Site icon Ullalavani

ಭತ್ತಕೃಷಿಕರು ಕೃಷಿ ಯಂತ್ರಧಾರೆ ಯೋಜನೆ ಲಾಭ ಪಡೆದುಕೊಳ್ಳಬೇಕು : ಧನಲಕ್ಷ್ಮಿ ಗಟ್ಟಿ

UN NETWORKS

ಉಳ್ಳಾಲ : ಕೃಷಿ ಕೂಲಿ ಕಾರ್ಮಿಕರ ಕೊರತೆಯಿಂದ ಜಿಲ್ಲೆಯಲ್ಲಿ ಕೃಷಿಕಾರ್ಯಗಳು ಹಿನ್ನಡೆಯಾಗುತ್ತಿದ್ದು ಇಂತಹ ಸಂದರ್ಭದಲ್ಲಿ ಯಾಂತ್ರೀಕೃತ ಭತ್ತದ ಕೃಷಿಗೆ ಪ್ರೋತ್ಸಾಹ ನೀಡುವ ಮೂಲಕ ರೈತರನ್ನು ಬೆಂಬಲಿಸುವ ಕಾರ್ಯವನ್ನು ನಡೆಸುತ್ತಿರುವ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯವಾಗಿದ್ದು ಕೃಷಿ ಯಂತ್ರಧಾರೆ ಯೋಜನೆಯ ಲಾಭವನ್ನು ಎಲ್ಲಾ ಕೃಷಿಕರೂ ಪಡೆಯುವಂತಾಗಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಅಭಿಪ್ರಾಯಪಟ್ಟರು.

ಅವರು ಅಂಬ್ಲಮೊಗರು ಗ್ರಾಮದ ಮದಕ ಪಡ್ಯಾರಮನೆ ಬಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ಇದರ ಆಶ್ರಯದಲ್ಲಿ `ರೈತ ಕೃಷಿ ಪಾಠಶಾಲೆ ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ಯಂತ್ರಧಾರೆ ಯೋಜನೆಯಡಿ `ಕೃಷಿ ಯಾಂತ್ರಿಕರಣ` ನೇಜಿ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರೈತರು ಭತ್ತದ ಕೃಷಿ ಲಾಭದಾಯಕವಲ್ಲ ಎನ್ನುವ ನಿಟ್ಟಿನಲ್ಲಿ ಕೃಷಿ ನಡೆಸಲು ಹಿಂಜರಿಯುತ್ತಿದ್ದಾರೆ. ಆದರೆ ಆಧುನಿಕ ಕೃಷಿ ಪದ್ಧತಿಯಲ್ಲಿ ಕೃಷಿ ನಡೆಸಿದರೆ ಕೃಷಿಯಲ್ಲಿ ಲಾಭ ಮಾಡಿಕೊಳ್ಳಲಲು ಸಾಧ್ಯವಿದೆ. ಇಂತಹ ಸಂದರ್ಭದಲ್ಲಿ ಸ್ವಸಹಾಯ ಗುಂಪುಗಳ ಮೂಲಕ ಅತೀ ಕಡಿಮೆ ವೆಚ್ಚದಲ್ಲಿ ಕೃಷಿ ನಾಟಿ ಸೇರಿಂತೆ ಇತರ ಕಾರ್ಯಗಳಿಗೆ ಯಂತ್ರಗಳ ಬಳಕೆಯನ್ನು ನಡೆಸುವ ಮೂಲಕ ಕೃಷಿಯಲ್ಲಿ ವೆಚ್ಚವನ್ನು ತಗ್ಗಿಸಲು ಸಾಧ್ಯವಿದೆ ಎನ್ನುವುದನ್ನು ಗ್ರಾಮಾಭಿವೃದ್ಧಿ ಯೋಜನೆ ತೋರಿಸಿಕೊಟ್ಟಿದೆ. ಈಗಾಗಲೇ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇಂತಹ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸಂಘ ಸಂಸ್ಥೆಗಳು ರೈತರೊಂದಿಗೆ ಸೇರಿಕೊಂಡು ಕೃಷಿ ಕಾರ್ಯದಲ್ಲಿ ವರ್ಷದಲ್ಲಿ ಒಂದುಬಾರಿಯಾದರೂ ತೊಡಗಿಸುವ ಕಾರ್ಯವನ್ನು ಮಾಡಬೇಕು ಎಂದರು.

ಗ್ರಾಮಾಭಿವೃದ್ದಿಯೋಜನೆಯ ಪ್ರಾದೇಶಿಕ ಸಿಎಚ್‍ಎಸ್‍ಸಿ ಸಮನ್ವಯಾ„ಕಾರಿ ಅಶೋಕ್ ಮಾಹಿತಿ ನೀಡಿ ಯಾಂತ್ರಿಕೃತ ನಾಟಿಯ ಕುರಿತು ಮಾಹಿತಿ ನೀಡಿ ಕೃಷಿ ಯಂತ್ರಧಾರೆ ಯೋಜನೆಯಡಿ ಈಗಾಗಲೇ ಭತ್ತದ ಕೃಷಿ ಮಾಡುವ ರೈತರಿಗೆ ಪೂರಕವಾಗಿ ಯಂತ್ರಗಳನ್ನು ಒದಗಿಸುವ ಕಾರ್ಯ ಮಾಡುತ್ತಿದ್ದು, ಈ ವ್ಯಾಪ್ತಿಯಲ್ಲಿ ರೈತರು ಸಂಘಟಿತರಾಗಿ ಹೆಚ್ಚು ಕೃಷಿ ನಡೆಸಲು ಮುಂದಾದರೆ ಇಲ್ಲಿಯೂ ಉಪಕೇಂದ್ರವನ್ನು ಸ್ಥಾಪಿಸಿ ಯಂತ್ರಗಳನ್ನು ಆಯಾಯ ಪ್ರದೇಶದಲ್ಲಿ ವ್ಯವಸ್ಥೆ ನಡೆಸಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಗಳೂರು ತಾಲೂಕು ಯೋಜನಾಧಿಕಾರಿ ಉಮಾರಬ್ಬ ವಹಿಸಿದ್ದರು. ಪ್ರಗತಿಶೀಲ ಕೃಷಿಕರಾದ ಜಯಶೀಲ್ ಶೆಟ್ಟಿ ಪಡ್ಯಾರ ಮನೆ, ಸಂಜೀವ ಶೆಟ್ಟಿ ಪಡ್ಯಾರ ಮನೆ, ಸುರೇಶ್ ಶೆಟ್ಟಿ ಪಡ್ಯಾರ ಮನೆ, ಅಂಬ್ಲಮೊಗರು ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್, ಕೃಷಿಕ ಮಹಾಬಲೇಶ್ವರ ಭಟ್ ಮುನ್ನೂರು, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಜನಸೇವಾ ಯುವಕ ಮಂಡಲದ ಪದಾಧಿಕಾರಿಗಳು, ಲಕ್ಷ್ಮಿ ನರಸಿಂಹ ಸೇವಾ ಸಮಿತಿಯ ಪದಾಧಿಕಾರಿಗಳು, ಸಿಎಚ್‍ಎಸ್‍ಸಿ ವಲಯ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಪ್ರಬಂಧಕ ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಮೇಲ್ವಿಚಾರಕಿ ರೇಷ್ಮಾ ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕಿ ದಿನೇಶ್ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀ ನಾರಾಯಾಣ ರೈ ಹರೇಕಳ ವಂದಿಸಿದರು.

Exit mobile version