Site icon Ullalavani

ಪಿಲಾರು: ಪ್ರೀತಿ, ಭೀತಿ, ನೀತಿಗಳಿರುವೆಡೆ ದೇವರ ಸಂರಕ್ಷಣೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಪ್ರೀತಿ, ಭೀತಿ, ನೀತಿ ಮೂರು `ತಿ’ಗಳು ಇರುವಲ್ಲಿ ದೇವರು ಭಕ್ತರನ್ನು ಸಂರಕ್ಷಣೆ ಮಾಡುತ್ತಾರೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಕೆ.ಲಕ್ಷ್ಮೀನಾರಾಯಣ ಅಸ್ರಣ್ಣ ಹೇಳಿದರು.

ಅವರು ಪಿಲಾರು ಲಕ್ಷ್ಮೀಗುಡ್ಡೆಯ ಶ್ರೀ ನಾಗಬ್ರಹ್ಮ ಕ್ಷೇತ್ರದಲ್ಲಿ ಭಾನುವಾರ ಜರಗಿದ ಶ್ರೀನಾಗಬ್ರಹ್ಮ ದೇವರ ಮತ್ತು ರಕ್ತೇಶ್ವರಿಯ 6 ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು.

ಕೆತ್ತಿದ ಶಿಲೆಗಳಲ್ಲಿ ದೇವರು ಇರುವುದಿಲ್ಲ. ಆದರೆ ಮೂರು`ತಿ’ಗಳನ್ನು ಜೀವನದಲ್ಲಿ ಅಳವಡಿಸಿದಲ್ಲಿ ದೇವರನ್ನು ಕಾಣಲು ಸಾಧ್ಯ. ದೇವರ ಮೇಲೆ ವಿಶ್ವಾಸ ಇಟ್ಟವರೆಂದರೆ ಆ ಊರಿನ ಜನರು ಸಜ್ಜನರೆಂದು ಅರ್ಥ. ನಂಬಿಕೆ, ವಿಶ್ವಾಸಗಳಿರುವ ಕಡೆಗಳಲ್ಲಿ ದೇವರ ಸಾನಿಧ್ಯ ಇರುತ್ತದೆ ಎಂದರು.

ಪೆರ್ಮನ್ನೂರು ನಿತ್ಯಾಧರ್ ಚರ್ಚಿನ ಧರ್ಮಗುರುಗಳಾದ ಫಾ. ಎಲಿಯಾಸ್ ಡಿಸೋಜಾ ಮಾತನಾಡಿ ಕರಾವಳಿ ಜಿಲ್ಲೆಯಲ್ಲಿ ನಾಗಾರಾಧನೆಗೆ ಹೆಚ್ಚಿನ ಮಹತ್ವ ಇದೆ. ಇಂತಹ ಧಾರ್ಮಿಕ ಆಚರಣೆಗಳ ಮೂಲಕ ಪ್ರತಿಯೊಬ್ಬರು ಶಾಂತಿ ಸಹಬಾಳ್ವೆಯಿಂದ ಬಾಳಬೇಕಿದೆ ಎಂದರು.

ಯೆನೆಪೋಯ ಗ್ರೂಪ್ ಮಂಗಳೂರಿನ ನಿರ್ದೇಶಕ ಎ.ರಾಮಚಂದ್ರ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಗೌರವಾಧ್ಯಕ್ಷರಾದ ಕೆ.ನಾರಾಯಣ ಭಟ್, ಅಧ್ಯಕ್ಷ ಸಂಜೀವ ಗಟ್ಟಿ ಮೇಸ್ತ್ರಿ ಉಪಸ್ಥಿತರಿದ್ದರು.

ಕಾರ್ಯಾಧ್ಯಕ್ಷ ಸಂಜೀವ ಪಿಲಾರ್ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಹಾಸ್ ಪಿಲಾರ್ ವಂದಿಸಿದರು.

Exit mobile version