Site icon Ullalavani

ಬಿಜೆಪಿ ಗೆದ್ದರೆ ದೇಶ ಗೆದ್ದಂತೆ ಅರಿತು ಕಾರ್ಯಕರ್ತರು ದುಡಿದಿದ್ದಾರೆ: ಡಾ| ವೈ.ಭರತ್ ಶೆಟ್ಟಿ

UN NETWORKS

ಮಂಗಳೂರು: ಬಿಜೆಪಿ ಗೆದ್ದರೆ ದೇಶ ಗೆದ್ದಂತೆ ಅನ್ನುವ ಸತ್ಯಾಂಶವನ್ನು ಮನದಲ್ಲಿಟ್ಟುಕೊಂಡು ದೇವರಂತಹ ಕಾರ್ಯಕರ್ತರು ಉತ್ತರ ಕ್ಷೇತ್ರದಲ್ಲಿ ನಿಸ್ವಾರ್ಥದಿಂದ ದುಡಿದ ಕಾರಣ ಅತ್ಯಧಿಕ ಮತಗಳ ಅಂತರದಲ್ಲಿ ಗೆಲುವು ಸಾಧ್ಯವಾಗಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ| ವೈ ಭರತ್ ಶೆಟ್ಟಿ ಹೇಳಿದರು.

ಅವರು ಕಾವೂರಿನ ಸುವರ್ಣ ಸಹಕಾರಿ ಸದನದಲ್ಲಿ ಹಿಂದು ಯುವಸೇನೆ ಕಾವೂರು , ಆಕಾಶಭವನ, ಶಾಂತಿನಗರ, ಪಂಜಿಮೊಗರು ಘಟಕಗಳ ಆಶ್ರಯದಲ್ಲಿ ಭಾನುವಾರ ಜರಗಿದ ನೂತನ ಮೂವರು ಶಾಸಕರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ, ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ಚುನಾವಣೆಯನ್ನು ಎದುರಿಸಿದ ನಂತರವೇ ತಿಳಿದುಬಂತು ಚುನಾವಣೆ ರಾಜಕೀಯವೇ ಬೇರೆ, ಸಂಘಟನೆ ರಾಜಕೀಯವೇ ಬೇರೆ ಎಂದು.ನಾಮಪತ್ರ ಸಲ್ಲಿಸುವ ಕೊನೆಯ ಎರಡು ದಿನಗಳೊಳಗೆ ಅಭ್ಯರ್ಥಿ ಘೋಷಣೆಯಾದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಎಲ್ಲರನ್ನು ನಾಮಪತ್ರ ಸಲ್ಲಿಕೆಗೆ ಕರೆಯಲು ಅಸಾಧ್ಯವಾಗಿತ್ತು. ಇನ್ನೊಂದೆಡೆ ಚುನಾವಣಾ ಕಣದಲ್ಲೇ ಇರುವ ಸಂದರ್ಭ ಇಲ್ಲಸಲ್ಲದ ವಿಚಾರಗಳು ಮಾಧ್ಯಮದಲ್ಲಿ ಪ್ರಸಾರಗೊಂಡು, ಮನೆಯಲ್ಲೂ ಚಿಂತೆಯ ವಾತಾವರಣ ನಿರ್ಮಿಸಿತ್ತು. ಇಂತಹ ಧೃತಿಗೆಡುವ ಸಮಯದಲ್ಲಿ ಹಿಂದು ಯುವ ಸೇನೆ ಕಾರ್ಯಕರ್ತರು ಮಾನಸಿಕವಾಗಿ ಕುಗ್ಗದ ರೀತಿಯಲ್ಲಿ ಪ್ರೋತ್ಸಾಹಿಸಿ ಧೈರ್ಯ ತುಂಬಿರುವುದು ಸದಾ ಸ್ಮರಣೀಯ. ಜಿಲ್ಲೆಯಲ್ಲಿ ಗೆಲುವು ಸಾಧಿಸಿದ ಎಲ್ಲಾ ಶಾಸಕರು ಕಾರ್ಯಕರ್ತರಿಗೆ ಸದಾ ಸ್ಪಂಧಿಸುವ ರಾಜಕಾರಣಿಗಳಾಗಿ ಬೆಳೆಯುತ್ತೇವೆ ಎಂದರು.

ಮುಲ್ಕಿ ಮೂಡಬಿದ್ರೆ ಕ್ಷೇತ್ರ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಸ್ವಾತಂತ್ರ್ಯ ನಂತರ ಪ್ರಥಮ ಬಾರಿ ಮುಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ ಬಿಜೆಪಿ ಅರಳಿದೆ. ಇದು ಕಾರ್ಯಕರ್ತರ ಗೆಲುವು. ಹಿಂದಿನ ಚುನಾವಣೆ ಧರ್ಮ ಹಾಗೂ ಅಧರ್ಮದ ವಿರುದ್ಧದ ಹೋರಾಟವಾಗಿತ್ತು. ಹಿಂದೂ ಸಮಾಜ ದಮನ ನೀತಿಗೆ ಯತ್ನಿಸಿದ ಹಿಂದಿನ ಮುಖ್ಯಮಂತ್ರಿಗೆ ಸಮಾಜ ಉತ್ತಮ ಸಂದೇಶ ನೀಡಿದೆ. ಜಿಲ್ಲೆಗೆ ಮಾರಕವಾಗುವ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬಿಡದೆ, ಅಭಿವೃದ್ಧಿಗೆ ಸದಾ ಕಾಲ ಶ್ರಮಿಸುವುದಾಗಿ ಹೇಳಿದರು.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಬಿಜೆಪಿ ಗೆಲುವು ಹಿಂದುತ್ವದ ಗೆಲುವು ಮತ್ತು ಮೋದಿಯವರು ನಾಲ್ಕು ವರ್ಷಗಳಲ್ಲಿ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಗೆಲುವು. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಹಿಂದೂಗಳ ಮೇಲೆ ದಾಳಿ, 25 ಕ್ಕೂ ಹೆಚ್ಚು ಕೊಲೆಗಳು ನಡೆದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಅಪೇಕ್ಷೆಯಿಲ್ಲದೆ ನಿರಂತರವಾಗಿ ಸುಡುಬಿಸಿಲಿನಲ್ಲಿ ದುಡಿದು ನನ್ನನ್ನು ಜಯಗಳಿಸಿದ್ದಾರೆ. ಕೇಸುಗಳು, ದೂಷಣೆಗಳನ್ನು ಎದುರಿಸುತ್ತಾ ಹಿಂದು ಸಮಾಜಕ್ಕಾಗಿ ದುಡಿಯುವ ಹಿಂದು ಯುವ ಸೇನೆ ಕಾರ್ಯಕರ್ತರು ಚುನಾವಣೆಗಾಗಿ ಪಟ್ಟ ಶ್ರಮ ವರ್ಣನೀಯ ಎಂದರು.

ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಾಮಣ್ಣ ಶೆಟ್ಟಿ ಮುಗಿಪು ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಹಿಂದುಯುವಸೇನೆ ಕೇಂದ್ರೀಯ ಮಂಡಳಿ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಹಿ.ಯು.ಸೇ ಕೇಂದ್ರೀಯ ಮಂಡಳಿ ಅಧ್ಯಕ್ಷ ಯಶೋಧರ ಚೌಟ, ಮಂಗಳೂರು ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕಿಶೋರ್ ರೈ, ಹಿಂದು ಯುವ ಸೇನೆ ಮುಖಂಡ ಶುಭಕರ ಶೆಟ್ಟಿ, ಹಿಂದೂ ಯುವ ಸೇನೆ ಜಿಲ್ಲಾಧ್ಯಕ್ಷ ವೀರಪ್ಪ ಮೂಡುಶೆಡ್ಡೆ ಭಾಗವಹಿಸಿದ್ದರು. ಕೊರಗಪ್ಪ ಶೆಟ್ಟಿ ಆಕಾಶ ಭವನ, ನೇಮಿರಾಜ್ ಶೆಟ್ಟಿ ಕಾವೂರು, ಸುಬ್ಬಯ್ಯ ಜ್ಯೋತಿನಗರ, ದಿನೇಶ್ ಸುವರ್ಣ ಆಕಾಶಭವನ, ಸಂದೇಶ್ ಶೆಟ್ಟಿ ಆಕಾಶಭವನ, ನಯನ್ ರೈ, ಸುನಿಲ್ ಶೆಟ್ಟಿ, ಪ್ರಸಾದ್ ರೈ, ಹರೀಶ್ ಶೆಟ್ಟಿ ಶಿಲ್ಪ, ಶಶಿಧರ್ ಕರ್ಕೇರ ಶಾಂತಿನಗರ, ಸದಾನಂದ ರೈ ಕಾವೂರು, ಸಂದೀಪ್ ವಿದ್ಯಾನಗರ ಉಪಸ್ಥಿತರಿದ್ದರು.

ದಿನೇಶ್ ಶೆಟ್ಟಿ ಕಾವೂರು ಸ್ವಾಗತಿಸಿದರು. ಯಶೋಧರ ಚೌಟ ಪ್ರಸ್ತಾವನೆಗೈದರು. ಪ್ರವೀಣ್.ಯಸ್.ಕುಂಪಲ ಕಾರ್ಯಕ್ರಮ ನಿರೂಪಿಸಿದರು.

Exit mobile version