UN NETWORKS
ಹರೇಕಳ : ಕ್ಷೇತ್ರದ ಉದ್ದಗಲಕ್ಕೂ ಪ್ರತಿಯೊಂದು ಬೂತ್ ಮಟ್ಟದ ಕಾರ್ಯಕರ್ತರು ಸ್ಥಳೀಯ ಸಂಸ್ಥೆಯ ಸದಸ್ಯರು ಹಾಗೂ ಹಿತೈಷಿಗಳು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಹಗಲಿರುಳು ಕಾಂಗ್ರೆಸ್ ಪಕ್ಷ ಮತ್ತು ಯು.ಟಿ.ಖಾದರ್ ಅವರ ಪರವಾಗಿ ದುಡಿಯುತ್ತಿರುವುದು ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವನ್ನು ಖಚಿತಗೊಳಿಸಿದೆ ಎಂದು ಹರೇಕಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೆಬ್ಬೇಲಿ ಮಹಾಬಲ ಹೆಗ್ಡೆ ಅಭಿಪ್ರಾಯಪಟ್ಟರು.
ಕಳೆದ ಆವಧಿಯಲ್ಲಿ ಶಾಸಕರಾಗಿ ಮತ್ತು ರಾಜ್ಯದ ಸಚಿವರಾಗಿ ಆರೋಗ್ಯ ಮತ್ತು ಆಹಾರ ಇಲಾಖೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿ ಹಲವಾರು ಜನೋಪಯೋಗಿ ವಿನೂತನವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಗೆ ಪಾತ್ರರಾಗಿದ್ದು, ರಾಜ್ಯದ ಉದ್ದಗಲಕ್ಕೂ ತಮ್ಮ ಉತ್ತಮವಾದ ಹೆಸರನ್ನು ಮೂಡಿಸಿದ್ದಾರೆ.
ರಾಷ್ಟ್ರಮಟ್ಟದ ಗಮನಸೆಳೆದ ಖಾತೆ : ಆರೋಗ್ಯ ಸಚಿವರಾಗಿದ್ದಾಗ ಎಂಡೋಸಂತ್ರಸ್ಥರಿಗೆ ಪ್ಯಾಕೇಜ್, ಆರೋಗ್ಯಶ್ರೀ ಯೋಜನೆ, ಬೈಕ್ ಆ್ಯಂಬುಲೆನ್ಸ್ ತುರ್ತು ಅಪಘಾತಕ್ಕೆ 25 ಸಾವಿರದ ಹರೀಶ್ ಸಾಂತ್ವಾನ ಯೋಜನೆ ಮುಂತಾದ ಯೋಜನೆಗಳ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದ ಅವರು ಆಹಾರ ಇಲಾಖೆಯಲ್ಲಿ ತ್ವರಿತ ಗತಿಯಲ್ಲಿ ರೇಷನ್ ಕಾರ್ಡ್ ವಿತರಣೆ, ಸುಮಾರು 8 ಲಕ್ಷ ಬೋಗಸ್ ಕಾರ್ಡ್ ಪತ್ತೆ ಹಚ್ಚುವ ಮೂಲಕ ಆಹಾರ ಸೋರಿಕೆಯನ್ನು ತಡೆಗಟ್ಟಿದ್ದಾರೆ. ನ್ಯಾಯಬೆಲೆಯಲ್ಲಿ ತೊಗರಿ ಬೇಳೆಯನ್ನು ನೀಡುವ ಕಾರ್ಯದೊಂದಿಗೆ ನ್ಯಾಯಬೆಲೆ ಅಂಗಡಿಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಪಾರದರ್ಶಕತೆ ಮತ್ತು ಖಾತ್ರಿಯನ್ನು ನೀಡಿದ್ದು, ರೇಷನ್ ಕಾರ್ಡ್ ಹೊಂದಿದ ಕುಟುಂಬ ಕರ್ನಾಟಕ ರಾಜ್ಯದ ಯಾವ ಮೂಲೆಯ ನ್ಯಾಯಬೆಲೆ ಅಂಗಡಿಯಲ್ಲಿಯೂ ಆಹಾರ ಪದಾರ್ಥ ಪಡೆಯುವ ಕ್ರಾಂತಿಕಾರಿ ಯೋಜನೆಯನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಜಾರಿಗೆ ತಂದಿರುವುದು ಇವರ ಹೆಗ್ಗಳಿಕೆಯಲ್ಲಿ ಒಂದು ಎಂದರು.
ಸೌಹಾರ್ದತೆಯ ಕೊಂಡಿ : ಕ್ಷೇತ್ರದಲ್ಲಿ ವ್ಯಾಪಕವಾದ ಅಭಿವೃದ್ಧಿ ಕೆಲಸ , ಸುಸಜ್ಜಿತ ಆಸ್ಪತ್ರೆ,ಮೀನುಗಾರಿಕೆ ಜೆಟ್ಟಿ, ಕಡಲ್ಕೊರೆತಕ್ಕೆ ಶಾಶ್ವತವಾದ ಕಾಮಗಾರಿಯೊಂದಿಗೆ ಸರ್ವಧರ್ಮದ ಕ್ಷೇತ್ರಗಳಿಗೆ, ಸರ್ವ ಜಾತಿಯ ಸಮುದಾಯ ಭವನಗಳಿಗೆ ಅನುದಾನ ಬಿಡುಗಡೆ ,ಸರ್ವ ಧರ್ಮದ ಜೊತೆ ಬೆರೆತುಕೊಂಡು ಕ್ಷೇತ್ರದಲ್ಲಿ ಸೌಹಾರ್ಧತೆಯ ಕೊಂಡಿಯಾದ್ದು, ಚುನಾವಣೆ ದಿನ ಘೋಷಣೆಯಾದ ಬಳಿಕ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರದ ಸಂದರ್ಭದಲ್ಲಿ ಸರ್ವಧರ್ಮದವರೂ ಆಶೀರ್ವದಿಸಿ, ಬೆಂಬಲಿಸಿ ಪ್ರೋತ್ಸಾಹಿಸುತ್ತಿದ್ದು, ಹಿರಿಯರೊಂದಿಗೆ ಯುವ ಜನಾಂಗ ಖಾದರ್ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಐಸಿಸಿ ಮಾಧ್ಯಮ ವಕ್ತಾರ ಜೈವೀರ್ ಶೆರ್ಗಿಲ್ , ಅಭ್ಯರ್ಥಿ ಯು.ಟಿ. ಖಾದರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಉಪಾಧ್ಯಕ್ಷ ಮಹಮ್ಮದ್ ಮುಸ್ತಾಫ ಹರೇಕಳ, ಪ್ರ. ಕಾರ್ಯದರ್ಶಿ ರಹಿಮಾನ್ ಕೋಡಿಜಾಲ್, ತಾ. ಫಂ. ಅಧ್ಯಕ್ಷ ಮಹಮ್ಮದ್ ಮೋನು, ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಡಿ.ಸೋಜ, ಹರೇಕಳ ಗ್ರಾಮ ಸಮಿತಿ ಅಧ್ಯಕ್ಷ ಬದ್ರುದ್ದಿನ್, ಡಿಸಿಸಿ ಸದಸ್ಯ ಶ್ರೀನಿವಾಸ ಶೆಟ್ಟಿ, ಮುಖಂಡರಾದ ಸಿ.ಎಂ. ರವೂಫ ಪದ್ಮನಾಭ ಗಟ್ಟಿ, ಇಸಲೀಂ ಮೇಘ, ಇಸ್ಮಾಯಿಲ್ ಸಾಮಾನಿಗೆ, ಝಕಾರಿಯಾ ಮಲಾರ್, ಎ.ಸಿ. ವಿನಯರಾಜ್ , ಬಶೀರ್ ಉಂಬುದ, ಸತ್ತಾರ್ ಬಾವಲಿಗುರಿ, ಮಜೀದ್ ಆಲಡ್ಕ ಮತ್ತಿತರರು ಉಪಸ್ಥಿತರಿದ್ದರು.