UN NETWORKS
ತಲಪಾಡಿ: ಶಾಲಾ ಕಾಲೇಜು ಗಳು ಕೃಷಿಯತ್ತ ಮುಖ ಮಾಡುವುದು ಇತ್ತೀಚಿನ ದಿನಗಳ ಉತ್ತಮ ಬೆಳವಣಿಗೆ. ಈ ಮೂಲಕ ಮಕ್ಕಳಿಗೆ ಕೃಷಿ ಸಂಸ್ಕೃತಿಯ ಪರಿಚಯ ಕಾರ್ಯ ನಡೆಯುತ್ತಿದೆ. ಇಲ್ಲೊಂದು ಶಾಲೆ ಇನ್ನೂ ಒಂದು ಹೆಜ್ಜೆ ಮುಂದಿರಿಸಿ ಸಾವಯವ ಕೃಷಿಯನ್ನು ಒಂದು ವಿಷಯವಾಗಿ ಅಳವಡಿಸಿಕೊಂಡು ಕಡ್ಡಾಯ ಕೃಷಿ ಶಿಕ್ಷಣಕ್ಕೆ ಮುಂದಾಗಿದೆ.
ಕೃಷಿ ಪದವೀಧರರಿಂದ ಪಾಠ
ಕೃಷಿ ಪಾಠಕ್ಕೆಂದೇ ಇಲ್ಲಿ ಏಳು ಮಂದಿ ಕೃಷಿ ಪದವೀಧರರಿದ್ದಾರೆ. ಕೃಷಿ ವಿಜ್ಞಾನ ಸ್ನಾತಕೋತ್ತರ ಪದವೀಧರ ಒಬ್ಬರು ಉಪನ್ಯಾಸಕರು ಥಿಯರಿ ತರಗತಿ ನಡೆಸಿದರೆ, ಆರು ಮಂದಿ ಕೃಷಿ ಪದವೀಧರರು ಪ್ರಾಯೋಗಿಕ ಶಿಕ್ಷಣ ನೀಡಲಿದ್ದಾರೆ.
ಕೃಷಿ ಪಾಠದ ಪ್ರಥಮ ಹಂತ
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕೃಷಿ ಪಾಠಕ್ಕೆ ಚಾಲನೆ ನೀಡಿದ್ದು, ಪ್ರಥಮ ಹಂತದಲ್ಲಿ ವಿದ್ಯಾರ್ಥಿಗಳು ಮೂರೂವರೆ ಎಕರೆ ಪ್ರದೇಶದಲ್ಲಿ ಕೃಷಿ ಮಾಡಲಿದ್ದಾರೆ. ಹೈನುಗಾರಿಕೆ, ಸಾವಯವ ಕೃಷಿ, ಹೂದೋಟ ನಿರ್ಮಾಣ, ಹಣ್ಣುಹಂಪಲು ಕೃಷಿ, ಭತ್ತದ ಕೃಷಿಯ ಕುರಿತು ಪಠ್ಯಗಳಿವೆ. ಪ್ರಾಯೋಗಿಕ ತರಬೇತಿ ನೀಡಲು ಕೃಷಿ ಭೂಮಿ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಭೂಮಿಯನ್ನು ಬಳಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ವಿವೇಕ್ ತಂತ್ರಿ ಹೇಳಿದ್ದಾರೆ.
ಮಕ್ಕಳಿಗೆ ತಾವು ತಿನ್ನುವ ಉಣ್ಣುವ ಪ್ರತಿ ವಸ್ತುವಿನ ಬಗ್ಗೆ ಜ್ಞಾನ ಅಗತ್ಯ. ಆಹಾರ ವಸ್ತುಗಳನ್ನು ಹೇಗೆ ಬೆಳೆಯಲಾಗುತ್ತದೆ ಮತ್ತು ರೈತರ ಬವಣೆ ಇಂತಹ ಶಿಕ್ಷಣದಿಂದ ಅರ್ಥವಾಗಲು ಸಾಧ್ಯ. ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ಇನ್ನಷ್ಟು ವೈಜ್ಞಾನಿಕವಾಗಿ ಕೃಷಿ ಸಂಸ್ಕೃತಿಯ ಕುರಿತು ಆಸಕ್ತಿ ಮೂಡಿಸಲು ಯೋಜನೆ ರೂಪಿಸಲಾಗಿದೆ.
– ಪ್ರೊ| ಎಂ.ಬಿ. ಪುರಾಣಿಕ್, ಅಧ್ಯಕ್ಷರು, ಶಾರದಾ ಸಮೂಹ ಸಂಸ್ಥೆಗಳು ಮಂಗಳೂರು
ಪಟ್ಟಣದವರಾದ ಕಾರಣ ಯಾವ ತರಕಾರಿ ಹೇಗೆ ಬೆಳೆಯುತ್ತದೆ ಎಂಬ ಅರಿವು ನಮಗಿಲ್ಲ. ಕೃಷಿ ಪಾಠ ಪ್ರಾರಂಭಿಸಿದ್ದರಿಂದ ಇವೆಲ್ಲ ವಿಚಾರಗಳ ಕುರಿತು ತಿಳಿಯಲು ಸಹಕಾರಿಯಾಗಲಿದೆ. ಸಾವಯವ ಕೃಷಿಯನ್ನು ಆರಂಭಿಸಿದ್ದು, ನಾವು ಬೆಳೆದ ಫಸಲನ್ನು ಸವಿಯುವ ತವಕದಲ್ಲಿದ್ದೇವೆ.
– ದೃಶ್ಯಾ, ವಿದ್ಯಾರ್ಥಿನಿ,