UN NETWORKS
ದೇರಳಕಟ್ಟೆ: ರಕ್ತ ಅನ್ನುವುದು ಮಾರುಕಟ್ಟೆಯಲ್ಲಿ ಸಿಗುವಂತಹ ವಸ್ತುವಲ್ಲ, ಜನರೇ ದಾನವಾಗಿ ನೀಡುವುದರ ಮೂಲಕ ಹಲವು ಜೀವಗಳನ್ನು ಉಳಿಸಬಹುದು. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ| ಪಿ.ಯಸ್. ಪ್ರಕಾಶ್ ಅಭಿಪ್ರಾಯಪಟ್ಟರು.
ಹಿಂದೆ ಒಂದು ಬಾಟಲಿ ರಕ್ತ ಮಾತ್ರ ಒಬ್ಬನಿಗೆ ಸಿಗುತಿತ್ತು. ಆದರೆ ವೈಜ್ಞಾನಿಕತೆಯಿಂದ ಸದ್ಯ ಒಂದು ಬಾಟಲಿ ರಕ್ತವನ್ನು ನಾಲ್ಕು ಜನರಿಗೆ ಉಪಯೋಗಿಸಬಹುದಾಗಿದೆ. ಕ್ಷೇಮ ಆಸ್ಪತ್ರೆಯಲ್ಲಿ ಸೆಲ್ ಸಪರೇಟರ್, ಏರ್ ಫೆರಿಸಿಸ್ ಅನ್ನುವ ಸಾಧನಗಳನ್ನು ಅಳವಡಿಸಲಾಗಿದು. ಇದರಲ್ಲಿ ಡೆಂಗ್ಯು, ಮಲೇರಿಯಾ, ರಕ್ತದ ಕ್ಯಾನ್ಸರ್ ಇರುವಂತಹವರಿಗೆ ಪ್ಲೇಟ್‍ಲೆಟ್ ಅನ್ನುವ ವಂಶವನ್ನು ಮಾತ್ರ ರಕ್ತದಿಂದ ತೆಗೆದು ಉಳಿದಿರುವುದನ್ನು ವಾಪಸ್ಸು ದಾನಿಗೆ ನೀಡುವ ಕೆಲಸವಾಗುತ್ತಿದೆ. ಆಸ್ಪತ್ರೆ ಹಾಗೂ ಆರೋಗ್ಯದ ಮಟ್ಟಿಗೆ ಶ್ರೇಷ್ಟ ದಾನ ರಕ್ತದಾನಕ್ಕಿಂತ ಬೇರೊಂದಿಲ್ಲ ಎಂದರು.
ಕೆಎಸ್‍ಆರ್ ಪಿ 7 ನೇ ಬೆಟಾಲಿಯನ್‍ನ ಅಸಿಸ್ಟೆಂಟ್ ಕಮಾಂಡೆಂಟ್ ಶರತ್ ಮಾತನಾಡಿ ವಿಶ್ವ ರಕ್ತದಾನಿಗಳ ದಿನದಂದು ರಕ್ತದಾನ ಮಾಡುವ ಮೂಲಕ ಬೇರೆ ಜನರಿಗೆ ಸ್ಪೂರ್ತಿ ಸಿಕ್ಕಿದೆ. ರಕ್ತದಾನ ಮಾಡುವುದರಲ್ಲಿ ಇತರರಿಗೆ ತಪ್ಪು ತಿಳಿವಳಿಕೆಯಿದ್ದು, ಈ ಮೂಲಕ ಅದನ್ನು ಹೋಗಲಾಡಿಸಬಹುದು. ಹಿಂದೆಯೂ ಕೆಎಸ್‍ಆರ್ ಪಿ ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೂ ರಕ್ತದಾನ ನಡೆಸುವ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.
ಈ ಸಂದರ್ಭ ನಿಟ್ಟೆ ವಿವಿ ಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ , ಆಡಳಿತ ವಿಭಾಗದ ಉಪ ಡೀನ್ ಡಾ| ಜೆ.ಪಿ ಶೆಟ್ಟಿ, ಬ್ಲಡ್ ಬ್ಯಾಂಕ್ ಅಧಿಕಾರಿ ಡಾ| ಚಂದ್ರಿಕಾ, ಡಾ| ಶ್ರೀನಿವಾಸ್ ಕಾಮತ್ , ಡಾ| ಶ್ರೀನಿವಾಸ್ ಭಟ್ , ಕೆಎಸ್ ಆರ್ ಪಿ 7ನೇ ಬೆಟಾಲಿಯನ್ನಿನ ಉಪನಿರೀಕ್ಷಕರುಗಳಾದ ಕೆ. ಶ್ರೀಧರ್, ಗಣೇಶ್ ನಾಯಕ್, ರೆಹಮಾನ್ ಬೇಗ್, ಹರೀಶ್ , ಮುರಳೀ, ಎ.ಎಸ್ ಐ ಚೆನಿಯಪ್ಪ ನಾಯ್ಕ, ಮೋಹನ್ ಕುಮಾರ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕಿ ಡಾ| ಸುಮಲತಾ, ಡಾ| ವಾದೀಶ್ ಭಟ್, ಕೆಎಸ್‍ಆರ್ ಪಿ 7 ನೇ ಬೆಟಾಲಿಯನ್‍ನ ಅಸಿಸ್ಟೆಂಟ್ ಕಮಾಂಡೆಂಟ್ ಶರತ್ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆಎಸ್‍ಆರ್ ಪಿ ಅಧಿಕಾರಿಗಳು ಸಿಬಂದಿಗಳು, ನಿಟ್ಟೆ ವಿಶ್ವವಿದ್ಯಾನಿಲಯದ ಎನ್‍ಎಸ್‍ಎಸ್ ವಿದ್ಯಾರ್ಥಿಗಳು, ನಿಟ್ಟೆ ಸಿಬಂದಿಗಳು ರಕ್ತದಾನ ಮಾಡಿದರು.
ಇದೇ ಸಂದರ್ಭ ಆಸ್ಪತ್ರೆಯ ಗ್ಲಾಸ್ ಹೌಸ್ ನಲ್ಲಿ ರಕ್ತದಾನ ಕುರಿತ ಬೀದಿ ನಾಟಕವನ್ನು ವಿದ್ಯಾರ್ಥಿಗಳು ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.