UN NETWORKS
ಕೊಣಾಜೆ: ಇಂದು ಜಮೀನು ಇಲ್ಲದವರೂ ತರಕಾರಿ ಬೆಳೆಸುವುದು ಕಷ್ಟವಲ್ಲ, ಗೋಣಿ ಚೀಲದಲ್ಲಿ ಬೀಜ ಹಾಕಿ ಟೆರೇಸ್‍ನಲ್ಲೂ ತರಕಾರಿ ಬೆಳೆಸಬಹುದು, ಈ ಬಗ್ಗೆ ಆಸಕ್ತಿ ವಹಿಸಿ ಶಾಲೆಯ ಬಿಸಿಯೂಟಕ್ಕೆ ಹೆಚ್ಚು ತರಕಾರಿ ತಂದವರಿಗೆ ಬಹುಮಾನ ನೀಡಲಾಗುವುದು ಎಂದು ಪ್ರಗತಿಪರ ಕೃಷಿಕ ಸುದರ್ಶನ್ ರಾವ್ ಹೇಳಿದರು.
ಎಳೆ ಪ್ರಾಯದಲ್ಲೇ ಕೃಷಿ ಬಗ್ಗೆ ಜಾಗೃತಿ ಮೂಡಿಸುವ ಅನಿವಾರ್ಯತೆ ಇಂದಿನದ್ದಾಗಿದೆ. ಮಕ್ಕಳು ಮಣ್ಣು ಮುಟ್ಟಬಾರದು ಎಂದು ಪೋಷಕರು ಬಯಸಿದರೆ ಅದನ್ನೇ ದುರುಪಯೋಗಪಡಿಸುವ ಮಕ್ಕಳು ಮೊಬೈಲ್‍ನಲ್ಲೇ ಕಾಲ ಕಳೆಯುವ ಭೀತಿ ಇದೆ ಎಂದು ಹೇಳಿದರು.
ವಿಜಯಾ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಣಾಧಿಕಾರಿ ಸದಾಶಿವ ಆಚಾರಿ ಮಾತನಾಡಿ, ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿಷ್ಠಾನದಿಂದ ತರಕಾರಿ ಬೀಜ ಹಾಗೂ ಸಸಿಗಳನ್ನು ವಿತರಿಸಲಾಗುತ್ತಿದೆ. ಹಣಕೊಟ್ಟು ಶ್ರಮವಹಿಸಿ ಇವುಗಳನ್ನು ಸಂಗ್ರಹಿಸಲಾಗಿದ್ದು, ಉಚಿತ ಸಿಕ್ಕಿದೆ ಎನ್ನುವ ಕಾರಣಕ್ಕೆ ದುರುಪಯೋಗಪಡಿಸಬೇಡಿ, ಇದರಿಂದ ಪ್ರತಿಷ್ಠಾನದ ಶ್ರಮ ವ್ಯರ್ಥವಾಗುವ ಜೊತೆ ಒಂದು ಗಿಡ ಕೊಂದ ಪಾಪ ಪಡೆದವರ ಮೇಲೆ ಬರುತ್ತದೆ ಎಂದರು.
ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ನಿರ್ದೇಶಕ ಪ್ರಸಾದ್ ರೈ ಕಲ್ಲಿಮಾರ್ ಉದ್ಘಾಟಿಸಿದರು. ಕೊಣಾಜೆ ಮಂಗಳಾ ಸೇವಾ ಟ್ರಸ್ಟ್ ನಿರ್ದೇಶಕ ಕೆ.ಕೆ.ಅಬ್ದುಲ್ ನಾಸೀರ್, ನಿವೃತ್ತ ಮುಖ್ಯ ಶಿಕ್ಷಕರಾದ ಎಸ್.ಜಯಪ್ರಸಾದ್, ಶಿವ ಶಂಕರ್ ಭಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕಿ ರೇಶ್ಮಾ ಜಿ, ಕೊಣಾಜೆ ವಿಜಯಾ ಬ್ಯಾಂಕ್‍ನ ಮುಖ್ಯ ಪ್ರಬಂಧಕ ಲಕ್ಷ್ಮೀಕಾಂತ್ ನಾಯಕ್, ಪಂಚಾಯತ್ ಸದಸ್ಯೆ ವೇದಾವತಿ, ಮಾಜಿ ಸದಸ್ಯ ಹಸನ್ ಕುಂಞ, ತೃಶಾಲಾಕ್ಷಿ, ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಗಂಗಾಧರ ಮಾಸ್ಟರ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಹಸೈನಾರ್, ಮಂಗಳಾ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಕೊಣಾಜೆ ಮೊದಲಾದವರು ಉಪಸ್ಥಿತರಿದ್ದರು.
ಕೊಣಾಜೆ ಗ್ರಾಮ ಪಂಚಾಯತ್ ಸದಸ್ಯ ಅಚ್ಚುತ ಗಟ್ಟಿ ಸ್ವಾಗತಿಸಿದರು.