UN NETWORKS
ಅಸೈಗೋಳಿ: ಬಂಟರು ಮೂಲತಃ ಕೃಷಿಕ ಮನೆತನವಾಗಿದ್ದರೂ ಹಂತ ಹಂತವಾಗಿ ಎಲ್ಲ ರಂಗದಲ್ಲಿ ಸಾಧನೆಗೈಯುತ್ತಾ ಮುಂಚೂಣಿಯಲ್ಲಿದ್ದಾರೆ. ಹಾಗಾಗಿ ಬಂಟ ಸಮಾಜಕ್ಕೆ ದೇಶ ವಿದೇಶದಲ್ಲಿ ಉತ್ತಮ ಹೆಸರು ಪ್ರಾಪ್ತವಾಗಿದೆ. ಅದು ಶಾಶ್ವತವಾಗಿ ಉಳಿಯಬೇಕಾದರೆ ಬಂಟ ಸಮಾಜದ ಪ್ರತಿಯೊಬ್ಬರು ಶೈಕ್ಷಣಿಕವಾಗಿ ಪ್ರಗತಿ ಕಾಣಬೇಕು.ಹಾಗೆಯೇ ತಲೆತಲಾಂತರದಿಂದ ಪಾಲಿಸಿಕೊಂಡು ಬಂದಿರುವ ಉತ್ತಮ ಸಂಪ್ರದಾಯ ಮುರಿಯದೆ ಮುಂದುವರಿಸಬೇಕು. ನಾವು ಎಷ್ಟೇ ಶ್ರೀಮಂತಿಕೆ ಹೊಂದಿದರೂ ನಮ್ಮ ಭವಿಷ್ಯವನ್ನು ರೂಪಿಸಿದ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ ನಮ್ಮದಾದ ಸಂಸ್ಕಾರ ಸಂಸ್ಕೃತಿ ಸಂಪ್ರದಾಯ ಶಾಶ್ವತವಾಗಿ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮದು ಎಂದು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ ಅಭಿಪ್ರಾಯಪಟ್ಟರು.
ನಾಮಪಲಕ ಅನಾವರಣ ಮಾಡಿದ ಮಂಗಳೂರಿನ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಬಂಟರ ಸಂಘ ಸತ್ಸಂಗ. ಬಂಟ ಸಮಾಜ ಬಾಂಧವರು ಸಮಾಜದ ಎಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ಬಂಟ ಸಮಾಜ ಮಾತೃ ಸಂಘದಿಂದ ಮುಂದಿನ ದಿನಗಳಲ್ಲಿ ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿದ್ದು ಬಂಟ ಸಮಾಜ ಬಾಂಧವರು ಧನ ಸಹಾಯದ ಜೊತೆಗೆ ಮಾನಸಿಕವಾದ ಸಹಾಯವನ್ನು ನೀಡಬೇಕು ಎಂದು ಹೇಳಿದರು.
ಭೋಜನ ಶಾಲೆ ಉದ್ಘಾಟಿಸಿದ ಆ್ಯಡ್‍ಲ್ಯಾಬ್ಸ್ ಆಡಳಿತ ನಿರ್ದೇಶಕ ಮನಮೋಹನ್ ಶೆಟ್ಟಿ ಮಾತನಾಡಿ ನೂತನ ಭವನ ಕ್ಷಿಪ್ರಗತಿಯಲ್ಲಿ ನಿರ್ಮಾಣಗೊಂಡು ಉದ್ಘಾಟನೆ ಭಾಗ್ಯ ಕಂಡಿದ್ದು ನಿಜಕ್ಕೂ ಸಮಾಜ ಬಾಂಧವರ ಒಗ್ಗಟ್ಟು ಬಿಂಬಿಸಿದೆ ಎಂದರು.ಮಂಗಳೂರಿನ ಶ್ರೀ ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಬಂಟೋತ್ಸವಕ್ಕೆ ಚಾಲನೆ ನೀಡಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಬಂಟರ ಸಂಘ ಉಳ್ಳಾಲ ವಲಯದ ಲಾಂಛನ ಬಿಡುಗಡೆಗೊಳಿಸಿದರು.
ಬಂಟರ ಭವನ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ವಿವೇಕ್ ಶೆಟ್ಟಿ ಬೊಲ್ಯಗುತ್ತು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಯುಎಇ ಎಕ್ಸ್‍ಚೇಂಜ್ ಅಧ್ಯಕ್ಷ ಸುಧೀರ್ ಶೆಟ್ಟಿ, ಪುಣೆ ಹೋಟೆಲ್ ಉದ್ಯಮಿ ಪದ್ಮನಾಭ ಶೆಟ್ಟಿ, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಹಾಗೂ ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೌಕತ್ ಅಲಿ ಉಪಸ್ಥಿತರಿದ್ದರು.
ಬಂಟರ ಸಂಘ ಉಳ್ಳಾಲ ವಲಯ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನವನೀತ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರೂಪಿಸಿದರು. ಕಟ್ಟಡ ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರವೀಂದ್ರ ರೈ ಹರೇಕಳ ವಂದಿಸಿದರು.
ಬಳಿಕ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮ ನಡೆಯಿತು.
ದೇಶದಲ್ಲಿಯೇ ಅಪರೂಪದ ಕಟ್ಟಡ ಬಂಟರ ಭವನ ಅಸೈಗೋಳಿಯಲ್ಲಿ ನಿರ್ಮಾಣವಾಗಿದೆ. ಭವನ ಸಾರ್ಥಕ್ಯ ಮೂಡಿಸಿದೆ. ಇನ್ನುಳಿದಂತೆ ಮಕ್ಕಳು ಪೋಷಕರು ಹೇಳಿದ ಮಾತು ಕೇಳದಿದ್ದರೂ ಮಾಡಿದ ಕಾರ್ಯ ನೋಡಿ ಕಲಿಯುವುದರಿಂದ ನಮ್ಮ ನಡೆ ನುಡಿ ಸಂಸ್ಕಾರ ಮಕ್ಕಳ ಮನಸ್ಸಿಗೆ ಹಿಡಿಸುವಂತಿರಬೇಕು. ನನ್ನ ಬದುಕಿನುದ್ದಕ್ಕೂ ಊರಿನ ಅತಿ ಶ್ರೇಷ್ಠ ಗಣ್ಯರೇ ಆಗದ್ದರೂ ಮಾತೃಭಾಷೆ ತುಳುವಿನಲ್ಲಿ ಮಾತನಾಡುವ ಸಂಸ್ಕಾರ ಇಂದಿಗೂ ಉಳಿಸಿಕೊಂಡಿದ್ದೇನೆ. ತುಳುವಿಗೆ ಪ್ರಾಧಾನ್ಯತೆ ನೀಡಿದ ಬಳಿಕವೇ ಹಿಂದಿ, ಇಂಗ್ಲಿಷ್ ಮಾತನಾಡುವ ಪರಿಪಾಠ ಬೆಳೆಸಿಕೊಂಡಿದ್ದೇನೆ. ನಮ್ಮ ಸಮಾಜ ಬಾಂಧವರು ಮಾತೃಭಾಷೆ ಸಂಸ್ಕಾರ ಸಂಸ್ಕೃತಿ ಯಾವತ್ತೂ ಮರೆಯಬಾರದು.
ಸುನಿಲ್ ಶೆಟ್ಟಿ
ಬಾಲಿವುಡ್ ನಟ
ಉಳ್ಳಾಲ ಕ್ಷೇತ್ರ ಶೈಕ್ಷಣಿಕವಾಗಿ ಕಂಡ ಪ್ರಗತಿಯನ್ನು ಗಮನಿಸಿದಾಗ ಇದು ಸರಸ್ವತಿ ಮಂದಿರ. ಈ ಭಾಗದಲ್ಲಿಬಂಟ ಸಮಾಜದ ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗದಂತೆ ಬಂಟ ಸಮಾಜ ಬಾಂಧವರು ನೋಡಿಕೊಳ್ಳಬೇಕು. ಧನ ಸಹಾಯ ಮಾಡುವುದರಿಂದ ಸ್ವಲ್ಪ ಸಮಸ್ಯೆ ಪರಿಹಾರವಾಗಬಹುದು. ಆದರೆ ಅಶಕ್ತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುವಂತಹ ಕಾರ್ಯಕ್ರಮ ಬಂಟರ ಸಂಘ ಉಳ್ಳಾಲ ವಲಯದಿಂದ ನಡೆದರೆ ಅದು ಶಾಶ್ವತವಾದ ಕೀರ್ತಿ ತರಲಿದೆ.
ವಿವೇಕ್ ಶೆಟ್ಟಿ ಬೊಲ್ಯಗುತ್ತು
ಬಂಟರ ಭವನ ನಿರ್ಮಾಣ ಸಮಿತಿ ಅಧ್ಯಕ್ಷರು