ಉಳ್ಳಾಲ: ತಂಡವೊಂದು ವಿದ್ಯಾರ್ಥಿ ಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮರಾಠಿಮೂಲೆ ಮಸೀದಿ ಆವರಣದಲ್ಲಿ ಶುಕ್ರವಾರ ತಡರಾತ್ರಿ ವೇಳೆ ನಡೆದಿದೆ.ಕಿನ್ಯಾ ನಿವಾಸಿ ಸಕಲೈನ್ (16) ತಂಡದಿಂದ ದಾಳಿಗೊಳಗಾದ ವಿದ್ಯಾರ್ಥಿ. ನಾಟೆಕಲ್ ವಸತಿ ಶಾಲೆಯ ಒಂಭತ್ತನೇ ತರಗತಿ ವಿದ್ಯಾಥಿಯಾಗಿದ್ದಾನೆ. ಈತನ ಮೇಲೆ ಮಂಜೇಶ್ವರ ಮೂಲದ ಮೂವರ ತಂಡ ಕೃತ್ಯ ಎಸಗಿದೆ.
ಘಟನೆ ವಿವರ: ಶುಕ್ರವಾರ ಸಂಜೆ ಉಪವಾಸ ಬಿಡುವ ಸಮಯ ಸಕಲೈನ್ ಮತ್ತು ಆತನ ಸಹಪಾಠಿ ಅರಾಫ್ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದಿತ್ತು. ಬಳಿಕ ಶಾಲಾ ಅಧ್ಯಾಪಕರು ಅದನ್ನು ಸಮಾಧಾನಿಸಿ ಇಬ್ಬರನ್ನು ನಮಾಜಿಗೆಂದು ಮರಾಟಿಮೂಲೆ ಮಸೀದಿಗೆ ಕಳುಹಿಸಿದ್ದರು. ಆದರೆ ಈ ಪೈಕಿ ಅರಾಫ್ ಎಂಬಾತ ಮೊಬೈಲ್ ಮೂಲಕ ತನ್ನ ಪರಿಚಿತರಿಗೆ ವಿಚಾರ ತಿಳಿಸಿ, ಸಕಲೈನ್ ಗೆ ಗತಿ ಕಾಣಿಸುವಂತೆ ಸೂಚಿಸಿದ್ದ ಎನ್ನಲಾಗಿದೆ. ಮಸೀದಿಯ ಹೊರ ಆವರಣದಲ್ಲಿ ನಮಾಜಿನಲ್ಲಿ ತೊಡಗಿದ್ದ ಸಕಲೈನ್ ಬಳಿ ಬಂದ ಮೂವರ ತಂಡ ಅಲ್ಲಿಂದ ಏಕಾಏಕಿ ಹೊರಗೆಳೆದು ಹಾಕಿ ಸ್ಟಿಕ್ ಮೂಲಕ ಮಾರಣಾಂತಿಕ ದಾಳಿ ನಡೆಸಿದೆ. ಈತನ ಕೂಗು ಕೇಳಿ ಮಸೀದಿಯಲ್ಲಿದ್ದವರು ಓಡಿ ಬರುವಷ್ಟರಲ್ಲಿ ಮೂವರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆದರೆ ಆರೋಪಿಗಳು ಸ್ಥಳಕ್ಕಾಗಮಿಸಿದ ಕೇರಳ ನೋಂದಾಯಿತ ಕ್ವಾಲಿಸ್ ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿಯಿದ್ದಂತೆ, ಠಾಣೆಯ ಎದುರು ಜಮಾಯಿಸಿದ ಜನ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿದರು. ಗಾಯಾಳು ಬಾಲಕ ನಾಟೆಕಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.