UN NETWORKS
ತಲಪಾಡಿ: ಸ್ಥಳೀಯರಿಗೆ ಟೋಲ್ ಸಂಗ್ರಹಿಸುವುದನ್ನು ಮುಂದುವರಿಸಿದಲ್ಲಿ ಮತ್ತು ನಿರಂತರವಾಗಿ ವಾಹನ ಸವಾರರಿಗೆ ದಬ್ಬಾಳಿಕೆ, ಕಿರುಕುಳ ಮುಂದುವರಿದಲ್ಲಿ ತಲಪಾಡಿಯಿಂದಲೇ ಟೋಲ್ ಬೂತ್ ಅನ್ನು ತೆಗೆಯುವಂತೆ ಮಾಡುತ್ತೇವೆ ಎಂದು ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಖ್ ತಲಪಾಡಿ ಎಚ್ಚರಿಸಿದ್ದಾರೆ. ಸ್ಥಳೀಯರಿಗೆ ಶುಕ್ರವಾರದಿಂದ ಸುಂಕ ವಸೂಲಿ ಮಾಡಿದ ಟೋಲ್ ಬೂತ್‍ನ ನಿರ್ಣಯವನ್ನು ಖಂಡಿಸಿ ತಲಪಾಡಿ ಗ್ರಾಮಸ್ಥರು ರಾಜಕೀಯರಹಿತವಾಗಿ ಟೋಲ್ ಎದುರುಗಡೆ ಒಂದು ಗಂಟೆ ಕಾಲ ವಾಹನಗಳನ್ನು ಉಚಿತವಾಗಿ ಕಳುಹಿಸುವ ಮೂಲಕ ಟೋಲ್ ಬೂತ್ ಅನ್ನು ಒಂದು ಗಂಟೆ ಕಾಲ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ಮಾತನಾಡಿ ಗ್ರಾಮದಲ್ಲಿ ಅನೇಕ ಧಾರ್ಮಿಕ ಕೇಂದ್ರಗಳಿವೆ. ಅಲ್ಲಿಗೆ ಸ್ಥಳೀಯ ಭಕ್ತರು ಬಂದು ಹೋಗುತ್ತಿರುತ್ತಾರೆ. ಜತೆಗೆ ಸ್ಥಳೀಯ ಟೆಂಪೋ ಚಾಲಕರು, ಕಾರು ಚಾಲಕರು ನಿರಂತರವಾಗಿ ಟೋಲ್ ಸಿಬ್ಬಂದಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ರಾ.ಹೆ.ಯನ್ನು ಸರಿಯಾಗಿ ನಿರ್ಮಿಸದೆ, ಚರಂಡಿ ವ್ಯವಸ್ಥೆಯೂ ಇಲ್ಲದೆ ರಸ್ತೆಯಲ್ಲೇ ನೀರು ಹರಿಯುತ್ತಿದೆ. ತಲಪಾಡಿ, ಕುಂಪಲ, ಕೊಲ್ಯದಲ್ಲಿ ಅಪಘಾತವಾಗಿ ಜೀವ ಹಾನಿಯೂ ಸಂಭವಿಸಿದೆ. ಸಂಸದರು ಎಚ್ಚರಿಕೆಯನ್ನು ನೀಡಿದ್ದಾರೆ. ಇದೀಗ ನಡೆದಿರುವ ಪ್ರತಿಭಟನೆ ಸಾಂಕೇತಿಕವಾಗಿದ್ದು, ಭಾನುವಾರ ಟೋಲ್ ಅಧಿಕಾರಿಗಳನ್ನು ಕರೆದು ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿಗಳು ನೀಡಿದ್ದಾರೆ. ಅದಕ್ಕಾಗಿ ತಾತ್ಕಾಲಿಕವಾಗಿ ಹೋರಾಟವನ್ನು ನಿಲ್ಲಿಸುತ್ತಿದ್ದೇವೆ. ಅದರಲ್ಲಿಯೂ ಸ್ಥಳೀಯರ ಜೊತೆಗೆ ಆಟವಾಡಿದಲ್ಲಿ ಖಂಡಿತಾ ಸಹಿಸುವುದಿಲ್ಲ, ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
ಕಾಂಗ್ರೆಸ್ ಮುಖಂಡ ಗಣೇಶ್ ತಲಪಾಡಿ ಮಾತನಾಡಿ ಗ್ರಾಮದಲ್ಲಿ ಟೋಲ್ ಆರಂಭದಲ್ಲಿ ಊರಿಗೆ ಲಾಭದಾಯಕ ಯೋಜನೆ ಎಂದು ಭಾವಿಸಿದ್ದೆವು. ಇದೀಗ ಗ್ರಾಮದ ಜನ ನರಕಯಾತನೆ ಅನುಭವಿಸುವಂತಾಗಿದೆ. ಬಸ್ ನಿಲ್ದಾಣವಿಲ್ಲ, ಸರ್ವಿಸ್ ರಸ್ತೆಗಳೇ ಇಲ್ಲ ಮೂಲಭೂತ ಸೌಕರ್ಯಗಳು ಇಲ್ಲದೇ ಇದ್ದರೂ, ಟೋಲ್ ಸಂಗ್ರಹಿಸಲಾಗುತ್ತಿದೆ. ಉಚ್ಛನ್ಯಾಯಾಲಯದ ಆದೇಶದಂತೆ ರಾ.ಹೆ.ಯಲ್ಲಿ ಒಂದು ನಿಮಿಷಕ್ಕಿಂತ ಹೆಚ್ಚು ತಡೆ ಉಂಟಾದಲ್ಲಿ ಸುಂಕ ಪಾವತಿಸುವಂತಿಲ್ಲ ಅನ್ನುವುದಿದೆ. ಆದರೆ ಇಲ್ಲಿ ಆದೇಶವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದರು.
ತಾಲೂಕು ಪಂಚಾಯಿತಿ ಸದಸ್ಯ ಸಿದ್ದೀಖ್ ಕೊಳಂಗೆರೆ ಮಾತನಾಡಿ ಟೋಲ್ ಗೇಟಿನಲ್ಲಿ ಸ್ಥಳೀಯರಿಗೆ ಉಚಿತ ಕೊಡಲೇಬೇಕು. ಇಲ್ಲವಾದಲ್ಲಿ ರಾಜಕೀಯ ರಹಿತವಾಗಿ ಒಟ್ಟಾಗಿ ಖಂಡಿಸುತ್ತೇವೆ. ಯಾವುದೇ ದಬ್ಬಾಳಿಕೆಗೆ ಹೆದರುವುದಿಲ್ಲ. ಸ್ಥಳಿಯರಿಗೆ ಸುಂಕ ವಸೂಲಿ ಮಾಡಿದಲ್ಲಿ, ಎಲ್ಲಾ ವಾಹನಗಳನ್ನು ಉಚಿತವಾಗಿ ತೆರಳುವಂತೆ ಮಾಡುವುದಾಗಿ ಎಚ್ಚರಿಸಿದರು.
ಸ್ಥಳದಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ಜಮಾಯಿಸಿ ಟೋಲ್ ವಿರೋಧಿ ಘೋಷಣೆಗಳನ್ನು ಕೂಗಿದರು. ಎರಡು ಕಡೆಗಳಲ್ಲಿ ವಾಹನಗಳನ್ನು ಟೋಲ್ ಬೂತಿನಲ್ಲಿ ಉಚಿತವಾಗಿ ಕಳುಹಿಸುವ ಮೂಲಕ ಟೋಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕಾಗಮಿಸಿದ ಉಳ್ಳಾಲ ಠಾಣಾ ಪೊಲಿಸರು ಪ್ರತಿಭಟನಾಕಾರರ ಮನವೊಲಿಸಿ, ಟೋಲ್ ಅಧಿಕಾರಿಗಳ ಜತೆಗೆ ಮೊಬೈಲಿನ ಮೂಲಕ ಸಂಪರ್ಕಿಸಿ ಭಾನುವಾರ ಸಾರ್ವಜನಿಕ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು. ಬಳಿಕ ಸ್ಥಳೀಯರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟು, ಭಾನುವಾರದವರೆಗೆ ಕಾದು ಮುಂದಿನ ನಿರ್ಧಾರವನ್ನು ಕೈಗೊಳ್ಳುವ ಭರವಸೆ ನೀಡಿದರು.
ಸ್ಥಳೀಯರಾದ ಅಬ್ಬಾಸ್ ಉಚ್ಚಿಲ್, ಇಸ್ಮಾಯಿಲ್ ಮುಂತಾದವರು ಉಪಸ್ಥಿತರಿದ್ದರು.
ಡಿವೈಎಫ್‍ಐನಿಂದ ಪ್ರತಿಭಟನೆಯ ಎಚ್ಚರಿಕೆ
ಇಲ್ಲಿನ ತಲಪಾಡಿ ನವಯುಗ ಟೋಲ್ ಸಂಗ್ರಹ ಕೇಂದ್ರದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ಹಾಗೂ ಅಲ್ಲಿ ಬೀಡುಬಿಟ್ಟಿರುವ ಬಾಡಿಗೆ ಗೂಂಡಾಗಳು ವಾಹನ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿದ್ದು ಈ ಹಿಂದೆ ಸ್ಥಳೀಯ ನಡೆದ ಒಪ್ಪಂದವನ್ನು ಉಲ್ಲಂಘಿಸಿ ಈಗ ಸ್ಥಳೀಯ ನಿವಾಸಿಗಳಿಂದ ಆಧಾರ್ ಕಾರ್ಡ್ , ವೋಟರ್ ಕಾರ್ಡ್ , ಅಥವಾ ಡ್ರೈವಿಂಗ್ ಲೈಸೆನ್ಸ್ ಬದಲಾಗಿ ವಾಹನದ ಆರ್.ಸಿ ತೋರಿಸುವಂತೆ ಒತ್ತಾಯಿಸುತ್ತಿದ್ದು ಇದರಿಂದಾಗಿ ಇಲ್ಲಿನ ಸ್ಥಳೀಯ ನಿವಾಸಿಗಳು ತಮ್ಮ ಸ್ನೇಹಿತರ ಅಥವಾ ತಮ್ಮ ಸಂಬಂಧಿಕರ ಹೆಸರಿನಲ್ಲಿರುವ ವಾಹನಗಳನ್ನು ಚಲಾಯಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನವಯುಗ ಕಂಪೆನಿ ಈ ಹಿಂದೆ ಜಿಲ್ಲಾ ಮಟ್ಟದ ಅಧಿಕಾರಿಗಳ ಮತ್ತು ಶಾಸಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಒಪ್ಪಿದ ನೀತಿ ನಿಯಮಗಳಿಗೆ ವಿರುಧ್ಧವಾಗಿ ಈ ರೀತಿಯ ಹೊಸ ಕಾನೂನನ್ನು ಇಲ್ಲಿನ ಸ್ಥಳೀಯ ನಿವಾಸಿಗಳ ಮೇಲೆ ಹೇರುತ್ತಿದ್ದು ಈ ನಿಯಮವನ್ನು ಕೂಡಲೇ ರದ್ದುಗೊಳಿಸಬೇಕು . ಇಲ್ಲದೇ ಇದ್ದಲ್ಲಿ ಡಿವೈಎಫ್‍ಐ ಸಂಘಟನೆ ಸ್ಥಳೀಯ ನಿವಾಸಿಗಳ ಜೊತೆ ಸೇರಿ ಟೋಲ್‍ಗೇಟ್ ವಿರುದ್ಧ ಹೋರಾಟ ನಡೆಸಲಿದೆ ಎಂದು ಉಳ್ಳಾಲ ವಲಯ ಡಿವೈಎಫ್‍ಐ ತಿಳಿಸಿದೆ.
ಪಂಪುವೆಲ್‍ನಿಂದ ತಲಪಾಡಿವರೆಗಿನ ಹೆದ್ದಾರಿ ಕೆಲಸ ಪೂರ್ಣವಾಗುವ ಮೊದಲೇ ಇಲ್ಲಿ ಟೋಲ್ ಸಂಗ್ರಹ ಕೇಂದ್ರವನ್ನು ತೆರೆದು ನವಯುಗ ಕಂಪೆನಿ ಹಣಗಳಿಸಲು ಆರಂಭಿಸಿತ್ತು ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳ ಬೆಂಬಲವೂ ಇತ್ತು. ಆ ಸಮಯದಲ್ಲಿ ತ್ವರಿತಗತಿಯಲ್ಲಿ ಹೆದ್ದಾರಿ ಕೆಲಸವನ್ನು ಪೂರ್ಣಗೊಳಿಸುವುದಾಗಿ ಹೇಳಿದ ಕಂಪೆನಿ ಅಧಿಕಾರಿಗಳು ಇನ್ನೂ ಪಂಪ್‍ವೆಲ್ ಮತ್ತು ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿಯ ಶೇ50 ರಷ್ಟನ್ನು ಪೂರ್ಣಗೊಳಿಸಲು ವಿಫಲರಾಗಿದ್ದಾರೆ . ಅಂಬಿಕಾ ರೋಡ್ , ಕುಂಪಲ , ಕೋಟೆಕಾರ್ , ಉಚ್ಚಿಲ , ತಲಪಾಡಿ ಪ್ರದೇಶಗಳಲ್ಲಿ ಇನ್ನೂ ಸರ್ವಿಸ್ ರಸ್ತೆ ನಿರ್ಮಾಣವಾಗಿಲ್ಲ . ಈ ಕಾರಣದಿಂದಾಗಿ ಇಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಹೆದ್ದಾರಿ ಪ್ರಾಧಿಕಾರ ಮತ್ತು ನವಯುಗ ಕಂಪೆನಿ ಕೂಡಲೇ ಇತ್ತ ಗಮನ ಹರಿಸಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಬೇಕು ಮತ್ತು ಈ ಹಿಂದಿನ ಒಪ್ಪಂದದಂತೆ ಸ್ಥಳೀಯರಿಗೆ ಟೋಲ್‍ನಿಂದ ವಿನಾಯಿತಿ ನೀಡಬೇಕೆಂದು ಡಿವೈಎಫ್‍ಐ ಒತ್ತಾಯಿಸಿದೆ.