UN NETWORKS
ಉಳ್ಳಾಲ : ಖುವ್ವತುಲ್ ಇಸ್ಲಾಂ ಮದ್ರಸ ಪಟ್ಲ ಇದರ 2018 – 2019 ನೇ ಸಾಲಿನ ಮದ್ರಸ ಪ್ರಾರಂಭೋತ್ಸವ ಹಾಗು ಮನೆ ಮನೆಗೆ ಸಸಿ ವಿತರಣಾ ಕಾರ್ಯಕ್ರಮ ಕಲ್ಲಾಪು ಪಟ್ಲದ ಮದ್ರಸ ಹಾಲ್‍ನಲ್ಲಿ ನಡೆಯಿತು. ತಖ್ವಾ ಜುಮಾ ಮಸೀದಿ ಪಟ್ಲ ಅಧ್ಯಕ್ಷರಾದ ಮಹಮೂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮದ್ರಸ ಪ್ರಾರಂಭೋತ್ಸವವನ್ನು ಕಲ್ಲಾಪುವಿನ ಸಮಾಜ ಸ್ನೇಹಿಯೋರ್ವರ ಸಂಪೂರ್ಣ ಸಹಕಾರದೊಂದಿಗೆ ಮನೆ ಮನೆಗೆ ಸಸಿ ವಿತರಿಸುವ ಮೂಲಕ ವೈವಿಧ್ಯಮಯ ರೀತಿಯಲ್ಲಿ ಆಚರಿಸಲಾಯಿತು.
ಮದ್ರಸ ಅಧ್ಯಾಪಕ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಮಾತನಾಡಿ ಅರಿವಿನಂಗಳಕ್ಕೆ ಮನುಕುಲವನ್ನು ನಡೆಸಿದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಪವಿತ್ರ ಇಸ್ಲಾಂ ಎಂಬ ಶಾಂತಿಯ ಜೀವನದರ್ಶನಗಳ ಆರಂಭದ ಹೆಜ್ಜೆ ಮದ್ರಸಗಳು ಆಗಿದೆ. ಮದ್ರಸ ರಂಗದ ಸ್ಪಷ್ಟ ರಚನಾಕಾರ ಸಂಸ್ಥಾಪಕ ಮರ್ಹೂಂ ನೂರುಲ್ ಉಲಮಾ ಎಂ.ಎ. ಅಬ್ದುಲ್ ಖಾದಿರ್ ಮುಸ್ಲಿಯಾರ್ ಹಿಂದೆ ಊರು ಕೇರಿಗಳಿಗೆ ಪಾದಯಾತ್ರೆ ಮಾಡಿ ಅರೆಹೊಟ್ಟೆಯಲ್ಲಿ ಸಾಗಿ ಮದ್ರಸ ಸಂಸ್ಥಾಪನೆಯ ಸಂದೇಶ ಮುಟ್ಟಿಸಿ ಪ್ರಾಯೋಗಿಕತೆಗೆ ತಂದ ಮದ್ರಸಾ ಪ್ರಸ್ಥಾನ ಇಂದು ಬೆಳೆದು ಹೆಮ್ಮರವಾಗಿ ತಲೆಮಾರಿಗೆ ದೀನೀ ಅರಿವಿನ ನೆರಳನ್ನು ನೀಡುತ್ತಿದೆ. ಎಂದರು. ಪಟ್ಲ ಜುಮಾ ಮಸೀದಿ ಮುದರ್ರಿಸರಾದ ಅಬೂ ಮುಖ್ತಾರ್ ಅಶ್ರಫ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಯ್ಯಿದ್ ಮದನಿ ಕೇಂದ್ರ ಸಮಿತಿ ಸದಸ್ಯ ಮೊಯ್ದಿನ್, ಪಟ್ಲ ಮಸೀದಿ ಉಪಾಧ್ಯಕ್ಷ ಹಾರಿಸ್, ಪ್ರಧಾನ ಕಾರ್ಯದರ್ಶಿ ಸದ್ದಾಂ ಕಲ್ಲಾಪು, ಮದ್ರಸ ಅಧ್ಯಾಪಕ ಶಾಫಿ ಸಖಾಫಿ ಹಾಗು ಮದ್ರಸ ವಿದ್ಯಾರ್ಥಿಗಳು, ಪೋಷಕರು, ಊರ ಬಾಂಧವರು ಉಪಸ್ಥಿತರಿದ್ದರು. ಮದ್ರಸ ಮುಖ್ಯೋಪಾಧ್ಯಾಯ ಮುನೀರ್ ಲತೀಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.