Site icon Ullalavani

ತೊಕ್ಕೊಟ್ಟು ಜಂಕ್ಷನ್ ಸಂಚಾರ ದುಸ್ತರ

UN NETWORKS

ಉಳ್ಳಾಲ: ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತೊಕ್ಕೊಟ್ಟು ಜಂಕ್ಷನ್ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಗಳಲ್ಲಿ ಮಳೆ ನೀರು ಹರಿದು ಹೊಂಡ ನಿರ್ಮಾಣವಾಗಿ ಹೆದ್ದಾರಿ66ರ ನೇತ್ರಾವತಿ ಸೇತುವೆಯಿಂದ ಉಳ್ಳಾಲ ಕಾಪಿಕಾಡ್ ವರೆಗೆ ಸಂಚಾರ ಆಸ್ತವ್ಯಸ್ತವಾಯಿತು.

ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಫ್ಲೈಓವರ್ ಕಾಮಗಾರಿಯಿಂದ ಸುಮಾರು ಒಂದು ಕಿ. ಮೀ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ಸರ್ವೀಸ್ ರಸ್ತೆ ಇಕ್ಕಾಟ್ಟಾಗಿದ್ದು, ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಸಂಸ್ಥೆ ನಿರ್ಮಿಸಿದ್ದ ಚರಂಡಿ ಹೊಂಡ ಬಿದ್ದು ಸಂಪೂರ್ಣ ಚರಂಡಿ ಮಣ್ಣು ತುಂಬಿದೆ. ಚೆಂಬುಗುಡ್ಡೆ ಕಡೆಯಿಂದ ಹರಿಯುವ ಮಳೆ ನೀರು ಸಂಪೂರ್ಣ ಹೆದ್ದಾರಿಯಲ್ಲಿ ಹರಿದ ಪರಿಣಾಮ ಸರ್ವೀಸ್ ರಸ್ತೆ ಸಂಪೂರ್ಣ ಹೊಂಡ ಮಯವಾಗಿದೆ. ಮಳೆಗಾಲ ಆರಂಭದಲ್ಲಿ ತೊಕ್ಕೊಟ್ಟು ಜಂಕ್ಷನ್ ಮುಳುಗಡೆಯಾಗಿದ್ದು, ಬಳಿಕ ರಸ್ತೆ ಹೊಂಡಗಳು ಹೆಚ್ಚಾಗಿ ಸಂಚಾರಕ್ಕೆ ತಡೆಯಾಗಿದ್ದು ವಾಹನಗಳು ಬ್ಲಾಕ್‍ನಲ್ಲೇ ನಿಂತು ಸರದಿ ಸಾಲಿನಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಯಿತು. ಬ್ಲಾಕ್ ಸಮಸ್ಯೆಯಿಂದ ಕೆಲವು ಬಸ್‍ಗಳು ನಿಗದಿತ ಸಮಯಕ್ಕೆ ಉಳ್ಳಾಲ, ಮತ್ತು ತಲಪಾಡಿಗೆ ತಲುಪಲು ಸಾಧ್ಯವಾಗದೇ ಅರ್ಧದಿಂದಲೇ ಸಂಚಾರ ಮೊಟಕುಗೊಳಿಸಿ ಹಿಂತಿರುಗಿ ಮಂಗಳೂರು ಕಡೆ ಪ್ರಯಾಣ ಬೆಳೆಸಿದೆ.

ಪ್ಲೈಓವರ್ ಕಾಮಗಾರಿ ಆರಂಭಗೊಂಡು ವರುಷ ಎಂಟು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಈ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಬಿಡತೆಯಿಂದ ಕೂಡಿದ್ದು, ಉಳ್ಳಾಲ, ತಲಪಾಡಿ, ಕೊಣಾಜೆ, ಕಾಸರಗೋಡು ಕಡೆಗೆ ದಿನವೊಂದಕ್ಕೆ ಸಾವಿರಾರು ವಾಹನಗಳು ತೊಕ್ಕೊಟ್ಟು ಜಂಕ್ಷನ್ ಮೂಲಕ ಸಂಚರಿಸುತ್ತವೆ. ಈ ಪ್ರದೇಶದಲ್ಲಿ ಜನಪ್ರತಿನಿಧಿಗಳ ಮಾತಿಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನ ನೀಡದೆ ಮೌನವಾಗಿದ್ದು, ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಸಾಮಾನ್ಯ ಜನರು, ವಾಹನ ಚಾಲಕರು ಮತ್ತು ಇಲ್ಲಿನ ವ್ಯಾಪಾರಿಗಳು ತೊಂದರೆ ಆನುಭವಿಸುವಂತಾಗಿದೆ.

Exit mobile version