Site icon Ullalavani

ಬಾಬು ಕಂಪೌಂಡ್: ಬಾವಿಗಳಲ್ಲಿ ಟಾಯ್ಲೆಟ್ ನೀರು

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಅಲ್ಲಿರುವ ಬಾವಿಗಳೆಲ್ಲವೂ ಮಲಿನವಾಗಿದೆ. ತ್ಯಾಜ್ಯ ನೀರು ವಸತಿ ಪ್ರದೇಶದಲ್ಲಿ ಹರಿಯುತ್ತಿದೆ. ದುರ್ವಾಸನೆಯಿಂದ ಕೂಡಿದ ವಾತಾವರಣದಿಂದ ಬದುಕಲು ಅಸಾಧ್ಯ. ಹದಗೆಟ್ಟ ವಾತಾವರಣದಿಂದಾಗಿ ಸ್ಥಳೀಯರಲ್ಲಿ ಚರ್ಮರೋಗಗಳು ಉಂಟಾಗುತ್ತಿವೆ. ಜಿಲ್ಲಾಧಿಕಾರಿಯಾಗಲಿ , ಉಳ್ಳಾಲ ನಗರಸಭೆ ಅಧಿಕಾರಿಗಳಿಗಾಗಲಿ ದೂರು ನೀಡಿದರೆ ಪ್ರಯೋಜನವಿಲ್ಲದಂತಾಗಿದೆ. ಇದು ಉಳ್ಳಾಲ ಒಂಭತ್ತುಕೆರೆ ಬಾಬು ಕಂಪೌಂಡ್ ನಿವಾಸಿಗಳ ಅಳಲಾಗಿದೆ.

ಉಳ್ಳಾಲ ಒಂಭತ್ತುಕೆರೆಯಲ್ಲಿ ಕಳೆದ 7 ತಿಂಗಳಿನಿಂದ ಮೂರು ಅಂತಸ್ತಿನ ವಸತಿ ಸಂಕೀರ್ಣ ಕಾರ್ಯಾಚರಿಸುತ್ತಿದೆ. 14 ಮನೆಗಳಿರುವ ಕಟ್ಟಡದ ಶೌಚಾಲಯದ ನೀರು, ತ್ಯಾಜ್ಯ ವಿಲೇವಾರಿಗೆ ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ಇಂತಹ ತೊಂದರೆ ಸಾರ್ವಜನಿಕರಿಗೆ ಉದ್ಭವಿಸಿದೆ.

ಲಾರಿಯಲ್ಲಿ ಸರಬರಾಜು:

ವಸತಿ ಸಂಕೀರ್ಣ ಆರಂಭದ ಸಮಯದಲ್ಲಿ ಸಂಪೂರ್ಣ ತ್ಯಾಜ್ಯ ನೀರನ್ನು ಲಾರಿ ಮೂಲಕ ವಿಲೇವಾರಿ ನಡೆಸಲಾಗುತಿತ್ತು. ತಿಂಗಳು ಕಳೆದಂತೆ ಹಣ ಉಳಿತಾಯ ಮಾಡಲು ಹೊರಟ ಕಟ್ಟಡ ಮಾಲೀಕರು ಕಟ್ಟಡದ ಕೆಳಭಾಗದಲ್ಲಿ ಬೃಹತ್ ಗಾತ್ರದ ಹೊಂಡ ಅಗೆದು ಅಲ್ಲೇ ತ್ಯಾಜ್ಯಯುಕ್ತ ನೀರು ಬಿಡಲು ಆರಂಭಿಸಿದರು. ವಾರದಲ್ಲಿ ಒಂದು ಬಾರಿ ಲಾರಿ ಮೂಲಕ ಸಾಗಿಸಲು ಆರಂಭಿಸಿದರು. ದಿನದ ಸಮಯದಲ್ಲಿ ಸಾಗಾಟ ಮಾಡುವಾಗ ಪರಿಸರವಿಡೀ ದುರ್ನಾತದಿಂದ ಕೂಡಿ, ಸ್ಥಳೀಯರು ಮನೆಯೊಳಗೆ ಎಲ್ಲಾ ಬಾಗಿಲು ಮುಚ್ಚಿ ಕುಳಿತುಕೊಳ್ಳುವ ಸ್ಥಿತಿ ಇದೆ. ಹಾಗೆ ಮಾಡಿದರೂ ಮನೆಯೊಳಗೂ ದುರ್ವಾಸನೆ ಬೀರುವುದರಿಂದ ವಾಸಿಸಲು ಅಸಾಧ್ಯವಾಗಿದೆ ಎಂದು ಮಹಿಳೆಯೋರ್ವರ ಆರೋಪ.

ಮಲಿನಗೊಂಡ ಬಾವಿ ನೀರು :

ಕಟ್ಟಡ ಇರುವ ಆಸುಪಾಸಿನಲ್ಲಿ ಹಲವು ಮನೆಗಳಿವೆ. ಅಲ್ಲಿರುವ ಐದು ಬಾವಿಗಳು ಮಲಿನಗೊಂಡಿದೆ. ಬಾವಿಯಲ್ಲಿನ ನೀರಿನಲ್ಲಿ ಎಣ್ಣೆಯಂತಹ ರಾಸಾಯನಿಕ ಕಂಡುಬಂದಾಗ, ಅಲ್ಲಿನ ಮನೆ ಮಾಲೀಕರಾದ ವಿವೇಕಾನಂದ, ಇಮ್ತಿಯಾಝ್ ಎಂಬವರು ಸೇರಿಕೊಂಡು ಮಂಗಳೂರಿನ ಕೆಎಂಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆಂದು ಕೊಂಡೊಯ್ದಿದ್ದರು. ಅಲ್ಲಿ ನೀರಿನಲ್ಲಿ ಬ್ಯಾಕ್ಟೀರಿಯಾಗಳಿದ್ದು, ಕುಡಿಯುವುದು ಅಪಾಯಕಾರಿ ಎಂದು ವರದಿಯನ್ನು ನೀಡಿದ್ದರು. ಆ ಬಳಿಕ ಪರಿಸರದ 7 ರಷ್ಟು ಮನೆಮಂದಿಗೆ ಕುಡಿಯಲು ನೀರಿಗೆ ಪರದಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಮನೆಯನ್ನೇ ತೊರೆದರು:

ಕಟ್ಟಡ ಆರಂಭದ ಬಳಿಕ ಬಾವಿಯಲ್ಲಿನ ನೀರು ಹದಗೆಟ್ಟು, ಸಹೋದರಿಗೆ ಚರ್ಮರೋಗ ಕಾಣಿಸಲು ಆರಂಭವಾಯಿತು. ಇದರಿಂದ ಮುಂದೆ ಅಲ್ಲೇ ಇರುವುದರಿಂದ ಎಲ್ಲರಲ್ಲೂ ರೋಗ ಉಲ್ಬಣಿಸಬಹುದು ಮತ್ತು ಕುಡಿಯಲು ಸರಿಯಾದ ನೀರಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ಮನೆಯನ್ನು ತೊರೆದು ಕೆಲ ಸಮಯಗಳಿಂದ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದೇವೆ ಎಂದು ಸ್ಥಳೀಯ ಇಮ್ತಿಯಾಝ್ ತಿಳಿಸಿದ್ದಾರೆ.

ಲಕ್ಷ ಕೊಟ್ಟರೂ ನೀರು ಕುಡಿಯಲಾಗಲಿಲ್ಲ:

ಬಾವಿ ಅಗೆದು ಸಮಯವಾಗಿದ್ದರೂ, ಮತ್ತೆ ದುರಸ್ತಿಗೆಂದು 1.5 ಲಕ್ಷದಷ್ಟು ಖರ್ಚು ಮಾಡಿದೆ. ಆದರೆ ದುರಸ್ತಿ ಕಾರ್ಯ ನಡೆಸಿ ಕೆಲವೇ ಸಮಯದಲ್ಲಿ ನೀರಿನಲ್ಲಿ ದುರ್ವಾಸನೆ ಬರಲು ಆರಂಭವಾಯಿತು. ಬಳಿಕ ಪರೀಕ್ಷೆಗೆ ಕೊಂಡೊಯ್ದಾಗ ನೀರು ಮಲಿನಗೊಂಡಿರುವುದು ಸ್ಪಷ್ಟವಾಯಿತು. ಲಕ್ಷದಷ್ಟು ಸಾಲ ಮಾಡಿ ಖರ್ಚು ಮಾಡಿದರೂ ಬಾವಿ ನೀರು ಮಾತ್ರ ಕುಡಿಯಲು ಆಗಲಿಲ್ಲ. ಹೊಂಡದಲ್ಲಿ ಶೇಖರಿಸುವ ತ್ಯಾಜ್ಯನೀರು ಮನೆಯಂಗಳದಲ್ಲಿಯೂ ಹರಿಯುವುದರಿಂದ ಸಂಜೆಯಾಗುತ್ತಿದ್ದಂತೆ ಸೊಳ್ಳೆ ಕಾಟ, ಮನೆಯಿಡೀ ದುರ್ನಾತದಿಂದ ಕೂಡಿರುತ್ತದೆ ಎಂದು ಸ್ಥಳೀಯ ವಿವೇಕಾನಂದ ಅವರು ಆರೋಪಿಸಿದ್ದಾರೆ.

ದೂರು ನೀಡಿದರೂ ಸ್ಪಂದನೆಯಿಲ್ಲ:

ಪರಿಸರದಲ್ಲಿ ದುರ್ವಾಸನೆ ಬರಲು ಆರಂಭವಾದಾಗ ಸ್ಥಳೀಯರೆಲ್ಲರೂ ವಸತಿ ಸಂಕೀರ್ಣದ ಮಾಲೀಕ ಬಶೀರ್ ಅವರನ್ನು ಭೇಟಿಯಾಗಿ ದೂರು ನೀಡಿದ್ದರು. ಆದರೆ ತನ್ನ ಜಾಗದಲ್ಲಿ ತಾನು ಏನನ್ನೂ ಮಾಡುತ್ತೇನೆ ಎಂದು ಉಡಾಫೆಯಿಂದ ವರ್ತಿಸಿದ ಮಾಲೀಕನ ಬೇಜವಾಬ್ದಾರಿ ಹೇಳಿಕೆಯಿಂದ ವಾಪಸ್ಸಾಗಿದ್ದ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಅಲ್ಲಿ ಉಳ್ಳಾಲ ನಗರಸಭೆ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಲು ಸೂಚಿಸುವುದಾಗಿ ತಿಳಿಸಿದ್ದರು. ಅದರಂತೆ ಉಳ್ಳಾಲ ನಗರಸಭೆಯಿಂದ ಅಧಿಕಾರಿಯೊಬ್ಬರು ಸ್ಥಳ ಪರಿಶೀಲನೆ ನಡೆಸಿ ಒಂದು ವಾರವಾದರೂ ಈವರಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಸ್ಥಳೀಯರದ್ದಾಗಿದೆ.

ನಿಯಮ ಉಲ್ಲಂಘನೆ:

ಮೂರು ಅಂತಸ್ತಿನ ಕಟ್ಟಡಕ್ಕೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆಗಳಿಲ್ಲ. ಅಲ್ಲದೆ ಈ ಹಿಂದೆ ಎರಡು ಅಂತಸ್ತುಗಳಿರುವಾಗಲೂ ಸರಿಯಾದ ಚರಂಡಿ ವ್ಯವಸ್ಥೆಗಳಾಗಲಿ ಇಲ್ಲದೇ ಇದ್ದರೂ ಮತ್ತೊಂದು ಅಂತಸ್ತು ಕಟ್ಟಲು ಅನುಮತಿ ನೀಡಿರುವುದರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version