Site icon Ullalavani

ಜೂ.೧೩ ಪೇಜಾವರ ಸ್ವಾಮೀಜಿ ನಡೆಸಲು ಉದ್ದೇಶಿಸಿದ್ದ ಇಫ್ತಾರ್ ಕೂಟ ರದ್ದು

UN NETWORKS

ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಜೂ.13 ರಂದು ಅಜ್ಜರಕಾಡು ಗೋವಿಂದ ಕಲ್ಯಾಣ ಮಂಟಪದಲ್ಲಿ ನಡೆಸಲು ಉದ್ದೇಶಿಸಿದ್ದ ಇಫ್ತಾರ್ ಕೂಟ ರದ್ದುಗೊಂಡಿರುವ ಬಗ್ಗೆ ತಿಳಿದುಬಂದಿದೆ.

ಕಳೆದ ವರ್ಷ ಪೇಜಾವರ ಸ್ವಾಮೀಜಿಯ ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸಿ, ನಮಾಝ್ ನಿರ್ವಹಿಸಲು ಅವಕಾಶ ನೀಡಿದ ಕಾರಣಕ್ಕೆ ಬಹಳಷ್ಟು ವಿವಾದ ಉಂಟಾಗಿತ್ತು. ಇದರ ವಿರುದ್ಧ ಶ್ರೀರಾಮ ಸೇನೆ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

ಈ ಬಾರಿ ಪೇಜಾವರ ಸ್ವಾಮೀಜಿ ಮಠದಿಂದ ಹೊರಗಡೆ ಗೋವಿಂದ ಕಲ್ಯಾಣ ಮಂಟಪದಲ್ಲಿ ಇಫ್ತಾರ್ ಕೂಟ ನಡೆಸುವುದಾಗಿ ತಿಳಿಸಿದ್ದರು. ಈ ಬಗ್ಗೆ ಭಾರೀ ಚರ್ಚೆ ಹಾಗೂ ವಿರೋಧಗಳು ವ್ಯಕ್ತವಾಗಿತ್ತು. ಇದೀಗ ಸ್ವಾಮೀಜಿ ಮೇಲೆ ಒತ್ತಡ ಹೇರಿದ ಕಾರಣ ಇಫ್ತಾರ್ ಕೂಟವನ್ನು ರದ್ದುಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಮಠದ ಮೂಲಗಳ ಪ್ರಕಾರ, ಸ್ವಾಮೀಜಿಗೆ ಎಡೆಬಿಡದ ಕಾರ್ಯಕ್ರಮಗಳು ಇರುವುದರಿಂದ ಈ ಬಾರಿಯ ಇಫ್ತಾರ್ ಕೂಟವನ್ನು ಕೈಬಿಡಲಾಗಿದೆ ಎಂದು ತಿಳಿಸಲಾಗಿದೆ.

ಇದೇ ವಿಚಾರವಾಗಿ ಉಡುಪಿ ಪೇಜಾವರ ಸ್ವಾಮೀಜಿ ಬ್ಲಡ್ ಡೋನೆಟಿಂಗ್ ಟೀಮ್‍ನ ಆರೀಫ್ ದೊಡ್ಡಣಗುಡ್ಡೆ ಹಾಗೂ ಅನ್ಸಾರ್ ಅಹ್ಮದ್ ನಿನ್ನೆ ಬೆಂಗಳೂರಿಗೆ ತೆರಳಿ ಪೇಜಾವರ ಸ್ವಾಮೀಜಿಯನ್ನು ಭೇಟಿ ಮಾಡಿದ್ದು, ಈ ವೇಳೆ ಅವರು ಇಫ್ತಾರ್ ಕೂಟವನ್ನು ರದ್ದುಪಡಿಸಿರುವುದಾಗಿ ತಿಳಿಸಿದ್ದಾರೆ.

`ಈ ಬಾರಿ ಕೂಡ ಪೇಜಾವರ ಸ್ವಾಮೀಜಿಯವರೇ ಬಹಳ ಮುತುವರ್ಜಿಯಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಿದ್ದರು. ಇದಕ್ಕೆ ನಾವೆಲ್ಲ ಸಿದ್ಧರಾಗಿದ್ದೇವು. ಆದರೆ ಇದಕ್ಕೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಸ್ವಾಮೀಜಿ ಮೇಲೆ ಒತ್ತಡ ಹೇರಿದ್ದವು. ಇದೇ ಕಾರಣಕ್ಕೆ ಇಫ್ತಾರ್ ಕೂಟವನ್ನು ರದ್ದುಪಡಿಸಲಾಗಿದೆ’ ಎಂದು ಅನ್ಸಾರ್ ಅಹ್ಮದ್ ಪತ್ರಿಕೆಗೆ ತಿಳಿಸಿದ್ದಾರೆ.

Exit mobile version