UN NETWORKS
ಉಳ್ಳಾಲ: ಕಾರುಗಳ ಎರಡರ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲ ಬೈಪಾಸ್ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. ತಲಪಾಡಿ ತಚ್ಚಣಿ ನಿವಾಸಿ ಮನೋಹರ್(50) ಮೃತ ದುರ್ದೈವಿ.
ಮನೋಹರ್ ಅವರು ತೊಕ್ಕೊಟ್ಟು ಕಡೆಯಿಂದ ತಲಪಾಡಿ ಕಡೆಗೆ ಸಂಚರಿಸುತ್ತಿದ್ದಾಗ ಕುಂಪಲದಿಂದ ತೊಕ್ಕೊಟ್ಟು ಚತುಷ್ಪಥ ರಸ್ತೆಯಿದ್ದರೂ ತಲಪಾಡಿ ಕಡೆಗೆ ಮಾತ್ರ ಸಂಚರಿಸುವ ರಸ್ತೆಯಲ್ಲಿ ಎದುರು ಭಾಗದಿಂದ( ರಾಂಗ್ ಸೈಡ್) ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಹೊಡೆತದ ರಭಸಕ್ಕೆ ಬೈಕ್ ನಿಂದ ರಸ್ತೆಗೆಸೆಯಲ್ಪಟ್ಟ ಮನೋಹರ್ ಅವರ ತಲೆಯ ಮೇಲೆ ಹಿಂದಿನಿಂದ ಬಂದ ಕಾರು ಚಲಿಸಿದೆ. ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ರಾ.ಹೆ. 66 ರಲ್ಲಿ ಚತುಷ್ಪಥ ರಸ್ತೆಯಾದ ಬಳಿಕ ತೊಕ್ಕೊಟ್ಟು ತಲಪಾಡಿ ರಸ್ತೆಯಲ್ಲಿ ರಾಂಗ್ ಸೈಡ್ ನಲ್ಲಿ ಸಂಚರಿಸುತ್ತಿದ್ದು ಅಪಘಾತಕ್ಕೆ ಪ್ರಮುಖ ಕಾರಣವಾಗುತ್ತಿದೆ. ಒಂದು ಕಿ. ಮೀ. ಸುತ್ತಿ ಸಂಚರಿಸುವುದರ ಬದಲು ರಾಂಗ್ ಸೈಡ್ ವಾಹನಚಲಾಯಿಸಿ ಇತರರ ಕೌಟುಂಬಿಕ ಬದುಕಿಗೆ ಕೊಳ್ಳಿ ಇಡುವುದನ್ನು ನಿಲ್ಲಿಸುವುದು ಹೇಗೆ ಎಂದು ಸಾರ್ವಜನಿಕರ ಅಳಲು.
ಮೃತರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಕಾರು ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.