UN NETWORKS
ಉಳ್ಳಾಲ: ರಾಜ್ಯದ ನೂತನ ವಸತಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ಈದ್ ಉಲ್ ಫಿತ್ರ್ ಹಬ್ಬವನ್ನು ಸೋಮೇಶ್ವರ ನೆಹರೂನಗರದ ಪಶ್ಚಿಮ್ ರಿಹ್ಯಾಬ್ ಸೆಂಟರ್ ನಲ್ಲಿರುವ ವೃದ್ಧರಿಗೆ ಬಿರಿಯಾನಿ ವಿತರಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.
ಟ್ಯಾಲೆಂಟ್ ರಿಸರ್ಚ್ ಪೌಂಡೇಷನ್‍ನ ಅಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಮಾತನಾಡಿ ಜನರ ಅಳಲು ಸ್ವೀಕರಿಸುವ , ತಕ್ಷಣವೇ ಸಮಸ್ಯೆಗಳಿಗೆ ಸ್ಪಂಧಿಸುವಂತಹ ಸಚಿವರಂತೆಯೇ ದೇಶಾದ್ಯಂತ ಮಂತ್ರಿಗಳಿದ್ದರೆ ಭಾರತ ಸೂಪರ್ ಪವರ್ ಆಗುವುದರಲ್ಲಿ ಸಂಶಯವಿಲ್ಲ. ಇಸ್ಲಾಂ ಧರ್ಮ ಪ್ರಕಾರ ಧರ್ಮದ ದಾರಿಯಲ್ಲಿ ಉತ್ತಮ ಕೆಲಸ ಮಾಡುವವರು ಮುಜಾಹಿದ್ ಗಳಾಗಿದ್ದಾರೆ. ಅದೇ ದಾರಿಯಲ್ಲಿ ಸಚಿವರಿದ್ದಾರೆ. ಹೆಲ್ಪ್ ಇಂಡಿಯಾ ಫೌಂಡೇಷನ್ನಿನ ಕೈಗೊಂಡಂತಹ ಕಾರ್ಯದಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಸರಕಾರದ ವತಿಯಿಂದ ಏಕಾಂಗಿಯಾಗಿ ಸ್ಥಾಪಿಸಿ 90 ಜನ ವೃದ್ಧರ ಸೇವೆ ನಡೆಸುತ್ತಿರುವ ಪಶ್ಚಿಮ್ ರಿಹ್ಯಾಬ್ ಸೆಂಟರಿನ ಸ್ಥಾಪಕ ರೋಹಿತ್ ಅವರಿಗೆ ಸರಕಾರದಿಂದ ಸಹಕರಿಸಿ ಜಾಗದ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ಸಚಿವರಲ್ಲಿ ವಿನಂತಿಸಿಕೊಂಡರು.
ದೇರಳಕಟ್ಟೆ ರತ್ನ ಎಜ್ಯುಕೇಷನ್ ಟ್ರಸ್ಟಿನ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ ಅನಾಥರ ಕಾರ್ಯ ದೇವರ ಕಾರ್ಯವೆಂದು ತಿಳಿದುಕೊಂಡು ದಿನದ 24 ಗಂಟೆಗಳ ಕಾಲವೂ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವ ಸೆಂಟರಿನ ಅಧ್ಯಕ್ಷರ ಹಾಗೂ ಸಿಬ್ಬಂದಿ ಕಾರ್ಯವನ್ನು ಪುರಸ್ಕರಿಸಬೇಕಿದೆ. ಯುವಸಮುದಾಯ ಇಂತಹ ಸೇವೆಯಲ್ಲಿ ತೊಡಗಿಸಿಕೊಂಡಾಗ ದೇಶದ ಅಭಿವೃದ್ಧಿಯೂ ಸಾಧ್ಯ ಎಂದರು.
ಪಶ್ಚಿಮ್ ರಿಹ್ಯಾಬ್ ಸೆಂಟರ್ ನ ಸ್ಥಾಪಕ ರೋಹಿತ್ ಸಾಲ್ಕ್‍ಟಸ್ ಮಾತನಾಡಿ ಹೆತ್ತವರನ್ನು ನೋಡಿಕೊಳ್ಳುವ ದಾರಿಯಲ್ಲಿ ಆರಂಭವಾದ ಸೆಂಟರ್ ಇದೀಗ 90 ಜನರನ್ನು ಸಲಹುವಂತಹ ಕೇಂದ್ರವಾಗಿ ಬೆಳೆದಿದೆ. ಸರಕಾರದಿಂದ ಸಹಕಾರ ದೊರೆತಲ್ಲಿ ಇನ್ನಷ್ಟು ಅನಾಥರನ್ನು ಸಲಹಬಹುದು ಅಲ್ಲದೆ ಇದೀಗ ಸಲಹುತ್ತಿರುವವರನ್ನು ಉತ್ತಮವಾಗಿ ಸಲಹಲು ಸಾಧ್ಯ. ಮುಡಿಪು ತಮ್ಮದೇ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಅದಕ್ಕೆ ಎಲ್ಲಾ ದಾನಿಗಳ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಹೆಲ್ಪ್ ಇಂಡಿಯಾ ಫೌಂಡೇಷನ್ನಿನ ಸ್ಥಾಪಕ ಉಪಾಧ್ಯಕ್ಷ ಉಮ್ಮರ್ ಫಾರುಕ್ ಪಟ್ಲ, ಸ್ಥಾಪಕ ಕಾರ್ಯದರ್ಶಿ ರಾಝಿಕ್ ಉಳ್ಳಾಲ್, ಸಮಾಜ ಸೇವಕರಾದ ನವಾಜ್ , ಸುರೇಶ್ ಭಟ್ನಗರ, ಮೂಡಿಗೆರೆಯ ಪೊಲೀಸ್ ಅಧಿಕಾರಿ ಕೆ.ಎಂ ಶರೀಫ್ , ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು, ತೊಕ್ಕೊಟ್ಟು ಘಟಕದ ಅಧ್ಯಕ್ಷ ತೌಸೀಫ್ ಯು.ಟಿ, ಫೌಂಡೇಷನ್ನಿನ ಸದಸ್ಯರುಗಳಾದ ಸಂಶುದ್ದೀನ್, ಸಿರಾಜ್ ಅಭಯ, ಜಲೀಲ್ ಜೆ.ಜೆ, ನಿಯಾಝ್ ಅಹಮದ್, ಸುಲೈಮಾನ್ ಯು.ಬಿ, ಬದ್ರುದ್ದೀನ್, ಶರೀಫ್ ಪಟ್ಲ , ಮುಸ್ತಾಫ ರಿಯಲ್ ಟೆಕ್ ಉಪಸ್ಥಿತರಿದ್ದರು.
ಈದ್ ಸಂದೇಶ ಝಾಕಿರ್ ಇಕ್ಲಾಸ್ ನೀಡಿದರು. ಶಕೀಲ್ ತುಂಬೇಜಾ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಶ್ರವಣ ದೋಷವಿದ್ದ ವೃದ್ಧೆಯೊಬ್ಬರಿಗೆ ಶ್ರವಣ ಕಿಟ್ ಅನ್ನು ಅಬ್ದುಲ್ ರವೂಫ್ ಪುತ್ತಿಗೆ ವಿತರಿಸಿದರು.