Site icon Ullalavani

ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ವತಿಯಿಂದ ಸ್ಮರಣ ಸಂಚಿಕೆ ಬಿಡುಗಡೆ

UN NETWORKS

ಉಳ್ಳಾಲ: ಉಳ್ಳಾಲಭಾಗದಲ್ಲಿ ಜಾತಿ ಧರ್ಮವನ್ನು ಬದಿಗಿಟ್ಟು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ಬೆನ್ನೆಲುಬಾಗಿ ನಿಂತ ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಶ್ಲಾಘನೀಯ ಎಂದು ಎಂದು ಸೈಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು.

ಅವರು ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಇದರ ಐದು ವರ್ಷ ಪೂರೈಸಿದ ಅಂಗವಾಗಿ ಬಾಂಧವ್ಯ ಅನ್ನುವ ಸ್ಮರಣ ಸಂಚಿಕೆಯನ್ನು ಇತ್ತೀಚೆಗೆ ಮಾಸ್ತಿಕಟ್ಟೆಯ ಕಚೇರಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.

ಶಿಕ್ಷಣ, ಆರೋಗ್ಯ, ಹಿಂದುಳಿದವರ ಅಭಿವೃದ್ಧಿಯ ಉದ್ದೇಶವನ್ನಿಟ್ಟುಕೊಂಡು ಕಾರ್ಯಾಚರಿಸುತ್ತಿರುವ ಟ್ರಸ್ಟ್ ಐದು ವರ್ಷಗಳಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಸಮಾಜಕ್ಕೆ ಪೂರಕವಾಗಿದೆ. ಉಳ್ಳಾಲ ಭಾಗದಲ್ಲಿ ಇಂತಹ ಸಾಮರಸ್ಯಕ್ಕೆ ಪೂರಕವಾಗಿ ಕಾರ್ಯಾಚರಿಸುತ್ತಿರುವ ಟ್ರಸ್ಟ್ ಇನ್ನಷ್ಟು ಜನರ ಬಾಳಿಗೆ ಬೆಳಕಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಇದರ ಅಧ್ಯಕ್ಷ ಅನ್ವರ್ ಹುಸೈನ್ ಮಾತನಾಡಿ ಐದು ವರ್ಷಗಳಿಂದ ಜನತೆಗೆ ಆಶಾಕಿರಣವಾಗಿ ಟ್ರಸ್ಟ್ ಸ್ಪಂಧಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿಯೂ ಶೈಕ್ಷಣಿಕ, ಆರೋಗ್ಯಕ್ಕೆ ಸಂಬಂಧಿಸಿ ಟ್ರಸ್ಟ್ ಹೆಚ್ಚಿನ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲಿದೆ ಎಂದರು.

ಈ ಸಂದರ್ಭ ಸ್ಮರಣ ಸಂಚಿಕೆಯ ಸಂಪಾದಕೀಯ ಮಂಡಳಿಯ ಅಬ್ದುಲ್ ಖಾದರ್, ಬ್ಯಾರಿ ಅಕಾಡೆಮಿಯ ರಿಜಿಸ್ಟ್ರಾರ್ ಎಸ್.ಉಮರಬ್ಬ, ಅಳೇಕಲ ಮದನಿ ಜ್ಯೂನಿಯರ್ ಕಾಲೇಜಿನ ಪ್ರಾಧ್ಯಾಪಕ ಇಸ್ಮಾಯಿಲ್.ಟಿ, ಹಳೇಕೋಟೆ ಸೈಯ್ಯಿದ್ ಮದನಿ ಶಾಲೆಯ ಮುಖ್ಯೋಪಾಧ್ಯಾಯ ಕೆ.ಎಂ.ಕೆ ಮಂಜನಾಡಿ, ಕೋಟೆಪುರ ಟಿಪ್ಪು ಸುಲ್ತಾನ್ ಶಾಲೆಯ ಎಂ.ಎಚ್.ಮಲಾರ್ ಇವರನ್ನು ಸನ್ಮಾನಿಸಲಾಯಿತು.

ಟ್ರಸ್ಟ್ ಲೆಕ್ಕಪರಿಶೋಧಕ ಅಹಮ್ಮದ್ ಬಾವ ಕೊಟ್ಟಾರ ಉಪಸ್ಥಿತರಿದ್ದರು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಯು.ಕೆ.ಮುಹಮ್ಮದ್ ಮುಸ್ತಾಫ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

Exit mobile version