸಬಹುದಲ್ಲವೇ ಎಂದು ಗ್ರಾಮಸ್ಥ ಅಬ್ಬಾಸ್ ಉಚ್ಚಿಲ್ ಪ್ರಶ್ನಿಸಿದರು.

ಜಿ.ಪಂ ಸದಸ್ಯೆ ಇಲ್ಲ: ಜಿಲ್ಲಾ ಪಂಚಾಯಿತಿನಿಂದ ಬರುವ ಹಲವು ಯೋಜನೆಗಳ ಕುರಿತು ಗ್ರಾಮಸ್ಥರಿಗೆ ಅರಿವೇ ಇಲ್ಲ. ಜಿ.ಪಂ ನಿಂದ ಆಗಬೇಕಾದ ಕಾಮಗಾರಿ ವಿವರಗಳನ್ನು ಹೇಳುವ ಅಂದರೆ ಜಿಲ್ಲಾ ಪಂಚಾಯಿತಿ ಸದಸ್ಯರೇ ಗ್ರಾಮಸಭೆಗೆ ಬರುತ್ತಿಲ್ಲ. ಚುನಾವಣೆ ಗೆದ್ದ ಬಳಿಕ ಒಂದು ಬಾರಿ ಮಾತ್ರ ಜಿ.ಪಂ ಸದಸ್ಯೆ ಗ್ರಾಮಸಭೆಗೆ ಬಂದಿದ್ದಾರೆ. ಆ ಬಳಿಕ ನಡೆದ ಹಲವು ಗ್ರಾಮಸಭೆಗಳಿಗೂ ಸದಸ್ಯೆ ಭಾಗವಹಿಸಿಲ್ಲ. ಮುಂದಿನ ಗ್ರಾಮಸಭೆಯಲ್ಲಿ ಜಿ.ಪಂ ಸದಸ್ಯೆ ಬಾರದೇ ಇದ್ದಲ್ಲಿ ಸಭೆಯನ್ನು ನಡೆಸಲು ಬಿಡುವುದಿಲ್ಲ ಎಂದು ಗ್ರಾಮಸ್ಥ ಸಿದ್ದೀಖ್ ತಲಪಾಡಿ ಎಚ್ಚರಿಸಿದರು. ಉತ್ತರಿಸಿದ ಪಂ.ಅಭಿವೃದ್ಧಿ ಅಧಿಕಾರಿ ಪ್ರತಿ ಗ್ರಾಮಸಭೆಗೂ ಅವರನ್ನು ಆಹ್ವಾನಿಸಲಾಗುತ್ತಿದೆ. ಪತ್ರದ ಮೂಲಕ ಕರೆದರೂ ಅವರು ಬರುತ್ತಿಲ್ಲ. ಈ ಕುರಿತು ಅವರ ಗಮನಕ್ಕೆ ತರುವುದಾಗಿ ತಿಳಿಸಿದರು.

ಕುಡಿಯುವ ನೀರು ಅಧಿಕಾರಿ ತರಾಟೆಗೆ : ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುರಿತು ಗ್ರಾಮಸ್ಥರು ಅಧಿಕಾರಿಯನ್ನು ತರಾಟೆಗೆ ಪಡೆದುಕೊಂಡರು. ಪ್ರತಿಯೊಂದು ಗ್ರಾಮಸಭೆಯಲ್ಲೂ ಮಂಗಳೂರು ಕ್ಷೇತ್ರದಲ್ಲೇ ಬಹುಗ್ರಾಮ ಕುಡಿಯುವ ನೀರು ಯೋಜನೆ ವಂಚಿತ ತಲಪಾಡಿ ಪಂಚಾಯಿತಿನ ಕುರಿತು ಅಧಿಕಾರಿಗಳು ನಿರ್ಣಯವನ್ನು ಪಡೆಯುತ್ತಲೇ ಬಂದಿದ್ದಾರೆ. ಈವರೆಗೂ ಅದರ ಸ್ಥಾಪನೆಯಾಗಿಲ್ಲ. ಗ್ರಾಮದಲ್ಲಿ ನೀರಿನ ಸಮಸ್ಯೆ ಬಹಳಷ್ಟು ತಲೆದೋರಿದೆ. ಉತ್ತರಿಸಿದ ಅಧಿಕಾರಿ ಹಿಂದಿನ ಪ್ರಸ್ತಾವಿತ ಕುಡಿಯುವ ನೀರಿನ ಯೋಜನೆಯ ರೂಪುರೇಷೆ ಬದಲಾಯಿಸಲಾಗಿದ್ದು, ಸರಕಾರದ ಆದೇಶದಂತೆ ಬದಲಾಯಿಸಲಾಗಿದೆ. ಹೊಸತಾದ ಸ್ಕೆಚ್ ಬಂದ ಬಳಿಕವಷ್ಟೇ ಅನುಷ್ಠಾನ ನಡೆಬೇಕಿದೆ. ಸರಕಾರ ನೀಡಿದಲ್ಲಿ ಅನುಷ್ಠಾನಗೊಳಿಸುವದಷ್ಟೇ ಇಲಾಖೆಯ ಕೆಲಸ ಎಂದರು.

ಅತ್ಯಾಚಾರ ಸಂತ್ರಸ್ತರಿಗೆ ಸಹಾಯಧನ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅತ್ಯಾಚಾರಕ್ಕೆ ಒಳಗಾಗುವ ಸಂತ್ರಸ್ತೆ ಯುವತಿಯರಿಗೆ ದಾಖಲೆಗಳನ್ನು ಪರಿಶೀಲಿಸಿ ಅದರ ಆಧಾರದಂತೆ ಚಿಕಿತ್ಸೆಗೆ ರೂ. 5,000 ದಿಂದ ರೂ. 5 ಲಕ್ಷವರೆಗೆ ನೀಡಲಾಗುವುದು. ಇದಕ್ಕೆ ಗ್ರಾಮಸ್ಥರು ಇದೊಂದು ಅತ್ಯಾಚಾರಕ್ಕೆ ಪ್ರಚೋದಿಸುವುದಂತಹ ಕಾನೂನು ಅಲ್ಲವೇ? ಅನ್ನುವುದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಆರ್ಥಿಕವಾಗಿ ದುರ್ಬಲರಾದ ಯುವತಿಯರು ಕಂಗೆಟ್ಟಾಗ, ಚಿಕಿತ್ಸೆಗೂ ಹಣವಿಲ್ಲದೆ ಕೊರುಗವಂತಹ ಸಮಯದಲ್ಲಿ ಸರಕಾರ ಬೆನ್ನೆಲುಬಾಗಿ ನಿಲ್ಲುವುದು ಪ್ರಚೋದಿಸುವಂತಹ ಕಾರ್ಯವಲ್ಲ ಅಂದರು.

ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿ ಶ್ಯಾಮಲಾ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಶವ , ತಾಲೂಕು ಪಂಚಾಯಿತಿ ಸದಸ್ಯ ಸಿದ್ದೀಖ್ ಕೊಳಂಗೆರೆ, ಉಪಾಧ್ಯಕ್ಷೆ ಜಯಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.

Exit mobile version