Site icon Ullalavani

ಸ್ಕೌಟ್‍ದಳ ಉದ್ಘಾಟನೆ ಮತ್ತು ಪುನಃಶ್ಚೇತನ ಶಿಬಿರ

UN NETWORKS

ಹರೇಕಳ: ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸೌಜನ್ಯ ಸ್ಕೌಟ್‍ದಳ ಮತ್ತು ಗೈಡ್ ಕಂಪನಿಯ ಉದ್ಘಾಟನಾ ಸಮಾರಂಭ ಮತ್ತು ವಿವಿಧ ಶಾಲಾ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗೆ ಪುನಃಶ್ಚೇತನ ಶಿಬಿರವು ನಡೆಯಿತು.

ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಸರಗೋಡು ಜಿಲ್ಲಾ ಸಹಾಯಕ ಆಯುಕ್ತರಾದ ವಿನೋದ್ ಚೇವಾರು ಇವರು ವಿದ್ಯಾರ್ಥಿಗಳಲ್ಲಿ ಬಾಲ್ಯದಲ್ಲೇ ದೇಶಪ್ರೇಮ, ಶಿಸ್ತು, ಸಂಸ್ಕಾರ, ಧೈರ್ಯ, ಮಾನವೀಯತೆ ಮುಂತಾದ ಜೀವನ ಮೌಲ್ಯಗಳನ್ನು ಸ್ಕೌಟಿಂಗ್ ಕಲಿಸುತ್ತದೆ. ಆಧುನೀಕತೆಯ ಬದುಕಿನಲ್ಲಿ ವಿದ್ಯಾರ್ಥಿಗಳು ತಮ್ಮ ಊಟ ಮಾಡುವ ತಟ್ಟೆಯನ್ನು ಪೋಷಕರು ತೊಳೆದು ಕೊಡುವ ಕಾಲಘಟ್ಟದಲ್ಲಿ ಸ್ಕೌಟಿಂಗ್ ಇಂತಹ ಸಣ್ಣ ಸಣ್ಣ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸರಿಯಾದ ಜ್ಞಾನವನ್ನು ಕಲಿಸುತ್ತದೆ ಎಂದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಕೆ. ರವೀಂದ್ರ ರೈ ವಹಿಸಿ ಕಳೆದ ಶೈಕ್ಷಣಿಕ ವರ್ಷದಲ್ಲಿ ನಮ್ಮ ವಿದ್ಯಾ ಸಂಸ್ಥೆಯ ಒಬ್ಬ ಸ್ಕೌಟ್ ರಾಷ್ಟ್ರಪತಿ ಪುರಸ್ಕಾರವನ್ನೂ ಆರು ಮಂದಿ ಗೈಡ್ಸ್ ರಾಜ್ಯ ಪುರಸ್ಕಾರ ಪದವಿಯನ್ನುಗಳಿಸುವುದರೊಂದಿಗೆ, ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳು, ಮಾತ್ರವಲ್ಲದೆ ವ್ಯಕ್ತಿತ್ವಕ್ಕೆ ಪೂರಕವಾದ ಹಲವಾರು ಕಾರ್ಯಕ್ರಮಗಳನ್ನು ನಮ್ಮ ಸ್ಕೌಟ್ ದಳ ಸಂಘಟಿಸುವುದರೊಂದಿಗೆ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ವೇದಿಕೆಯಲ್ಲಿ ನಿತ್ಯಾಧರ್ ಆಂಗ್ಲಮಾಧ್ಯಮ ಶಾಲೆಯ ಗೈಡ್ ಶಿಕ್ಷಕಿ ನಯನ ಬಬ್ಬುಕಟ್ಟೆ, ವಿಶ್ವಮಂಗಳ ಶಾಲೆಯ ಸ್ಕೌಟ್ ಪುರುಷೋತ್ತಮ, ದಿಲೀಪ್ ಕುಮಾರ್ ರೈ, ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ಸ್ಕೌಟ್ ಮಾಸ್ಟರ್ ಭಾಸ್ಕರ್ ಮತ್ತು ಶಿಕ್ಷಕಿಯರಾದ ಉಷಾಲತ, ಮೋಹಿನಿ ದಳದ ಲೀಡರ್ ಗಳಾದ ಜಾನ್ಸನ್ ಅಂದ್ರಾದೆ, ಧನ್ಯಶ್ರೀ ಮುಂತಾದವರು ಉಪಸ್ಥಿತರಿದ್ದರು. ಪುನಃಶ್ಚೇತನ ಶಿಬಿರದಲ್ಲಿ ಪ್ರಥಮ ಚಿಕಿತ್ಸೆ, ಬ್ಯಾಂಡೇಜು, ಮ್ಯಾಪಿಂಗ್, ದಿಕ್ಕುಗಳು ಗಂಟುಗಳು ಮತ್ತು ಲ್ಯಾಷಿಂಗ್, ಅಂದಾಜಿಸುವಿಕೆ ಮುಂತಾದವುಗಳ ಬಗ್ಗೆ ತರಬೇತಿಯನ್ನು ನೀಡಲಾಯಿತು.

ಸಂಘಟಕ ಸ್ಕೌಟ್ ಮಾಸ್ಟರ್ ತ್ಯಾಗಂ ಹರೇಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಲಾವಣ್ಯ ಮತ್ತು ಬಳಗ ಪ್ರಾರ್ಥನೆ ಗೈದರು. ವಿಧುಷಿ ನಯನ ಬಬ್ಬುಕಟ್ಟೆ ಧನ್ಯವಾದ ಸಲ್ಲಿಸಿದರು

Exit mobile version