UN NETWORKS
ಉಳ್ಳಾಲ: ವೈದ್ಯಕೀಯ ಕ್ಷೇತ್ರದಲ್ಲಿ ಅನುಭೂತಿ, ಸಹಾನುಭೂತಿ , ಮಾನವೀಯತೆಯನ್ನು ಪ್ರತಿಪಾದಿಸುವುದರ ಜತೆಗೆ ಹಿಂದಿನ ವೈದ್ಯ ವಿಜ್ಞಾನದ ಕಲೆಯನ್ನು ಪುನರ್ ಸ್ಥಾಪಿಸುವ ಉದ್ದೇಶದೊಂದಿಗೆ ಯುನೆಸ್ಕೋ ದ ಜೈವಿಕ ನೀತಿಶಾಸ್ತ್ರ ವಿಭಾಗಗಳನ್ನು ಹುಟ್ಟಿಹಾಕಿಕೊಂಡಿದೆ ಎಂದು ಯುನೆಸ್ಕೋ ಚೇರ್ ಇನ್ ಬಯೋಎಥಿಕ್ಸ್ ಹೈಫಾ ದ ಪ್ರೊ. ರಸ್ಸೆಲ್ ಡಿಸೋಜಾ ಅಭಿಪ್ರಾಯಪಟ್ಟರು.ಅವರು ಹೈಫಾ,ದ ಯುನೆಸ್ಕೋ ಚೇರ್ ಇನ್ ಬಯೋ ಎಥಿಕ್ಸ್ ಇದರ ಅಂತರಾಷ್ಟ್ರೀಯ ನೆಟ್‍ವರ್ಕ್‍ನಡಿ ನಿಟ್ಟೆ (ಸ್ವಾಯುತ್ತೆಗೊಳ್ಳಲಿರುವ ವಿ.ವಿ) ಯಲ್ಲಿ ಆರಂಭಿಸಿದ ಜೈವಿಕ ನೀತಿಶಾಸ್ತ್ರದ ವಿದ್ಯಾರ್ಥಿ ವಿಭಾಗವನ್ನು ಸೋಮವಾರ ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ಉದ್ಘಾಟಿಸಿ ಮಾತನಾಡಿದರು.
ನ್ಯಾಷನಲ್ ಚೇರ್ ಇಂಡಿಯನ್ ಪ್ರೋಗ್ರಾಂ ಯುನೆಸ್ಕೋ ಚೇರ್ ಇನ್ ಬಯೋಎಥಿಕ್ಸ್ ಇದರ ಡಾ| ಮೇರಿ ಮ್ಯಾಥ್ಯು ಮಾತನಾಡಿ ವಿಂಗ್ ಜತೆಗೆ ಕೈಜೋಡಿಸಿಕೊಂಡಿರುವ ವಿದ್ಯಾರ್ಥಿಗಳು ಸಹಪಾಠಿಗಳಿಗೆ, ಸಿಬ್ಬಂದಿಗಳಿಗೆ ಜ್ಞಾನ ವೃದ್ಧಿಸಲು ಸಹಕಾರಿಯಾಗುತ್ತಾರೆ. ಹಲವೆಡೆ ಬೀದಿ ನಾಟಕಗಳು, ಪ್ರತಿಭಾ ಪ್ರದರ್ಶನಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಿಗೆ ಸಿಗಬೇಕಾದ ಆರೋಗ್ಯ ನೀತಿಯ ಅರಿವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಮೂಡಿಸುವ ಕಾರ್ಯ ದೇಶದಾದ್ಯಂತ ನಡೆದಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ (ಸ್ವಾಯುತ್ತೆಗೊಳ್ಳಲಿರುವ ವಿ.ವಿ) ಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ ವಹಿಸಿದ್ದರು. ಕುಲಸಚಿವೆ ಡಾ| ಅಲ್ಕಾ ಕುಲಕರ್ಣಿ, ನಿಟ್ಟೆ ವಿ.ವಿ ಯುನೆಸ್ಕೋ ಬಯೋಎಥಿಕ್ಸ್ ನ ಸದಸ್ಯ ಡಾ| ಶ್ರೀನಿವಾಸ್ ಭಟ್.ಯು, ಡಾ| ಸಿದ್ದಾರ್ಥ್.ಪಿ.ದುಭಾಷಿ ಉಪಸ್ಥಿತರಿದ್ದರು. ಭಟ್ಟಾಚಾರ್ಯ ಸ್ವಾಗತಿಸಿದರು. ವಿದ್ಯಾರ್ಥಿ ವಿಂಗ್ ನ ಅಧ್ಯಕ್ಷೆ ಮನೀಷಾ ರೈ ವಂದಿಸಿದರು.