UN NETWORKS
ಕೊಣಾಜೆ: ಇಂದಿನ ಯುವಸಮುದಾಯ ಕ್ಷಣಸುಖಕ್ಕಾಗಿ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದೆ, ಇಂತಹ ಸಂದರ್ಭದಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸುವುದರಿಂದ ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ನಿರ್ದೇಶಕ ಪ್ರಸಾದ್ ರೈ ಕಲ್ಲಿಮಾರ್ ಅಭಿಪ್ರಾಯಪಟ್ಟರು.
ಮಾದಕ ವ್ಯಸನಿಗಳಿಂದ ಮನೆ ಅಥವಾ ಸಮಾಜಕ್ಕೆ ಯಾವುದೇ ರೀತಿಯಲ್ಲೂ ಲಾಭವಿಲ್ಲ, ಅಂತಹವರನ್ನು ಸಮಾಜ ಕೆಟ್ಟ ದೃಷ್ಟಿಯಿಂದಲೇ ನೋಡುತ್ತದೆ. ಈ ಪಿಡುಗು ನಿವಾರಣೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿಬಿರಗಳ ಮೂಲಕ ಶ್ರಮಿಸುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಅಚ್ಚುತ ಗಟ್ಟಿ ಮಾತನಾಡಿ, ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಹೆತ್ತವರು, ಪೋಷಕರು ಮಕ್ಕಳನ್ನು ಜೊತೆ ಸೇರಿಸಿ ಅಮಲು ಪದಾರ್ಥ ಸೇವಿಸುವುದರಿಂದ ಮನೆಯಿಂದಲೇ ಅಮಲು ವ್ಯಸನಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ 500ರಲ್ಲಿ 10 ಮಂದಿ ಮಾದಕ ವ್ಯಸನಿಗಳಿದ್ದರೆ ಇಂದು 500ರಲ್ಲಿ 150 ಮಂದಿ ಮಾದಕ ವ್ಯಸನಿಗಳಾಗಿದ್ದಾರೆ ಎನ್ನುವುದು ಸಮೀಕ್ಷೆಗಳು ಹೇಳುತ್ತವೆ. ಮಾದಕ ವ್ಯಸನದಲ್ಲಿ ಕೊಣಾಜೆ ಠಾಣಾ ವ್ಯಾಪ್ತಿ ಪ್ರಥಮ ಸ್ಥಾನದಲ್ಲಿದೆ ಎನ್ನುವುದು ದುರಂತ ಎಂದು ತಿಳಿಸಿದರು.
ಕೊಣಾಜೆ ಮಂಗಳಾ ಸೇವಾ ಟ್ರಸ್ಟ್ ನಿರ್ದೇಶಕ ಕೆ.ಕೆ.ಅಬ್ದುಲ್ ನಾಸೀರ್, ಪ್ರಗತಿಪರ ಕೃಷಿಕ ಸುದರ್ಶನ್ ರಾವ್, ನಿವೃತ್ತ ಮುಖ್ಯ ಶಿಕ್ಷಕರಾದ ಎಸ್.ಜಯಪ್ರಸಾದ್, ಶಿವ ಶಂಕರ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿ ನೌಷಾದ್ ಕೊಣಾಜೆ ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕಿ ರೇಶ್ಮಾ ಜಿ. ಕಾರ್ಯಕ್ರಮ ನಿರೂಪಿಸಿದರು.