ನಕಲಿ ಹೆಸರಿನಲ್ಲಿ ವಂಚಿಸಿ ವಿವಾಹ ಯುವಕನಿಗೆ ಮನೆಮಂದಿಯಿಂದ ಥಳಿತ
UllalaVani
UN NETWORKS
ಉಳ್ಳಾಲ: ನಕಲಿ ಹೆಸರಿನಲ್ಲಿ ವಂಚಿಸಿ ಯುವತಿಯೋರ್ವಳನ್ನು ವರಿಸಿದ್ದ ಯುವಕನಿಗೆ ಯುವತಿ ಮನೆಮಂದಿ ಧರ್ಮದೇಟು ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ಬುಧವಾರ ಮಧ್ಯಾಹ್ನ ವೇಳೆ ನಡೆದಿದೆ.
ಸುಳ್ಯ ಮೂಲದ ಸೈಯ್ಯದ್ ಹಾರೂನ್ ಯುವತಿಗೆ ವಂಚಿಸಿದ ಭೂಪ. ಕುಂಪಲ ಚಿತ್ರಾಂಜಲಿನಗರದ ನಿವಾಸಿ ಹೇಮಲತಾ (35) ವಂಚನೆಗೆ ಒಳಗಾದವಳು. ಮೂರು ವರ್ಷಗಳಿಂದ ಮಂಗಳೂರಿನಲ್ಲಿ ಕೆಲಸದಲ್ಲಿದ್ದ ಹೇಮಲತಾಳಿಗೆ ಅಲ್ಲೇ ಕೆಲಸ ಮಾಡಿಕೊಂಡಿದ್ದ ಸೈಯ್ಯದ್ ಹಾರೂನ್ ಪರಿಚಯವಾಗಿತ್ತು. ಪರಿಚಯದ ಸಮಯ ತನ್ನನ್ನು ಅರುಣ್ ಎಂದು ಹೆಸರು ಬದಲಾಯಿಸಿ ಹೇಳಿಕೊಂಡಿದ್ದವ, ಹೇಮಲತಾ ಜತೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿದ್ದನು. ಮೂರು ವರ್ಷಗಳಿಂದ ಪರಿಚಯದಲ್ಲಿದ್ದ ಇವರಿಗೆ ವರ್ಷದ ಹಿಂದೆ ಮಂಗಳೂರಿನ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಿದ್ದರು. ಕೆಲ ತಿಂಗಳ ಬಳಿಕ ಹಾರೂನ್ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪತ್ನಿಗೆ ವಂಚಿಸಿರುವ ಕುರಿತು ಪ್ರಕರಣ ದಾಖಲಾಗಿತ್ತು. ತನ್ನದೇ ಧರ್ಮದ ಯುವತಿಯನ್ನು ವಿವಾಹವಾಗಿದ್ದವ ಲಕ್ಷಾಂತರ ಬೆಲೆಬಾಳುವ ಚಿನ್ನವನ್ನು ಪಡೆದು ವಂಚಿಸಿದ್ದ ಕುರಿತು ದೂರು ದಾಖಲಾಗಿತ್ತು. ಈ ವೇಳೆ ಹೇಮಲತಾ ಅವರಿಗೆ ತನ್ನ ಪತಿ ಅರುಣ್ ಅಲ್ಲ ಹಾರೂನ್ ಎಂದು ತಿಳಿದುಬಂದಿತ್ತು. ಅಲ್ಲದೆ ತನಗಾದ ವಂಚನೆ ವಿರುದ್ಧ ಆತನ ಜತೆಗೆ ಜಗಳಕ್ಕೆ ಇಳಿದಿದ್ದರಿಂದಾಗಿ ಕುಂಪಲದ ಹೇಮಲತಾ ಅವರ ಮನೆಯಲ್ಲೇ ನೆಲೆಸಿದ್ದ ಹಾರೂನ್ ಬಳಿಕ ಮನೆ ತೊರೆದಿದ್ದ. ಮತ್ತೆ ಆರು ತಿಂಗಳ ಹಿಂದೆ ಹೇಮಲತಾ ಮನೆಗೆ ಬಂದವ ತಾನು ನೀಡಿರುವ ರೂ. 10,000 ವಾಪಸ್ಸು ನೀಡುವಂತೆ ಪೀಡಿಸಲು ಆರಂಭಿಸಿದ್ದ. ಈ ಬಗ್ಗೆ ಸ್ಥಳೀಯರ ಜತೆಗೆ ಹೇಮಲತಾ ಅವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಿದ್ದರು. ಇದೀಗ ಮತ್ತೆ ಬುಧವಾರ ಮಧ್ಯಾಹ್ನ ವೇಳೆ ಕುಂಪಲದ ಮನೆಗೆ ಬಂದಾತ ತಾನು ಹಾಕಿದ್ದ ಕರಿಮಣಿ ಸರ ಹಾಗೂ ಆಕೆಗಾಗಿ ಖರ್ಚು ಮಾಡಿರುವ ರೂ. 60,000 ನಗದು ನೀಡುವಂತೆ ಒತ್ತಾಯಿಸಲು ಆರಂಭಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಯುವತಿ ಮನೆಯವರು ಆತನ ಮೇಲೆ ಹಲ್ಲೆ ನಡೆಸಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ವಿರುದ್ಧ ದೂರು ಸ್ವೀಕರಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.