UN NETWORKS
ಮಂಗಳೂರು: ನಕಲಿ ಚಿನ್ನ ನೀಡಿ ಲಕ್ಷಾಂತರ ಹಣ ನೀಡುವಂತೆ ಹೇಳಿದ ಮೂವರ ತಂಡದಲ್ಲಿ ಒಬ್ಬನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತೊಕ್ಕೊಟ್ಟುವಿನಲ್ಲಿ ನಿನ್ನೆ ನಡೆದಿದ್ದು, ಇನ್ನಿಬ್ಬರು ಸ್ಥಳದಿಂದ ಓಡಿ ತಲೆಮರೆಸಿಕೊಂಡಿದ್ದಾರೆ.
ಎರಡು ದಿನಗಳ ಹಿಂದೆ ಹೊರರಾಜ್ಯದಿಂದ ಹಿಂದಿ ಮಾತನಾಡುವ ಮೂರು ಜನರ ತಂಡ ತೊಕ್ಕೊಟ್ಟು ಎಸ್.ಮೈ ಶಾಪ್ ಫ್ಯಾನ್ಸಿ ಸೆಂಟರಿಗೆ ಪ್ರವೇಶಿಸಿತ್ತು. ಅಲ್ಲಿ ಅಂಗಡಿ ಮಾಲೀಕರಲ್ಲಿ ತಮ್ಮಲ್ಲಿ ರೂ. 40 ಲಕ್ಷ ಬೆಲೆಬಾಳುವ ಚಿನ್ನಾಭರಣವಿದ್ದು, ರಸ್ತೆ ಬದಿಯಲ್ಲಿ ಸಿಕ್ಕಿದೆ. ಅದನ್ನು ಎಲ್ಲಿಯೂ ಮಾರಾಟ ಮಾಡಲು ಆಗುತ್ತಿಲ್ಲ. ಅದಕ್ಕಾಗಿ ಕೇವಲ ರೂ. 4 ಲಕ್ಷ ನೀಡಿದರೆ ಸಾಕು, ಅಷ್ಟೂ ಚಿನ್ನವನ್ನು ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಸ್ಯಾಂಪಲ್ಲಾಗಿ ಒಂದು ತುಂಡು ಚಿನ್ನವನ್ನು ಪರಿಶೀಲನೆಗೆ ನೀಡಿದ್ದರು. ಅದನ್ನು ಪರಿಶೀಲಿಸುವಾಗ ಅಸಲಿಯೇ ಆಗಿತ್ತು. ಅಲ್ಲದೆ ಬಾಕಿ ಚಿನ್ನವನ್ನು ನಾಳೆ ತರುವುದಾಗಿ ಹೇಳಿದ ತಂಡ ಕೊಟ್ಟ ಚಿನ್ನದ ತುಂಡನ್ನು ವಾಪಸ್ಸು ಪಡೆದು ಹೊರಟಿತ್ತು. ಇವರ ವರ್ತನೆಯಿಂದ ಸಂಶಯಗೊಂಡಿದ್ದ ಮಾಲೀಕರು ತಮ್ಮ ಸ್ನೇಹಿತರಲ್ಲಿ ವಿಷಯ ತಿಳಿಸಿದ್ದರು. ಅದರಂತೆ ನಿನ್ನೆ ತಂಡ ಮತ್ತೆ ಚಿನ್ನ ಹಿಡಿದುಕೊಂಡು ಬಂದು ಫ್ಯಾನ್ಸಿಗೆ ಪ್ರವೇಶಿಸಿದ್ದರು. ಈ ನಡುವೆ ಸ್ಥಳೀಯರು ಸೇರಿಕೊಂಡು ಮೂವರನ್ನು ವಿಚಾರಿಸಲು ಮುಂದಾದಾಗ ತಬ್ಬಿಬ್ಬಾದ ಮೂವರಲ್ಲಿ ಇಬ್ಬರು ಓಡಿ ತಪ್ಪಿಸಿಕೊಂಡರು. ಉಳಿದ ಓರ್ವನನ್ನು ಉಳ್ಳಾಲ ಪೊಲೀಸರ ವಶಕ್ಕೆ ನೀಡಿದ್ದಾರೆ. ಈತನ ಹಿಂದೆ ದೊಡ್ಡ ಜಾಲವೇ ಇರುವುದರ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.