UN NETWORKS
ಉಳ್ಳಾಲ: ವೈದ್ಯಕೀಯ ವಿದ್ಯಾರ್ಥಿಗಳಿದ್ದ ಕಾರು ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡು, ರಿಕ್ಷಾದಲ್ಲಿದ್ದ ಪ್ರಯಾಣಿಕರೂ ಗಾಯಗೊಂಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕುದಕಟ್ಟೆ ಯೆನೆಪೋಯ ಆಸ್ಪತ್ರೆ ಎದುರುಗಡೆ ಶನಿವಾರ ತಡರಾತ್ರಿ ಸಂಭವಿಸಿದೆ.
ರ್ಯಾಷ್ ಡ್ರೈವಿಂಗ್ : ಕಾರು ಚಾಲಕ ವೈದ್ಯಕೀಯ ವಿದ್ಯಾರ್ಥಿ ಪಾರ್ಟಿ ಮುಗಿಸಿ ಅಮಿತ ವೇಗದಲ್ಲಿ ಕಾರು ಚಲಾಯಿಸಿಕೊಂಡು ಬಂದಿರುವುದೇ ಘಟನೆಗೆ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ. ಮಿತಿಮೀರಿದ ವೇಗದಲ್ಲಿ ಬಂದು, ಸಂಪೂರ್ಣ ವಿರುದ್ಧ ಧಿಕ್ಕಿನಲ್ಲಿ ತೆರಳಿದ್ದರಿಂದಾಗಿ ಘಟನೆ ಸಂಭವಿಸಿದೆ. ಕಾರು ಚಾಲಕ ವಿದ್ಯಾರ್ಥಿ ಕುಡಿದಿದ್ದಾನೆಂದು ಆರೋಪಿಸಿ ಸ್ಥಳೀಯರು ತರಾಟೆಗೆ ತೆಗೆದುಕೊಂಡು ಎರಡೇಟು ಬಿಟ್ಟಿದ್ದಾರೆ. ಈ ನಡುವೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ಕಾಂಗ್ರೆಸ್ ಮುಖಂಡ ಪಾನೀರಿನ ಆಲ್ವಿನ್ ಡಿಸೋಜ ಕಾರು ಚಾಲಕನನ್ನು ತಮ್ಮ ಕಾರಿನಲ್ಲಿ ಇರಿಸಿ ಸಾರ್ವಜನಿಕರು ಹೊಡೆಯದಂತೆ ನೋಡಿಕೊಂಡರು. ಅಲ್ಲದೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು ಹಾಗೂ ದಕ್ಷಿಣ ಸಂಚಾರಿ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾರದ ಕೊನೆಯ ದಿನ ಶನಿವಾರದಂದು ವಿದ್ಯಾರ್ಥಿಗಳು ಪಾರ್ಟಿ ನಡೆಸಿ ಇತರೆ ವಾಹನ ಸವಾರರಿಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ. ಘಟನಾ ಸ್ಥಳದಲ್ಲೇ ಕಳೆದ ಮೂರು ದಿನಗಳಲ್ಲಿ ಎರಡನೇ ಅಪಘಾತ ಇದಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಿಕ್ಷಾ ಚಾಲಕ ದಿವಾಕರ್ ಹಗಲು ಹೊತ್ತಿನಲ್ಲಿ ಯೆನೆಪೋಯ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಸಂಜೆ ಬಳಿಕ ರಿಕ್ಷಾ ಚಲಾಯಿಸುತ್ತಿದ್ದಾರೆ. ಪ್ರತಿದಿನ ಗೊತ್ತುಪಡಿಸಿದ ಬಾಡಿಗೆಯನ್ನು ಕೊಂಡೊಯ್ಯುತ್ತಿದ್ದ ಸಂದರ್ಭ ಘಟನೆ ನಡೆದಿದೆ.